ಕನ್ನಡಪ್ರಭ ವಾರ್ತೆ ಮದ್ದೂರು
ಜಿಲ್ಲೆಯ ಗಡಿಭಾಗದ ನಿಡಘಟ್ಟ ಬಳಿಗೆ ಬೆಳಗ್ಗೆ 10 ಗಂಟೆಗೆ ಆಗಮಿಸಿದ ನಿಖಿಲ್‌ಗೆ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಮಾಜಿ ಶಾಸಕ ಡಾ.ಅನ್ನದಾನಿ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಕಾರ್ಯಾಧ್ಯಕ್ಷ ಮಾದನಾಯಕನಹಳ್ಳಿ ರಾಜಣ್ಣ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಮುಖಂಡರು ಸೇರಿದಂತೆ ಅಸಂಖ್ಯಾತ ಕಾರ್ಯಕರ್ತರು ಮಾಲಾರ್ಪಣೆ ಮಾಡಿ ಬರಮಾಡಿಕೊಂಡರು.
ನಂತರ ರುದ್ರಾಕ್ಷಿ ಪುರ, ಸೋಮನಹಳ್ಳಿ ಹಾಗೂ ಕೆಸ್ತೂರು ಕ್ರಾಸ್ ಬಳಿ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿಳಿಯಪ್ಪ, ಮುಖಂಡ ಕೆ.ಟಿ.ರಾಜಣ್ಣ ಒಳಗೊಂಡಂತೆ ಆತಗೂರು ಹೋಬಳಿಯ ಕಾರ್ಯಕರ್ತರು ನಿಖಿಲ್‌ಗೆ ಮಾಲಾರ್ಪಣೆ ಮಾಡಿ ಸ್ವಾಗತಿಸಿದರು.ನಂತರ ಕಾರ್ಯಕರ್ತರು ಯುವ ಮೋರ್ಚಾ ಅಧ್ಯಕ್ಷ ನಿಖಿಲ್, ಮಾಜಿ ಸಚಿವ ತಮ್ಮಣ್ಣ ಅವರನ್ನು ಬೈಕ್ ರ‍್ಯಾಲಿ ಮೂಲಕ ಶಿವಪುರ, ಮದ್ದೂರಿನ ಪೇಟೆ ಬೀದಿ ಮೂಲಕ ಮೆರವಣಿಗೆಯಲ್ಲಿ ಕರೆತಂದರು. ಬಳಿಕ ಸಂಜಯ ಚಿತ್ರಮಂದಿರದ ಬಳಿಯಿಂದ ಪ್ರವಾಸಿ ಮಂದಿರದ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದ ವರೆಗೆ ಜಾನಪದ ಕಲಾತಂಡಗಳ ಆಕರ್ಷಕ ಪ್ರದರ್ಶನದೊಂದಿಗೆ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಜೆಡಿಎಸ್ ಯುವ ಮೋರ್ಚಾ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಡಿಜಿಟಲ್ ಸದಸ್ಯತ್ವ ನೋಂದಣಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ನೋಂದಣಿಯಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಹೊಸದಾಗಿ ಸದಸ್ಯರನ್ನು ನೋಂದಣಿ ಮಾಡಿಕೊಂಡು ಜೆಡಿಎಸ್‌ಗೆ ಹೊಸ ಶಕ್ತಿ ನೀಡಲು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.