ಕನ್ನಡಪ್ರಭ ವಾರ್ತೆ ಹಲಗೂರು
ಹಲಗೂರು ಮತ್ತು ಹಾಡ್ಲಿ ವೃತ್ತದಲ್ಲಿ ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್ .ಡಿ.ಕುಮಾರಸ್ವಾಮಿ ಪರ ಮತಯಾಚನೆ ವೇಳೆ ಮಾತನಾಡಿ, ಬಿಜೆಪಿ ರಾಷ್ಟ್ರೀಯ ನಾಯಕರು ನಿಮ್ಮ ಸೇವೆ ಕೇಂದ್ರಕ್ಕೆ ಅವಶ್ಯಕತೆ ಇದೆ. ನೀವು ಬರಬೇಕು, ಮಂಡ್ಯ ಕ್ಷೇತ್ರದ ಅಭ್ಯರ್ಥಿ ಆಗುವಂತೆ ಕುಮಾರಣ್ಣನನ್ನು ಕೇಳಿಕೊಂಡರು. ಅದಕ್ಕೆ ಕುಮಾರಣ್ಣ ಮಂಡ್ಯದಲ್ಲಿ ಸ್ಪರ್ಧೆ ಮಾಡಿದ್ದಾರೆ ಎಂದರು.
ರಾಜ್ಯದಲ್ಲಿ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಸಕಾಲಕ್ಕೆ ಉತ್ತಮ ಮಳೆ, ಬೆಳೆಯಾಗಿ ರೈತರು ಸಂತೃಪ್ತಿ ಜೀವನ ನಡೆಸುತ್ತಿದ್ದರು. ಆದರೆ, ಸಿದ್ದರಾಮಯ್ಯನವರ ಕಾಲದಲ್ಲಿ ಮಳೆ ಇಲ್ಲದೆ ಬರಗಾಲದ ಪರಿಸ್ಥಿತಿ ಎದುರಿಸುವಂತಾಗಿದೆ ಎಂದು ವ್ಯಂಗ್ಯವಾಡಿದರು.ಈ ಹಿಂದೆ ಸಿದ್ದರಾಮಣ್ಣ ಸಿಎಂ ಆಗಿದ್ದಾಗ ಬರಗಾಲ ಬಂದಿತ್ತು. ಇದರಿಂದ ಹಲವು ರೈತರು ಬೆಳೆ ಕೈಗೆ ಸಿಗದೇ ಸಾಲ ಮಾಡಿ ತೀರಿಸಲಾಗದೇ ಸಾವನ್ನಪ್ಪಿದ್ದರು. ಕುಮಾರಣ್ಣ ಸಿಎಂ ಆದಾಗ ರೈತರ ಸಾಲ ಮನ್ನಾ ಮಾಡಿ ರೈತರಿಗೆ ಶಕ್ತಿ ತುಂಬಿದರು ಎಂದರು.
ಕಾಂಗ್ರೆಸ್ ನೀಡಿರುವ 5 ಗ್ಯಾರಂಟಿಗಳು ನಿಮಗೆ ಸಿಗಲು ಆ ಪಕ್ಷಕ್ಕೆ ಮತ ಹಾಕಬೇಕು. ಇಲ್ಲದಿದ್ದರೆ ಅದನ್ನು ನಿಲ್ಲಿಸಲಾಗುತ್ತದೆ ಎನ್ನುತ್ತಾರೆ ಮಾಗಡಿ ಶಾಸಕರೊಬ್ಬರು. ಆದರೆ, ಜನರ ತೆರಿಗೆ ಹಣದಲ್ಲಿ ಕಾಂಗ್ರೆಸ್ ಪಕ್ಷದವರು ಐದು ಆರು ಕೋಟಿ ಖರ್ಚು ಮಾಡಿ ಗ್ಯಾರಂಟಿ ಸಮಾವೇಶ ಮಾಡುತ್ತಾರೆ ಎಂದು ದೂರಿದರು.
ರಾಜ್ಯದಲ್ಲಿ ಕಾಂಗ್ರೆಸ್ ಗೆ ಜನರು ಅಧಿಕಾರ ನೀಡಿದ್ದಾರೆ. ಅವರು ಕೆಲಸ ಮಾಡಲಿ. ಚುನಾವಣೆಯಲ್ಲಿ ಪಕ್ಷಾಂತರ ಸಾಮಾನ್ಯ. ಎಲ್ಲಾ ಪಕ್ಷಗಳಲ್ಲೂ ಒಂದಷ್ಟು ಜನ ಅಲ್ಲಿಗೆ ಹೋಗುತ್ತಾರೆ. ಇನ್ನೊಂದಷ್ಟು ಜನ ಇಲ್ಲಿಗೆ ಬರ್ತಾರೆ ಎಂದರು.
ನಿಖಿಲ್ ಕುಮಾರಸ್ವಾಮಿ ಅವರು ಭಾಷಣ ಮಾಡುತ್ತಿದ್ದ ವೇಳೆ ಜೆಡಿಎಸ್ ಕಾರ್ಯಕರ್ತ ತಮ್ಮ ಮಗುವನ್ನು ಎತ್ತಿಕೊಂಡು ಬಂದಿದ್ದರು. ಈ ವೇಳೆ ಭಾಷಣ ನಿಲ್ಲಿಸಿದ ಮಗುವನ್ನು ಎತ್ತಿಕೊಂಡು ಫೋಟೋ ತೆಗೆಸಿಕೊಂಡು ಅಭಿಮಾನ ಮೆರೆದು ಮತ್ತೆ ಭಾಷಣ ಮುಂದುವರೆಸಿದರು.ಇದಕ್ಕೂ ಮುನ್ನ ಹಲಗೂರಿಗೆ ನಿಖಿಲ್ ಕುಮಾರಸ್ವಾಮಿ ಬರುತ್ತಿದ್ದಂತೆ ಕಾರ್ಯಕರ್ತರು ಪಟಾಕಿ ಸಿಡಿಸಿ ಜೈಕಾರಗಳನ್ನು ಕೂಗಿದರು. ಹಾಡ್ಲಿ ವೃತ್ತದಲ್ಲಿ ಬಿಸಿಲಿನ ತಾಪದಲ್ಲಿ ಭಾಷಣ ಕೇಳುತ್ತಿದ್ದ ಕಾರ್ಯಕರ್ತರಿಗೆ ಮಜ್ಜಿಗೆಯನ್ನು ವಿತರಿಸಲಾಯಿತು.