ಜೆಡಿಎಸ್ ಬೆಂಬಲದೊಂದಿಗೆ ಜೆಡಿಯು ಬೆಳವಣಿಗೆ: ರಾಜ್ಯಾಧ್ಯಕ್ಷ ಮಹಿಮ ಪಾಟೀಲ್

KannadaprabhaNewsNetwork |  
Published : Feb 05, 2026, 01:15 AM IST
೪ಕೆಎಲ್‌ಆರ್-೧ಕೋಲಾರ ತಾಲ್ಲೂಕು ಕಲ್ಲಂಡೂರಿನಲ್ಲಿ ಜೆಡಿಯು ಪಕ್ಷದ ಸದಸ್ಯತ್ವ ನೋಂದಣಿಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಜೆಡಿಯು ರಾಜ್ಯ ಅಧ್ಯಕ್ಷ ಮಹಿಮ ಜೆ.ಪಟೇಲ್ ಮಾತನಾಡಿದರು. | Kannada Prabha

ಸಾರಾಂಶ

ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ಈಗಾಗಲೇ ಒಂದು ಸುತ್ತು ಮುಗಿಸಿ ಎರಡನೇ ಸುತ್ತಿನ ಪ್ರಚಾರದಲ್ಲಿ ತೊಡಗಿದ್ದೇವೆ. ಅತಿ ಹೆಚ್ಚು ಮತದಾರರನ್ನು ನೋಂದಣಿ ಮಾಡಿಸಿದ್ದೇವೆ.

ಕನ್ನಡಪ್ರಭ ವಾರ್ತೆ ಕೋಲಾರ

ರಾಜ್ಯದಲ್ಲಿ ಜೆಡಿಎಸ್ ಬೆಳೆಸಿದ್ದೇ ಜೆಡಿಯು, ಹೀಗಾಗಿ, ಜೆಡಿಎಸ್ ಮುಖಂಡರ ಬೆಂಬಲದೊಂದಿಗೆ ರಾಜ್ಯದಲ್ಲಿ ಮತ್ತೆ ಜೆಡಿಯು ಪಕ್ಷ ಬೆಳೆಸಲಾಗುವುದು. ಈ ನಿಟ್ಟಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸದ್ಯದಲ್ಲೇ ಬಿಹಾರ ಸಿಎಂ ನಿತೀಶ್ ಕುಮಾರ್‌ರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ. ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದೆ ಎಂದು ಜೆಡಿಯು ರಾಜ್ಯ ಅಧ್ಯಕ್ಷ ಮಹಿಮ ಜೆ.ಪಟೇಲ್ ತಿಳಿಸಿದರು.

ತಾಲೂಕಿನ ಕಲ್ಲಂಡೂರಿನಲ್ಲಿ ಜೆಡಿಯು ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ, ಜನತಾ ಪರಿವಾರ ರಾಜ್ಯದಲ್ಲಿ ಹಿಂದೆ ಉತ್ತಮ ಆಡಳಿತ ನಡೆಸಿದೆ. ರಾಮಕೃಷ್ಣ ಹೆಗಡೆ, ಎಸ್.ಆರ್.ಬೊಮ್ಮಾಯಿ, ಎಚ್.ಡಿ.ದೇವೇಗೌಡ, ಜೆ.ಎಚ್.ಪಟೇಲ್ ಉತ್ತಮ ಸರ್ಕಾರ ನೀಡಿದ್ದರು. ಅವರು ಹಾಕಿಕೊಟ್ಟ ಅಡಿಪಾಯದ ಮೇಲೆ ರಾಜ್ಯದಲ್ಲಿ ಜೆಡಿಯು ಪಕ್ಷಕ್ಕೆ ಪುನಶ್ಚೇತನ ನೀಡಲಾಗುವುದು ಎಂದು ತಿಳಿಸಿದರು.

ಬೇರೆ ಬೇರೆ ಪಕ್ಷಗಳ ಪರಿಸ್ಥಿತಿ ನೋಡಿ ಆ ಪಕ್ಷಗಳು ಬೇಡ ಎಂಬ ತೀರ್ಮಾನಕ್ಕೆ ಹಲವು ನಾಯಕರು ಬಂದಿದ್ದಾರೆ. ರಾಜಕೀಯ ನಾಯಕರು ಅಲ್ಲದೇ; ಕಲಾವಿದರು, ಸಾಹಿತಿಗಳು, ವಿವಿಧ ಕ್ಷೇತ್ರಗಳ ಮುಖಂಡರು ನಮ್ಮ ಪಕ್ಷದ ಕಡೆ ನೋಡುತ್ತಿದ್ದಾರೆ ಎಂದು ಹೇಳಿದರು.

ಮುಂಬರುವ ಗ್ರಾಪಂ, ತಾಪಂ ಹಾಗೂ ಜಿಪಂ ಚುನಾವಣೆಗಳಲ್ಲಿ ರಾಜ್ಯಾದ್ಯಂತ ಜೆಡಿಯು ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ತಿಳಿಸಿದರು.

ಈಗಿನ ರಾಜಕೀಯ ವ್ಯವಸ್ಥೆ ಬಗ್ಗೆ ಜನರು ಗೊಂದಲ, ಅಸಹಾಯಕತೆ, ನಿರಾಶೆಯ ಭಾವನೆಯಲ್ಲಿದ್ದಾರೆ. ದೇಶದ ೧೪೦ ಕೋಟಿ ಜನರಲ್ಲಿ ೩ ಲಕ್ಷ ಜನ ತೃಪ್ತಿಯಿಂದ ಇರಬಹುದು ಅಷ್ಟೆ. ಹೊಸ ವ್ಯವಸ್ಥೆ ಉದಯವಾಗಲು ಇದು ಸಕಾಲ ಎನಿಸುತ್ತಿದೆ. ಅವ್ಯವಸ್ಥೆ ಅಳಿಸಿ ಸುವ್ಯವಸ್ಥೆ ರೂಪಿಸಬೇಕಿದೆ. ಇದಕ್ಕೆ ತಿಳಿವಳಿಕೆ ಹೊಂದಿರುವವರು, ಬುದ್ಧಿವಂತರು ಜನಪ್ರತಿನಿಧಿಗಳಾಗಬೇಕು ಎಂದರು.

ಈ ನಿಟ್ಟಿನಲ್ಲಿ ಡಾ.ಕೆ.ನಾಗರಾಜ್ ಅವರನ್ನು ಆಗ್ನೇಯ ಪದವೀಧರ ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಅವರನ್ನು ಎನ್‌ಡಿಎ ಬೆಂಬಲ ಅಥವಾ ಹೊರಗಿನಿಂದ ಬೆಂಬಲ ಪಡೆದು ಜೆಡಿಯುನಿಂದ ಕಣಕ್ಕಿಳಿಸಲಾಗುತ್ತಿದೆ ಎಂದು ಹೇಳಿದರು.

ಜೆಡಿಯು ಯುವ ಘಟಕದ ರಾಜ್ಯ ಅಧ್ಯಕ್ಷ ಡಾ.ನಾಗರಾಜ್ ಮಾತನಾಡಿ, ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ಈಗಾಗಲೇ ಒಂದು ಸುತ್ತು ಮುಗಿಸಿ ಎರಡನೇ ಸುತ್ತಿನ ಪ್ರಚಾರದಲ್ಲಿ ತೊಡಗಿದ್ದೇವೆ. ಅತಿ ಹೆಚ್ಚು ಮತದಾರರನ್ನು ನೋಂದಣಿ ಮಾಡಿಸಿದ್ದೇವೆ ಎಂದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಬಿಹಾರದವರು. ಬಿಹಾರದ ಸರ್ಕಾರದಲ್ಲಿ ಸಚಿವರಾದವರು. ಮುಖ್ಯಮಂತ್ರಿ ನಿತೀಶ್ ಕುಮಾರ್ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ, ಮುಂಬರುವ ದಿನಗಳಲ್ಲಿ ನಮಗೆ ಸಹಾಯವಾಗಲಿದೆ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗುಬ್ಬಿ ಪಟ್ಟಣ ಪಂಚಾಯಿತಿ ಆದಾಯ 2.30 ಕೋಟಿ ರು.
ರೈಲ್ವೆ ಪ್ರವೇಶ ಪರೀಕ್ಷೆ: ಕನ್ನಡಕ್ಕೆ ಅವಕಾಶ ನೀಡಿ