ಡಿಕೆಸುಗೆ ಜೆಡಿಎಸ್ ಕಾರ್ಯಕರ್ತರಿಂದಲೇ ಪ್ರತ್ಯುತ್ತರ

KannadaprabhaNewsNetwork |  
Published : Jan 18, 2026, 01:15 AM IST
17ಕೆಆರ್ ಎಂಎನ್ 1.ಜೆಪಿಜಿಜೆಡಿಎಸ್ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ರಾಮನಗರ: ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್‌ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಬಗೆಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಜೆಡಿಎಸ್ ಕಾರ್ಯಕರ್ತರು ಪ್ರತ್ಯುತ್ತರ ನೀಡಬೇಕಾಗುತ್ತದೆ ಎಂದು ಪಕ್ಷದ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ ಎಚ್ಚರಿಕೆ ನೀಡಿದರು.

ರಾಮನಗರ: ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್‌ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಬಗೆಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಜೆಡಿಎಸ್ ಕಾರ್ಯಕರ್ತರು ಪ್ರತ್ಯುತ್ತರ ನೀಡಬೇಕಾಗುತ್ತದೆ ಎಂದು ಪಕ್ಷದ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ಬಾರಿ ಸಂಸದರಾಗಿದ್ದ ಡಿ.ಕೆ.ಸುರೇಶ್ ಇನ್ನೊಬ್ಬರ ಬಗ್ಗೆ ಪದ ಬಳಕೆ ಮಾಡುವಾಗ ಎಚ್ಚರ ವಹಿಸಬೇಕು. ಲಘುವಾಗಿ ಮಾತನಾಡುವುದನ್ನು ಮುಂದುವರಿಸಿದರೆ ಜೆಡಿಎಸ್ ಕಾರ್ಯಕರ್ತರು ಬೀದಿಗಿಳಿಯುವುದು ಮಾತ್ರವಲ್ಲದೆ ಎಲ್ಲ ಹಂತದಲ್ಲೂ ಪ್ರತ್ಯುತ್ತರ ನೀಡಲು ಸಿದ್ಧರಾಗಿದ್ದಾರೆ ಎಂದರು.

ಕುಮಾರಸ್ವಾಮಿ ಬಡವರು, ದೀನ ದಲಿತರು ಹಾಗೂ ವಿಶೇಷ ಚೇತನರಿಗೆ ಸೇವೆ ಸಲ್ಲಿಸುತ್ತಾರೆ. ಡಿ.ಕೆ.ಸುರೇಶ್ ಅವರಂತೆ ಬಾಯಿ ಚಪಲಕ್ಕೆ ಮಾತನಾಡುವ ಚಾಳಿ ಹೊಂದಿಲ್ಲ. ಇನ್ನಾದರು ಮಾಜಿ ಸಂಸದರು ಗೌರವದಿಂದ ನಡೆದುಕೊಳ್ಳುವುದನ್ನು ಕಲಿಯಬೇಕು. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಹುಚ್ಚಮನದೊಡ್ಡಿ ಏತ ನೀರಾವರಿ ಯೋಜನೆಗೆ 5 ಕೋಟಿ ಮಂಜೂರು ಮಾಡಿಸಿದ್ದರು. ಸುತ್ತಮುತ್ತಲ ಕೆರೆಗಳಿಗೆ ನೀರು ಹರಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿತ್ತು. ತಹಸೀಲ್ದಾರರು ಪೈಪ್ ಲೈನ್ ಅಳವಡಿಸುವಂತೆ ಆದೇಶಿಸಿದರೆ, ಶಾಸಕರು ಕೆರೆಗೆ ನೀರು ಹರಿಸದಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಕ್ಷೇತ್ರದಲ್ಲಿ ಶಾಸಕರ ದೌರ್ಜನ್ಯ ಹೆಚ್ಚಾಗಿದೆ ಎಂದು ಟೀಕಿಸಿದರು.

ವೈದ್ಯರ ಬಳಿ ಚಿಕಿತ್ಸೆ ಕೊಡಿಸಲಿ:

ಜೆಡಿಎಸ್ ರಾಜ್ಯ ಮಾಧ್ಯಮ ವಕ್ತಾರ ನರಸಿಂಹಮೂರ್ತಿ ಮಾತನಾಡಿ, ಮಾಜಿ ಸಂಸದ ಡಿ.ಕೆ.ಸುರೇಶ್ ಜನರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಹಪಾಹಪಿಯಿಂದ ಕುಮಾರಸ್ವಾಮಿ ವಿರುದ್ಧ ಕೀಳಾಗಿ ಟೀಕೆ ಮಾಡಿದ್ದಾರೆ. ಅವರ ಬಗ್ಗೆ ಮಾತನಾಡುವ ನೈತಿಕತೆ ಸುರೇಶ್ ಅವರಿಗಿಲ್ಲ. ಮೂರು ಬಾರಿ ಸಂಸದರಾಗಿದ್ದವರು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಆದರೆ, ಸಾಮಾನ್ಯ ಕಾರ್ಯಕರ್ತ ಅಲಂಕರಿಸುವ ಬಮೂಲ್ ಅಧ್ಯಕ್ಷ ಸ್ಥಾನದಲ್ಲಿ ಕೂತಿದ್ದಾರೆ. ಇದು ಕಾಂಗ್ರೆಸ್ ಪಕ್ಷದಲ್ಲಿ ಅವರಿಗಿರುವ ಸ್ಥಾನಮಾನವನ್ನು ತೋರಿಸುತ್ತದೆ ಎಂದು ಲೇವಡಿ ಮಾಡಿದರು.

ಸಂಸತ್ ಚುನಾವಣೆಯಲ್ಲಿನ ಸೋಲು ಮತ್ತು ಸಹೋದರ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗದಿರುವ ಕೊರಗಿನಿಂದ ಡಿ.ಕೆ.ಸುರೇಶ್ ಮಾನಸಿಕ ಸ್ಥಿಮಿತತೆ ಕಳೆದುಕೊಂಡಂತಿದೆ. ಕಾಂಗ್ರೆಸ್ ಕಾರ್ಯಕರ್ತರು ಅಥವಾ ಕುಟುಂಬದವರು ಅವರಿಗೆ ವೈದ್ಯರ ಬಳಿ ಚಿಕಿತ್ಸೆ ಕೊಡಿಸಲಿ. ಇಲ್ಲದಿದ್ದರೆ ನಾವೇ ವೈದ್ಯರನ್ನು ಅವರ ಮನೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುತ್ತೇವೆ ಎಂದು ಹರಿಹಾಯ್ದರು.

ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ ಮಾತನಾಡಿ, ಕುಮಾರಸ್ವಾಮಿ ಬಗ್ಗೆ ಲಘುವಾಗಿ ಮಾತನಾಡಿರುವುದು ಡಿ.ಕೆ.ಸುರೇಶ್ ಸಂಸ್ಕೃತಿಯನ್ನು ತೋರಿಸುತ್ತದೆ. ಸಾರ್ವಜನಿಕ ಜೀವನದಲ್ಲಿ ಇರುವವರು ಅರ್ಹತೆಗೆ ಗೌರವ ಕೊಟ್ಟು ಮಾತನಾಡಬೇಕು. ಹಿಂದಿನ ಶಾಸಕರು ತಂದ ಅನುದಾನದಲ್ಲಿ ನಡೆಯುತ್ತಿರುವ ಕಾಮಗಾರಿಗಳಿಗೆ ಡಿಕೆ ಸಹೋದರರು ಮತ್ತು ಶಾಸಕ ಇಕ್ಬಾಲ್ ಹುಸೇನ್ ಹೆಸರು ಹಾಕಿಸಿಕೊಳ್ಳುತ್ತಿದ್ದಾರೆ. ದೇವೇಗೌಡರು ಶುದ್ಧ ಕುಡಿಯುವ ನೀರಿನ ಘಟಕಕ್ಕೆ 5 ಲಕ್ಷ ಅನುದಾನ ನೀಡಿದ್ದರೆ, ಅಲ್ಲಿಯೂ ತಮ್ಮ ಭಾವಚಿತ್ರ ಹಾಕಿಸಿಕೊಂಡಿದ್ದಾರೆ. ಇದು ಡಿಕೆ ಸಹೋದರರ ದಬ್ಬಾಳಿಕೆ ತೋರಿಸುತ್ತದೆ ಎಂದು ಟೀಕಿಸಿದರು.

ಕೋಟ್ .............

ಚುನಾವಣೆಗಳು ಬಂದಾಗ ಮಾತ್ರ ಮೇಕೆದಾಟು ಯೋಜನೆ ನೆನಪಿಗೆ ಬರುತ್ತದೆ. ಜನರಿಗೆ ಕೂಪನ್ ಹಂಚಿ ಗೆಲುವು ಸಾಧಿಸುತ್ತಾರೆ. ಜನಾಭಿಪ್ರಾಯ ಪಡೆದು ಕಾಂಗ್ರೆಸ್ ಅಧಿಕಾರಕ್ಕೆ ಬಂದಿಲ್ಲ. ಸಂಖ್ಯೆಗಳಲ್ಲಷ್ಟೇ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದಿದ್ದೀರಿ. ಕಾಂಗ್ರೆಸ್ ಸರ್ಕಾರ ಬಂದು ಎರಡೂವರೆ ವರ್ಷಗಳಾದರು ಮೇಕೆದಾಟು ಯೋಜನೆ ಕಾರ್ಯಗತಗೊಳಿಸಿಲ್ಲ. . ಕ್ಷೇತ್ರದಲ್ಲಿರುವ ಗುಂಡಿ ಮುಚ್ಚಲು ಸಾಧ್ಯವಾಗುತ್ತಿಲ್ಲ.

-ದೊರೆಸ್ವಾಮಿ, ಮಾಜಿ ಅಧ್ಯಕ್ಷರು, ಎಪಿಎಂಸಿ, ರಾಮನಗರ

ಕೋಟ್ .............

ಜ.28ರಂದು ರಾಮನಗರದಲ್ಲಿ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಆ ದಿನ ನಿಖಿಲ್ ಕುಮಾರಸ್ವಾಮಿ ಅವರನ್ನು ಬೈಕ್ ರ್ಯಾಲಿಯಲ್ಲಿ ಅದ್ಧೂರಿಯಾಗಿ ಸ್ವಾಗತಿಸುತ್ತೇವೆ. ಚಾಮುಂಡೇಶ್ವರಿ ದೇವಾಲಯ ಮತ್ತು ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುತ್ತೇವೆ. ಆನಂತರ ಹಳೇ ಬಸ್ ನಿಲ್ದಾಣದಲ್ಲಿ ಕೇಕ್ ಕತ್ತರಿಸಲಾಗುವುದು.

- ಬಿ.ಉಮೇಶ್ , ಪ್ರಧಾನ ಕಾರ್ಯದರ್ಶಿ, ಓಬಿಸಿ ಘಟಕ, ಜೆಡಿಎಸ್

17ಕೆಆರ್ ಎಂಎನ್ 1.ಜೆಪಿಜಿ

ಜೆಡಿಎಸ್ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭದ್ರೆಗೆ ಹಣ ನೀಡುವಲ್ಲಿ ಕೇಂದ್ರ, ರಾಜ್ಯ ಸರ್ಕಾರ ಉದಾಸೀನ
ಅದ್ಧೂರಿ ಶ್ರೀನಿವಾಸ ಕಲ್ಯಾಣೋತ್ಸವ ಸಂಪನ್ನ