ಕನ್ನಡಪ್ರಭ ವಾರ್ತೆ ಹಾಸನ
ಪ್ರತಿಭಟನೆಯು ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟು ಎನ್. ಆರ್. ವೃತ್ತದಲ್ಲಿ ಕೆಲ ಸಮಯ ಮಾನವ ಸರಪಳಿ ನಿರ್ಮಿಸಿ ನಂತರ ಬಿ. ಎಂ. ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದಾಗ ಬ್ಯಾರಿಕೇಡ್ ಹಾಕಿ ಪೊಲೀಸರು ತಡೆದರು. ಪ್ರತಿಭಟನೆಯ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ (ಎಡಿಸಿ) ಅವರಿಗೆ ಮನವಿ ಸಲ್ಲಿಸಲು ಅಧಿಕಾರಿಗಳು ಮುಂದಾದರೂ, ಇದಕ್ಕೆ ಪ್ರತಿಭಟನಾಕಾರರು ಒಪ್ಪಲಿಲ್ಲ. ಜಿಲ್ಲಾಧಿಕಾರಿ ಅವರೇ ಖುದ್ದಾಗಿ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಬೇಕು ಎಂದು ಜೆಡಿಎಸ್ ಮುಖಂಡರು ಪಟ್ಟು ಹಿಡಿದರು. ಜಿಲ್ಲಾಧಿಕಾರಿ ಕೆ. ಎಸ್. ಲತಾಕುಮಾರಿ ಅವರು ಕಚೇರಿಯಲ್ಲೇ ಇದ್ದರೂ, ಮನವಿ ಸ್ವೀಕರಿಸಲು ಅವರೇ ಆಗಮಿಸಬೇಕು ಎಂಬ ಬೇಡಿಕೆಯಿಂದ ಪ್ರತಿಭಟನಾಕಾರರು ಹಿಂದೆ ಸರಿಯಲಿಲ್ಲ.
ಮನವಿ ಸ್ವೀಕರಿಸಲು ಜಿಲ್ಲಾಧಿಕಾರಿಗಳೇ ಬರಬೇಕೆಂದು ನೂರಾರು ಜೆಡಿಎಸ್ ಕಾರ್ಯಕರ್ತರು, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಮುಖಂಡರು ಜಿಲ್ಲಾಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಜೆಡಿಎಸ್ ಕಾರ್ಯಕರ್ತರು, ಕೆಲಕಾಲ ರಸ್ತೆ ತಡೆ ನಡೆಸಿ ಪ್ರತಿಭಟನೆ ಮುಂದುವರಿಸಿದರು. ಈ ವೇಳೆ ಜಿಲ್ಲಾಧಿಕಾರಿ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಗ್ರಾಮ ಪಂಚಾಯಿತಿ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಸರಿಯಾಗಿ ಪಾಲಿಸಿಲ್ಲ ಎಂದು ಆರೋಪಿಸಿದರು.ಇದೇ ವೇಳೆ ಮಾಜಿ ಸಚಿವ ಎಚ್. ಕೆ. ಕುಮಾರಸ್ವಾಮಿ ಮತ್ತು ಮಾಜಿ ಶಾಸಕ ಕೆ. ಎಸ್. ಲಿಂಗೇಶ್ ಮಾಧ್ಯಮದೊಂದಿಗೆ ಮಾತನಾಡಿ, ಗ್ರಾಮ ಪಂಚಾಯಿತಿ ಚುನಾವಣೆ ಅತ್ಯಂತ ಮಹತ್ವದ ಸ್ಥಳೀಯ ಸಂಸ್ಥೆಗಳ ಚುನಾವಣೆಯಾಗಿದ್ದು, ಮೀಸಲಾತಿ ನಿಗದಿ ಮಾಡುವ ಸಂದರ್ಭದಲ್ಲಿ ಸಾಮಾಜಿಕ ನ್ಯಾಯ ಮತ್ತು ಕಾನೂನುಬದ್ಧ ನಿಯಮಗಳನ್ನು ಪಾಲಿಸಬೇಕು. ಆದರೆ ಹಾಸನ ಜಿಲ್ಲೆಯಲ್ಲಿ ಮೀಸಲಾತಿ ನಿಗದಿ ಮಾಡುವ ಪ್ರಕ್ರಿಯೆಯಲ್ಲಿ ಅವೈಜ್ಞಾನಿಕ ಕ್ರಮ ಅನುಸರಿಸಲಾಗಿದೆ ಎಂದು ದೂರಿದರು. ನಿಗದಿಪಡಿಸಿರುವ ಮೀಸಲಾತಿಯಿಂದ ಹಲವೆಡೆ ಗೊಂದಲ ಉಂಟಾಗಿದ್ದು, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಗ್ರಾಮ ಪಂಚಾಯಿತಿ ಸದಸ್ಯರ ಆಕ್ಷೇಪಣೆಗಳಿಗೆ ಸೂಕ್ತ ಸ್ಪಂದನೆ ದೊರೆತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು. ಸರ್ಕಾರದ ಅಧಿಸೂಚನೆ ಮತ್ತು ನಿಗದಿತ ಮಾರ್ಗಸೂಚಿಗಳಿಗೆ ಅನುಗುಣವಾಗಿ ಮೀಸಲಾತಿ ನಿಗದಿ ಮಾಡಬೇಕೆಂದು ಅವರು ಒತ್ತಾಯಿಸಿದರು. ಸರ್ಕಾರ ಹಾಗೂ ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶಿಸಿ ಈಗಾಗಲೇ ನಿಗದಿಪಡಿಸಿರುವ ಗ್ರಾಮ ಪಂಚಾಯಿತಿ ಮೀಸಲಾತಿಯನ್ನು ರದ್ದುಪಡಿಸಬೇಕು ಎಂದು ಅವರು ಆಗ್ರಹಿಸಿದರು. ನಂತರ ಎಲ್ಲಾ ಗ್ರಾಮ ಪಂಚಾಯಿತಿ ಸ್ಥಾನಗಳ ಮೀಸಲಾತಿಯನ್ನು ಸರ್ಕಾರದ ನಿಯಮಾವಳಿ ಮತ್ತು ಅಧಿಸೂಚನೆಯಂತೆ ವೈಜ್ಞಾನಿಕವಾಗಿ ಮರುನಿಗದಿ ಮಾಡಬೇಕು. ಸ್ಥಳೀಯಸಂಸ್ಥೆಗಳ ಚುನಾವಣೆಯಲ್ಲಿ ಯಾವುದೇ ಸಮುದಾಯಕ್ಕೆ ಅಥವಾ ವರ್ಗಕ್ಕೆ ಅನ್ಯಾಯವಾಗದಂತೆ ಪಾರದರ್ಶಕವಾಗಿ ಪ್ರಕ್ರಿಯೆ ನಡೆಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.