ಸಿಸಿಎಫ್ ನೇತೃತ್ವದ ತಂಡದಿಂದ ಪರಿಶೀಲನೆ, ನಾಲ್ವರ ವಿರುದ್ಧ ಪ್ರಕರಣ ದಾಖಲು,
ಜಿಲ್ಲೆಯ ಮೂಡಿಗೆರೆ ತಾಲೂಕಿನ ಭೈರಾಪುರ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಜೀಪ್ ರ್‍ಯಾಲಿ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿ ಆಯೋಜಕರ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲು ಮಾಡಿದೆ.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್) ಉಪೇಂದ್ರ ಪ್ರತಾಪ್ ಸಿಂಗ್, ಚಿಕ್ಕಮಗಳೂರು ಉಪ ಅರಣ್ಯ ಸಂರಕ್ಷಣಾಧಿ ಕಾರಿ (ಡಿಎಫ್‌ಒ) ರಮೇಶ್ ಬಾಬು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ರ್‍ಯಾಲಿ ನಡೆಸಿರುವ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು.ಕಳೆದ ಆಗಸ್ಟ್ 31 ರಂದು ಮೂಡಿಗೆರೆ ತಾಲೂಕಿನ ಭೈರಾಪುರ ವ್ಯಾಪ್ತಿಯ ಎತ್ತಿನಭುಜ, ಬಾಳೂರು ಮೀಸಲು ಅರಣ್ಯದಲ್ಲಿ ಜೀಪ್ ರ್‍ಯಾಲಿ ಆಯೋಜನೆ ಮಾಡಲಾಗಿತ್ತು. ಈ ರ್‍ಯಾಲಿಯಲ್ಲಿ ಚಿಕ್ಕಮಗಳೂರು, ಮೂಡಿಗೆರೆ, ಬೆಂಗಳೂರು, ಸಕಲೇಶ ಪುರ, ಹಾಸನ, ತೀರ್ಥಹಳ್ಳಿ ಸೇರಿದಂತೆ ಹಲವೆಡೆಯಿಂದ ಸುಮಾರು 80ಕ್ಕೂ ಹೆಚ್ಚು ಜೀಪ್‌ಗಳು ಪಾಲ್ಗೊಂಡಿದ್ದವು.
ಈ ಸಂಬಂಧ ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಸಿಸಿಎಫ್ ದರ್ಜೆ ಅಧಿಕಾರಿಗಳಿಂದ ಪರಿಶೀಲನೆ ನಡೆಸಬೇಕು. ರ್‍ಯಾಲಿ ನಡೆದಿರುವುದು ಖಾತ್ರಿಯಾದರೆ ಸಂಬಂಧಪಟ್ಟವರ ವಿರುದ್ಧ ಅರಣ್ಯ ಸಂರಕ್ಷಣಾ ಕಾಯ್ದೆ, ವನ್ಯಜೀವಿ ಸಂರಕ್ಷಣಾ ಕಾಯ್ದೆ, ಪರಿಸರ ಸಂರಕ್ಷಣಾ ಕಾಯ್ದೆ, ಸಾರ್ವಜನಿಕ ನೆಮ್ಮದಿ ಭಂಗ ಅಡಿಯಲ್ಲಿ ಪ್ರಕರಣ ದಾಖಲಿಸಬೇಕೆಂದು ಸೂಚನೆ ನೀಡಿದ್ದರು.ನಾಲ್ವರ ವಿರುದ್ಧ ಪ್ರಕರಣ:
ಕಾಫಿ ಎಸ್ಟೇಟ್ ಜತೆಗೆ ಅರಣ್ಯ ಪ್ರದೇಶದಲ್ಲೂ ರ್‍ಯಾಲಿಯ ಜೀಪ್‌ಗಳು ಓಡಾಡಿರುವುದು ದೃಢಪಟ್ಟಿದೆ. ಆಯೋಜಕರು ಸ್ಥಳೀಯ ಗ್ರಾಮ ಪಂಚಾಯ್ತಿಯಿಂದ ಅಥವಾ ಜಿಲ್ಲಾಡಳಿತದಿಂದ ಅನುಮತಿ ಪಡೆದುಕೊಂಡಿಲ್ಲ, ಅರಣ್ಯ ಇಲಾಖೆಯಿಂದಲೂ ಅನುಮತಿ ಪಡೆದಿಲ್ಲ, ಹಾಗಾಗಿ ಅತಿಕ್ರಮವಾಗಿ ರ್‍ಯಾಲಿ ನಡೆಸಿರುವುದು ಇಲಾಖೆ ಖಚಿತ ಪಡಿಸಿದೆ.