ಹಾವೇರಿ: ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ, ಷಡ್ಯಂತ್ರ ಹಾಗೂ ಸುಳ್ಳು ಆರೋಪಗಳ ವಿರುದ್ಧ ಜೆಡಿಎಸ್ ವತಿಯಿಂದ ರ್ಮಸ್ಥಳ ಸತ್ಯಯಾತ್ರೆ ಕೈಗೊಂಡಿದ್ದು, ಆ. 31ರಂದು ಜಿಲ್ಲೆಯಿಂದಲೂ ಪಕ್ಷದ ಕಾರ್ಯಕರ್ತರು ನೇತ್ರಾವತಿ ನದಿಯಿಂದ ಧರ್ಮಸ್ಥಳವರೆಗೆ ಪಾದಯಾತ್ರೆ ನಡೆಸಲಿದ್ದೇವೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥಗೌಡ ಶಿವಣ್ಣನವರ ತಿಳಿಸಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಹಲವಾರು ದಿನಗಳಿಂದ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಮಾನ ಹಾಗೂ ಹಲವಾರು ಅನುಮಾನಗಳಿಗೆ ರಾಜ್ಯ ಸರ್ಕಾರ ಎಡೆಮಾಡಿಕೊಟ್ಟಿದೆ. ತರಾತುರಿಯಲ್ಲಿ ಎಸ್‌ಐಟಿ ರಚನೆ ಮಾಡಿದೆ. ಧರ್ಮಸ್ಥಳದ ವಿಷಯದಲ್ಲಿ ಒಂದು ತಂಡವಾಗಿ ಪಿತೂರಿ ಮಾಡಿದೆ. ಒಬ್ಬನ ಹೇಳಿಕೆಯನ್ನು ಪರಿಗಣಿಸಿ ಎಸ್‌ಐಟಿ ರಚನೆ ಮಾಡಿದ್ದಾರೆ. ಶ್ರದ್ಧಾಕೇಂದ್ರ ಧರ್ಮಸ್ಥಳದ ಮೇಲಿನ ನಂಬಿಕೆಗೆ ದ್ರೋಹ ಬಗೆಯುವ ರೀತಿಯಲ್ಲಿ ಸರ್ಕಾರ ಮುಂದಾಗಿರುವುದು ಖಂಡನೀಯ ಎಂದರು.ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ಕುಮಾರಸ್ವಾಮಿ ನೇತೃತ್ವದಲ್ಲಿ ಆ. 31ರಂದು ಧರ್ಮಸ್ಥಳ ಸತ್ಯಯಾತ್ರೆ ಆರಂಭವಾಗಲಿದೆ. ಜಿಲ್ಲೆಯಿಂದಲೂ ಅಂದು ಬೆಳಗ್ಗೆ 6 ಗಂಟೆಗೆ ಕನಿಷ್ಠ 40- 50 ಕಾರುಗಳು ಹೊರಡಲಿವೆ. ಹಾನಗಲ್ಲ, ಶಿಗ್ಗಾಂವಿ, ಸವಣೂರು, ಹಿರೇಕೆರೂರು, ಬ್ಯಾಡಗಿ ಭಾಗದ ಕಾರ್ಯಕರ್ತರು ಹಾವೇರಿಯಲ್ಲಿ ಸೇರಬೇಕು. ಹಾವೇರಿಯಿಂದ ರಾಣಿಬೆನ್ನೂರು ಮಾರ್ಗವಾಗಿ ಹಾಸನ ಕಡೆಗೆ ಹೋಗುತ್ತೇವೆ. ಮೊದಲಿಗೆ ಹಾಸನದಲ್ಲಿ ಸೆಂಟರ್ ಮಾಡಿಕೊಳ್ಳುತ್ತೇವೆ. ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರು ಆಗಮಿಸಲಿದ್ದು, ತಿಂಡಿ ವ್ಯವಸ್ಥೆ ಮಾಡಿದ್ದೇವೆ. ಅಲ್ಲಿಂದ ನೇತ್ರಾವತಿಗೆ ಹೋಗಿ ಸ್ನಾನ ಮಾಡಿಕೊಂಡು, ಅಲ್ಲಿಂದ ಪಾದಯಾತ್ರೆ ಮಾಡುತ್ತೇವೆ. ವೇದಿಕೆ ರಚನೆ ಮಾಡಿಕೊಂಡು ಪಕ್ಷದ ನಾಯಕರು ಕೆಲವು ಸಂದೇಶಗಳನ್ನು ನೀಡುತ್ತಾರೆ ಎಂದರು.