ಗದಗ: ಜಾತಿ, ಧರ್ಮ, ಪಕ್ಷ ಎಲ್ಲವನ್ನು ಮೀರಿ ರಾಜ್ಯದ ಸಮಸ್ತ ಜನತೆ ಪೂಜಿಸುವ ಧರ್ಮಸ್ಥಳದ ಶ್ರದ್ಧಾಕೇಂದ್ರದ ಬಗ್ಗೆ ಕೆಲವು ಕಾಣದ ಕೈಗಳು ಅಪಪ್ರಚಾರ ನಡೆಸುತ್ತಿರುವುದನ್ನು ಜೆಡಿಎಸ್ ಪಕ್ಷ ತೀವ್ರವಾಗಿ ಖಂಡಿಸುತ್ತಿದೆ. ಪವಿತ್ರ ತೀರ್ಥ ಕ್ಷೇತ್ರದ ನಡೆಯುತ್ತಿರುವ ಅಪಪ್ರಚಾರವನ್ನು ಖಂಡಿಸಿ ನಮ್ಮ ಪಕ್ಷದಿಂದ ಆ. 31ರಂದು ಧರ್ಮಸ್ಥಳ ಸತ್ಯ ಯಾತ್ರೆ ನಡೆಯಲಿದ್ದು, ಗದಗ ಜಿಲ್ಲೆಯಿಂದ ನೂರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾಧ್ಯಕ್ಷ ಎಂ.ವೈ. ಮುಧೋಳ ಹೇಳಿದರು.
ಅವರು ಶುಕ್ರವಾರ ಗದಗ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹಾಸನ ಜಿಲ್ಲೆಯ ಕದಲಿ ಗ್ರಾಮದಿಂದ ಪ್ರಾರಂಭವಾಗುವ ಯಾತ್ರೆ ಧರ್ಮಸ್ಥಳ ತಲುಪಿದ ನಂತರ ಶ್ರೀಮಠದವರೆಗೂ ಪಾದಯಾತ್ರೆ ನಡೆಸಲಾಗುವುದು. ಸಮೀರ್, ಚಿನ್ನಯ್ಯ, ತಿಮರೋಡಿ ಸೇರಿದಂತೆ ಹಲವಾರು ಜನ ಷಡ್ಯಂತ್ರದ ಮೂಲಕ ಕೆಟ್ಟ ಹೆಸರು ತರಲು ಪ್ರಯತ್ನಿಸಿದರು. ಇವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕೂಡಾ ಇಂತಹ ಅಪಪ್ರಚಾರಕ್ಕೆ ಪುಷ್ಟಿ ನೀಡುತ್ತಿದೆ ಎಂಬ ಅನುಮಾನ ಭಕ್ತರಲ್ಲಿ ಮೂಡಿದೆ. ಅಮಾಯಕ ವ್ಯಕ್ತಿಯೊಬ್ಬ ಬುರುಡೆ ಹಿಡಿದುಕೊಂಡು ಬಂದ ತಕ್ಷಣ ಹಿಂದೆ ಮುಂದೆ ಯೋಚನೆ ಮಾಡದೇ ಸರಕಾರ ಎಸ್‌ಐಟಿ ತನಿಖೆವಹಿಸುತ್ತದೆ. ಧರ್ಮ ಸ್ಥಳದ ಭಕ್ತರ ನಂಬಿಕೆಗೆ ದ್ರೋಹ ಬಗೆಯುವ ಕೆಲಸ ಮಾಡಲು ಕೆಲವರು ಹೊರಟಿದ್ದಾರೆ. ಇದನ್ನು ಹತ್ತಿಕ್ಕುವ ಕೆಲಸ ಸರಕಾರ ಮಾಡದೇ ಮೌನವಹಿಸಿದೆ.
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನಾಯಕತ್ವದಲ್ಲಿ ಜೆಡಿಎಸ್ ನ ಎಲ್ಲ ಹಾಲಿ, ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರನ್ನೊಳಗೊಂಡು ಯಾತ್ರೆ ನಡೆಯುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಈರಣ್ಣ ಬಾಳಿಕಾಯಿ, ಗಿರೀಶ್ ಸಂಶಿ, ನಿಂಗಪ್ಪ ಪ್ಯಾಟಿ, ತಿಪ್ಪಣ್ಣ ಹುಡೇದ, ದೇವಪ್ಪ ಮಲ್ಲಸಮುದ್ರ, ಕೆ. ಎಫ್ ದೊಡ್ಡಮನಿ, ಸಂಗಪ್ಪ ಯರಹುಣಸಿ, ಚನ್ನಪ್ಪ ಹರಿಹರ, ಭಾಷಾಸಾಬ್ ಬಾಗ್ವಾನ್, ಎಂ. ಎಂ. ಜಾವೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.