ಜಿ.ಸೋಮಶೇಖರ
ಕೊಟ್ಟೂರು: ತಾಲೂಕು ರಚನೆಗೊಂಡ ಬಳಿಕ ಹಲವು ವರ್ಷಗಳ ಬೇಡಿಕೆಯಾಗಿದ್ದ ವಿದ್ಯುತ್ ಉಪ ವಿಭಾಗ ಕಚೇರಿಯನ್ನು ಆರಂಭಿಸುವ ಶುಭ ಗಳಿಗೆಗೆ ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿಯ ಆಡಳಿತ ಮಂಡಳಿ ಮುಹೂರ್ತ ನಿಗದಿಪಡಿಸಿದೆ. ಕೊಟ್ಟೂರಿಗೆ ಕೊನೆಗೂ ವಿದ್ಯುತ್ ಉಪ ವಿಭಾಗ ಕಚೇರಿ ಮಂಜೂರು ಮಾಡಿ ಆದೇಶಿಸಿದ್ದು, ಆಗಸ್ಟ್ ಒಳಗೇ ಕಚೇರಿ ಆರಂಭಿಸುವ ಬಗ್ಗೆ ಸೂಚನೆ ನೀಡಲಾಗಿದೆ.ನೂತನ ಕೊಟ್ಟೂರು ವಿದ್ಯುತ್ ಉಪ ವಿಭಾಗಕ್ಕೆ ಕೊಟ್ಟೂರು ಪಟ್ಟಣ, ಗ್ರಾಮಾಂತರ, ಉಜ್ಜಯನಿ ಶಾಖಾ ಕಚೇರಿಗಳನ್ನು ಸೇರಿಸಲಾಗಿದೆ. ಉಪ ವಿಭಾಗ ಕೇಂದ್ರಕ್ಕೆ ಬೇಕಾದ ಎಇಇ, ಎಇ ಹುದ್ದೆಗಳನ್ನು ಬಳ್ಳಾರಿ, ಹಗರಿಬೊಮ್ಮನಹಳ್ಳಿಗಳಿಂದ ಶಿಫ್ಟಿಂಗ್ ಮಾಡಿ ಜೆಸ್ಕಾಂ ಮಂಡಳಿ ಆದೇಶಿಸಿದೆ. ಕೊಟ್ಟೂರು ವಿದ್ಯುತ್ ಉಪ ವಿಭಾಗ ರಚನೆಯಿಂದ ತಾಲೂಕಿನ ಜನತೆಗೆ ಇದುವರೆಗೂ ಕಾಡುತ್ತಿದ್ದ ಅನಗತ್ಯ ಅಲೆದಾಟ ತಪ್ಪಲಿದೆ.
ಈ ಮೊದಲು ಕೂಡ್ಲಿಗಿ ಉಪ ವಿಭಾಗದಲ್ಲಿದ್ದ ಕೊಟ್ಟೂರು ಉಪ ವಿಭಾಗಕ್ಕೆ ಪ್ರತಿ ತಿಂಗಳು ₹1.5 ಕೋಟಿ ಆರ್ಥಿಕ ವರಮಾನ ತಂದು ಕೊಡುತ್ತಿತ್ತು. ವಿದ್ಯುತ್ ತೊಂದರೆಯನ್ನು ತಕ್ಷಣವೇ ನಿವಾರಿಸಲು ಕಷ್ಟಪಡಬೇಕಿತ್ತು. ಆದರೆ ಉಪ ವಿಭಾಗ ರಚನೆಯಿಂದ ವಿದ್ಯುತ್ ತೊಂದರೆಯನ್ನು ಶೀಘ್ರವೇ ಬಗೆಹರಿಯಲು ಅನುಕೂಲವಾಗಿದೆ.ಕೊಟ್ಟೂರಿನಲ್ಲಿ ಇರುವ ಜಸ್ಕಾಂ ಕಚೇರಿ ಆವರಣದಲ್ಲಿ ವಸತಿ ಕಟ್ಟಡವಿದ್ದು, ಅಲ್ಲಿಯೇ ಎಇಇ ಕಚೇರಿ ಆರಂಭಿಸಲು ಅನುಕೂಲವಾಗಿದೆ. ಹೀಗಾಗಿ ಕಚೇರಿ ಹುಡುಕಾಟದ ತೊಂದರೆ ಜೆಸ್ಕಾಂಗೆ ಇಲ್ಲವಾಗಿದೆ. ಜತೆಗೆ ಕಚೇರಿಗೆ ವಾಹನ ದೊರಕಿಸಿ ಕೊಡಲು ಜೆಸ್ಕಾಂ ಡಿಎಂಎಫ್ ಅನುದಾನ ಪಡೆಯಲು ಬಳ್ಳಾರಿಯ ಜೆಸ್ಕಾಂ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಟೈಪಿಂಗ್, ಡಾಟಾ ಎಂಟ್ರಿ, ಸೇವಕರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಸೂಚಿಸಲಾಗಿದೆ.
ಕೊಟ್ಟೂರಿನಲ್ಲಿ ನೂತನ ವಿದ್ಯುತ್ ಉಪ ವಿಭಾಗಕ್ಕೆ ಸಂಬಂಧಿಸಿ ರಚನೆಗೆ ಆಡಳಿತಕ್ಕೆ ಬೇಕಾದ ಸಿಬ್ಬಂದಿ ಈಗಾಗಲೇ ಶಾಖಾ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೇ ಸಿಬ್ಬಂದಿಯನ್ನು ಉಪ ವಿಭಾಗ ಕಚೇರಿಗೆ ಎರವಲು ಪಡೆಯಬಹುದು. ಕಚೇರಿ ಆರಂಭಿಸಲು ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಸೂಚಿಸಿದ ಕೊಡಲೇ ಉಪ ವಿಭಾಗ ಕಚೇರಿ ತೆರೆಯುತ್ತೇವೆ ಎನ್ನುತ್ತಾರೆ ಕೊಟ್ಟೂರು ವಿದ್ಯುತ್ ಶಾಖ ಕಚೇರಿ ಎಇ ಚೇತನಕುಮಾರ್.