ಕನ್ನಡಪ್ರಭ ವಾರ್ತೆ ತುಮಕೂರುಅಂದಿನಿಂದ ಇಂದಿನವರೆಗೂ ಜೆಡಿಎಸ್ ಕಾರ್ಯಕರ್ತರ ಪಕ್ಷವಾಗಿ ಉಳಿದು ಬೆಳೆದಿದೆ. ಇಲ್ಲಿ ಬೆಳೆದು ಉನ್ನತ ಸ್ಥಾನಕ್ಕೆ ಏರಿದವರು ಪಕ್ಷ ಬಿಟ್ಟುಹೋದರೂ ಕಾರ್ಯಕರ್ತರು ಪಕ್ಷದ ಶಕ್ತಿಯಾಗಿದ್ದಾರೆ. ಇಂತಹ ಕಾರ್ಯಕರ್ತರಿಗೆ ರಾಜಕೀಯ ಅಧಿಕಾರ ಸಿಗಬೇಕು ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಾರ್ಯಕರ್ತರಿಗೆ ಮನವಿ ಮಾಡಿದರು.ತಾಲೂಕಿನ ನಾಗವಲ್ಲಿಯಲ್ಲಿ ಶನಿವಾರ ನಡೆದ ತುಮಕೂರು ಗ್ರಾಮಾಂತರ ಕ್ಷೇತ್ರದ ಜನರೊಂದಿಗೆ ಪಕ್ಷದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಕಾಳಜಿಯಿಂದ ಕಟ್ಟಿದ ಜೆಡಿಎಸ್ 25 ವರ್ಷ ಪೂರೈಸಿದೆ. ಇದರ ಯಶಸ್ಸು ಕಾರ್ಯಕರ್ತರಿಗೆ ಸಲ್ಲಬೇಕು. ಎಂತಹ ಕಷ್ಟಕಾಲದಲ್ಲೂ ಕಾರ್ಯಕರ್ತರು ಪಕ್ಷವನ್ನು ಬಿಡದೆ ಬೆಂಬಲಿಸಿದ್ದಾರೆ. ಮುಂದೆ ರಾಜ್ಯದಲ್ಲಿ ಜನತಾ ಸರ್ಕಾರ ಅಧಿಕಾರಕ್ಕೆ ಬರಬೇಕು. ಈಗಿನಿಂದಲೇ ತಳಮಟ್ಟದಿಂದ ಪಕ್ಷ ಸಂಘಟಿಸಬೇಕು. ಜಿಲ್ಲೆಯಲ್ಲಿ ಈ ಹಿಂದೆ ವಿಧಾನಸಭಾ ಕ್ಷೇತ್ರಗಳಲ್ಲಿ 9 ಸ್ಥಾನಗಳನ್ನು ಗೆಲ್ಲಿಸಿ ತುಮಕೂರು ಜಿಲ್ಲೆ ಕೊಡುಗೆ ನೀಡಿದೆ ಅಂತಹ ಸುವರ್ಣ ಕಾಲ 2028 ಕ್ಕೆ ಮರುಕಳಿಸಬೇಕು ಎಂದು ವಿನಂತಿಸಿದರು.
ಪಕ್ಷ ಸಂಘಟನೆ, ಸದಸ್ಯತ್ವ ನೋಂದಣಿಗಾಗಿ ತಾವು ರಾಜ್ಯಾದ್ಯಂತ ಜನರೊಂದಿಗೆ ಜನತಾದಳ ಸಮಾವೇಶ ನಡೆಸುತ್ತಿದ್ದು, ಇದುವರೆಗೆ 54 ವಿಧಾನಸಭಾ ಕ್ಷೇತ್ರಗಳಲ್ಲಿ ಸಮಾವೇಶಗಳಾಗಿವೆ. ಈ ತಿಂಗಳ 27ರಂದು ವಿಜಯಪುರದಲ್ಲಿ ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳ ಸಮಾವೇಶ ಹಾಗೂ ಪಕ್ಷದ ಬೆಳ್ಳಿ ಹಬ್ಬ ಆಚರಣೆ ಹಮ್ಮಿಕೊಳ್ಳಲಾಗಿದೆ. ತುಮಕೂರು ಜಿಲ್ಲೆಯ 11 ಕ್ಷೇತ್ರಗಳು ಒಳಗೊಂಡ ಬೆಳ್ಳಿ ಹಬ್ಬ, ಸಮಾವೇಶ ಆಯೋಜಿಸಲು ಚರ್ಚೆ ನಡೆದಿದೆ ಎಂದರು.
ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿಯಿಲ್ಲ.....ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ, ಬದ್ಧತೆ ಇಲ್ಲ, ರೈತರ ಯಾವ ಸಮಸ್ಯೆಗಳಿಗೂ ಸ್ಪಂದಿಸುತ್ತಿಲ್ಲ. ಈ ಸರ್ಕಾರದ ಅವಧಿಯಲ್ಲಿ 2800 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಜಿಲ್ಲೆಯ 40 ಕ್ಕೂ ಹೆಚ್ಚು ರೈತರು ಜೀವ ಕಳೆದುಕೊಂಡಿದ್ದಾರೆ. ಅತಿವೃಷ್ಠಿ, ಅನಾವೃಷ್ಠಿಯಿಂದ ಸಂಕಷ್ಟದ ರೈತರಿಗೆ ಪರಿಹಾರ ನೀಡಿ, ಅವರಿಗೆ ಸ್ಪಂದಿಸುವ ಪ್ರಯತ್ನವನ್ನು ಈ ಸರ್ಕಾರ ಮಾಡಲಿಲ್ಲ ಎಂದು ಟೀಕಿಸಿದರು.ಸವರ್ಣ ಕಾಲ ಮರುಕಳಿಸಲಿಜಿಲ್ಲಾ ಜೆಡಿಎಸ್ ಅಧ್ಯಕ್ಷ, ಮಾಜಿ ಶಾಸಕ ಎಚ್.ನಿಂಗಪ್ಪ ಮಾತನಾಡಿ, ಹಿಂದೆ ನಾನು 10 ವರ್ಷ ಪಕ್ಷದ ಅಧ್ಯಕ್ಷನಾಗಿ ಕೆಲಸ ಮಾಡಿದ್ದೆ, ದೇವೇಗೌಡರು, ಕುಮಾರಸ್ವಾಮಿಯವರು ನನ್ನ ಮೇಲೆ ವಿಶ್ವಾಸವಿಟ್ಟು ಮತ್ತೊಮ್ಮೆ ಅಧ್ಯಕ್ಷನಾಗುವ ಅವಕಾಶ ನೀಡಿದ್ದಾರೆ ಎಂದರು. ವಿಧಾನ ಪರಿಷತ್ ಮಾಜಿ ಸದಸ್ಯ ತಿಪ್ಪೇಸ್ವಾಮಿ, ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ, ಜಿಲ್ಲಾ ಜೆಡಿಎಸ್ ಮಾಜಿ ಅಧ್ಯಕ್ಷ ಆರ್.ಸಿ.ಆಂಜನಪ್ಪ, ತಾಲೂಕು ಅಧ್ಯಕ್ಷ ರಾಮಣ್ಣ, ಮುಖಂಡರಾದ ಗುಬ್ಬಿ ನಾಗರಾಜು, ಕೆ.ಟಿ.ಶಾಂತಕುಮಾರ್, ಡಾ.ರವಿ ನಾಗರಾಜಯ್ಯ, ಉಗ್ರೇಶ್, ನರಸಿಂಹರಾಜು, ಟಿ.ಎಲ್.ಕುಂಭಯ್ಯ, ಟಿ.ಆರ್.ನಾಗರಾಜು, ಸೋಲಾರ್ ಕೃಷ್ಣಮೂರ್ತಿ, ಮೋಹನ್‌ಕುಮಾರ್, ಧರಣೇಂದ್ರಕುಮಾರ್, ಹೆಚ್‌ಡಿಕೆ ಮಂಜುನಾಥ್, ಗಂಗಣ್ಣ, ವಿಜಯ್‌ಗೌಡ, ಬೆಳಗುಂಬ ವೆಂಕಟೇಶ್, ತಿಮ್ಮಪ್ಪಗೌಡರು, ಯೋಗಾನಂದಕುಮಾರ್, ಗೂಳೂರು ನವೀನ್, ಲೀಲಾವತಿ, ಹನುಮಂತರಾಯಪ್ಪ ಮೊದಲಾದವರು ಭಾಗವಹಿಸಿದ್ದರು.