ಬಿತ್ತನೆ ಆಲೂಗಡ್ಡೆಗೆ ಸಬ್ಸಿಡಿ ನೀಡಲು ಸರ್ಕಾರಕ್ಕೆ ಜೆಡಿಎಸ್ ಒತ್ತಾಯ

KannadaprabhaNewsNetwork |  
Published : Apr 19, 2026, 01:45 AM IST
18ಎಚ್ಎಸ್ಎನ್9 :  | Kannada Prabha

ಸಾರಾಂಶ

ಜಿಲ್ಲಾಧಿಕಾರಿ ಅವರು ಇತ್ತೀಚೆಗೆ ಸಭೆ ನಡೆಸಿ ರೈತರಿಗೆ ದೃಢೀಕೃತ ಬಿತ್ತನೆ ಬೀಜವನ್ನೂ ಪೂರೈಕೆ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ. ಆದರೆ ಅದು ಹಾಗೆಯೇ ಉಳಿಯಬಾರದು. ವರ್ತಕರು ಬಿತ್ತನೆ ಆಲೂಗಡ್ಡೆ ಎಂದು ಮಾರಾಟ ಮಾಡುವಾಗ ಅದರ ಪರೀಕ್ಷೆಯಾಗಬೇಕು. ಆ ಮೂಲಕ ದೃಢೀಕೃತ ಬಿತ್ತನೆ ಬೀಜವನ್ನು ರೈತರಿಗೆ ಹಂಚಿಕೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಈ ಹಿಂದೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಶೇಕಡಾ 50 ಸಬ್ಸಿಡಿ ನೀಡಿ ರೈತರ ನೆರವಿಗೆ ಬಂದಿದ್ದರು ಈಗಿನ ಸರ್ಕಾರ ರೈತರ ನೆರವಿಗೆ ಬರಬೇಕು ಎಂದು ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ಆಳುವ ಸರ್ಕಾರಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಒಂದು ಕಾಲದಲ್ಲಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದ ಆಲೂಗಡ್ಡೆ ನೇಪಥ್ಯಕ್ಕೆ ಸರಿಯಲು ಕಾರಣ ಎಂದು ಜಿಲ್ಲಾ ಜೆಡಿಎಸ್ ವಕ್ತಾರ ರಘು ಹೊಂಗೆರೆ ದೂರಿದ್ದಾರೆ.ಜಿಲ್ಲೆಯಲ್ಲಿ ನಶಿಸಿ ಹೋಗಿರುವ ಆಲೂಗಡ್ಡೆ ಬೆಳೆಗೆ ಕಾಯಕಲ್ಪ ನೀಡಬೇಕು ಎಂಬುದು ಕೇವಲ ಬಾಯಿ ಮಾತಿನಲ್ಲೇ ಇದೆ. ಯಾವುದೇ ಸರ್ಕಾರ ಬಂದರೂ ಇದು ಸಾಧ್ಯವಾಗಿಲ್ಲ. ಈ ಬಾರಿಯಾದರೂ ವಾಣಿಜ್ಯ ಬೆಳೆಗೆ ಪುನರುಜ್ಜೀವನ ನೀಡಲು ಪೂರಕವಾದ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು. ಮುಖ್ಯವಾಗಿ ಆರ್ಥಿಕ ಬೆಳೆ ಆಲೂಗಡ್ಡೆ ಬಿತ್ತನೆ ಬೀಜಕ್ಕೆ ಸಬ್ಸಿಡಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.ಜಿಲ್ಲಾಧಿಕಾರಿ ಅವರು ಇತ್ತೀಚೆಗೆ ಸಭೆ ನಡೆಸಿ ರೈತರಿಗೆ ದೃಢೀಕೃತ ಬಿತ್ತನೆ ಬೀಜವನ್ನೂ ಪೂರೈಕೆ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ. ಆದರೆ ಅದು ಹಾಗೆಯೇ ಉಳಿಯಬಾರದು. ವರ್ತಕರು ಬಿತ್ತನೆ ಆಲೂಗಡ್ಡೆ ಎಂದು ಮಾರಾಟ ಮಾಡುವಾಗ ಅದರ ಪರೀಕ್ಷೆಯಾಗಬೇಕು. ಆ ಮೂಲಕ ದೃಢೀಕೃತ ಬಿತ್ತನೆ ಬೀಜವನ್ನು ರೈತರಿಗೆ ಹಂಚಿಕೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಈ ಹಿಂದೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಶೇಕಡಾ 50 ಸಬ್ಸಿಡಿ ನೀಡಿ ರೈತರ ನೆರವಿಗೆ ಬಂದಿದ್ದರು ಈಗಿನ ಸರ್ಕಾರ ರೈತರ ನೆರವಿಗೆ ಬರಬೇಕು ಎಂದು ಆಗ್ರಹಿಸಿದ್ದಾರೆ.ಆಲೂಗಡ್ಡೆ ಬೆಳೆ ಪ್ರದೇಶವನ್ನು ವಿಸ್ತರಣೆ ಮಾಡುವುದು ಕಷ್ಟವಾದ ವಿಷಯ ಏನಲ್ಲ. ಈ ಕುರಿತು ರೈತರಿಗೆ ಪೂರಕ ಮಾರ್ಗದರ್ಶನ ನೀಡಬೇಕು. ಅಂಗಮಾರಿ ರೋಗ ತಡೆಯಲು ಏನೆಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಪರಿಣಾಮಕಾರಿ ಅರಿವು ಮೂಡಿಸಬೇಕು. ಅದಾವುದನ್ನೂ ಮಾಡದೆ ಸಂಕಟ ಬಂದಾಗ ವೆಂಕಟ ರಮಣ ಅನ್ನೋ ಹಾಗೆ ರೋಗ ಬಂದಾಗ ತಡೆಗಟ್ಟುವ ಪ್ರಯತ್ನಕ್ಕೆ ಮುಂದಾದರೆ ಅದು ಪ್ರಹಸನವಾಗುತ್ತದೆ ಎಂದಿದ್ದಾರೆ. ಪ್ರತಿ ಸಲ ಮುಂಗಾರು ಆರಂಭ ಆದಾಗಲೂ ಪ್ರಮಾಣೀಕೃತ ಬಿತ್ತನೆ ಬೀಜದ ಪ್ರಸ್ತಾಪ ಆಗುತ್ತದೆ. ಆದರೆ ಅದನ್ನು ಖಚಿತ ಪಡಿಸಲು ಯಾರೂ ಮುಂದಾಗುವುದಿಲ್ಲ. ಒಂದು ಕಳಪೆ ಬಿತ್ತನೆ ಬೀಜ ನೀಡಿ, ಅದು ಹಾಳಾದರೆ ಅದಕ್ಕೆ ಸೂಕ್ತ ಪರಿಹಾರ ಎಂಬುದೂ ಮರೀಚಿಕೆಯಾಗಿದೆ. ಈ ರೀತಿಯ ನಷ್ಟದ ಸಂಪ್ರದಾಯ ನಿಲ್ಲಬೇಕಾದರೆ ಬೆಳೆಯ ಆರಂಭದಿಂದಲೂ ಕಡೆಯವರೆಗೂ ಸರ್ಕಾರ ಮತ್ತು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ರಘು ಆಗ್ರಹಿಸಿದ್ದಾರೆ. ಮೊದಲು ಆಲೂಗಡ್ಡೆ ವರ್ತಕರನ್ನು ಸರಿ ದಾರಿಗೆ ತರುವ ಕೆಲಸ ಆದರೆ ನಂತರ ಎಲ್ಲವೂ ಸರಿಯಾಗಲಿದೆ.ಎಷ್ಟೋ ಸಂದರ್ಭದಲ್ಲಿ ಭೂಮಿಗೆ ಬಿತ್ತಿದ ಆಲೂಗಡ್ಡೆ ಮೊಳಕೆ ಒಡೆಯದೆ ಭೂಮಿಯಲ್ಲೇ ಕರಗಿ ಹೋದ ಎಷ್ಟೋ ನಿದರ್ಶನಗಳನ್ನು ನಾವು ಕಣ್ಣ ಮುಂದೆ ಕಂಡಿದ್ದೇವೆ. ಮುಂದೆ ಇದು ಮರುಕಳಿಸಬಾರದು ಎಂದರೆ ಗುಣಮಟ್ಟದ, ಪರೀಕ್ಷೆಗೆ ಒಳಪಡಿಸಿದ ಬಿತ್ತನೆ ಬೀಜ ಪೂರೈಕೆ ಮಾಡಬೇಕು. ಆಲೂಗಡ್ಡೆ ಬೆಳೆ ಹಿಂದಿನಂತೆ ಹುಲುಸಾಗಿ ಬೆಳೆಯಲು ಪೂರಕವಾದ ಆರ್ಥಿಕ ಸಹಾಯ ಅಂದರೆ ಸಬ್ಸಿಡಿ ನೀಡಬೇಕು. ಈ ಎಲ್ಲ ಕಾರ್ಯ ಯೋಜನೆಗಳು ಸರಿಯಾದ ರೀತಿಯಲ್ಲಿ ಅನುಷ್ಠಾನಕ್ಕೆ ಬಂದರೆ ಮಾತ್ರ ಆಲೂಗಡ್ಡೆ ಜಿಲ್ಲೆಯಲ್ಲಿ ಮೊದಲಿನಂತೆ ಪ್ರಮುಖ ಬೆಳೆಯಾಗಲಿದೆ, ಇದರಿಂದ ರೈತರು ಆದಾಯ ಹೊಂದಲಿದ್ದಾರೆ. ಇಲ್ಲವಾದರೆ ಅದೇ ರಾಗ, ಅದೇ ಹಾಡು ಎಂಬಂತೆ ಆಗಲಿದೆ ಎಂದಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯೆ ಕಲಿಸಿದ ಗುರುಗಳನ್ನು ಎಂದಿಗೂ ಮರೆಯಬಾರದು: ಪ್ರೊ.ಕೆ.ಶಿವಚಿತ್ತಪ್ಪ
ಹಬ್ಬಗಳ ಆಚರಣೆ ಗ್ರಾಮೀಣ ಜನರ ಒಗ್ಗಟ್ಟಿನ ಸಂಕೇತ: ಮಲ್ಲಿಕಾರ್ಜನ್