ಕನ್ನಡಪ್ರಭ ವಾರ್ತೆ ಜಮಖಂಡಿ
ವಕೀಲರು ಕಮೀಷನ್ ದಂಧೆ ಮಾಡುತ್ತಿಲ್ಲ, ಬದಲಾಗಿ ಬಡ ರೈತರಿಗೆ ಜನಸಾಮಾನ್ಯರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಜಮಖಂಡಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ದಾನಪ್ಪ ಜತ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹಾಗೂ ವಿಜಯಪುರ ನಗರ ಶಾಸಕ ಬಸವನಗೌಡ ಯತ್ನಾಳ ಅವರ ಹೇಳಿಕೆಯನ್ನು ವಿರೋಧಿಸಿ ಜಮಖಂಡಿ ಪಟ್ಟಣದ ವಕೀಲರ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸಿಎಂ ಡಿಕೆ ಶಿವಕುಮಾರ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗೆ ಆಕ್ರೋಶ ಹೊರಹಾಕಿದರು. ಅವರು ರೈತರ ಜಮೀನುಗಳ ಬೆಲೆ ಹೆಚ್ಚಳವಾಗಲು ರೈತ ಮತ್ತು ನ್ಯಾಯವಾದಿಗಳು ಕಾರಣರಲ್ಲ. ಸರ್ಕಾರದ ನಿಯಮಗಳೇ ಕಾರಣ ಎಂದು ಹೇಳಿದರು.ಶಾಸನ ಸಭೆಯಲ್ಲಿ ಜನರಿಗೆ ಅನುಕೂಲವಾಗುವ ಹೊಸ ಕಾನೂನುಗಳನ್ನು ಜಾರಿ ಮಾಡುವಾಗ ಸಚಿವರು ಹಾಗೂ ಅಧಿಕಾರಿಗಳು ಸಮಗ್ರವಾಗಿ ಯೋಚಿಸಬೇಕು ಮತ್ತು ಮುಂದಾಗುವ ಪರಿಣಾಮಗಳನ್ನು ಗಮನಿಸಿ ಜಾರಿ ಮಾಡಬೇಕು. ಸರಿಯಾದ ಜ್ಞಾನ ಹಾಗೂ ಮಾಹಿತಿ ಕೊರತೆಯಿಂದ ತಾವು ಮಾಡಿದ ತಪ್ಪನ್ನು ವಕೀಲರ ಮೇಲೆ ಹೇರುವುದು ಎಷ್ಟು ಸರಿ, ಇದು ಸರಿಯಾದ ಹೇಳಿಕೆಯಲ್ಲ ಎಂದರು.
ಬಳಿಕ ಹಿರಿಯ ವಕೀಲ ಎ.ಪಿ.ಕುಲಕರ್ಣಿ ಮಾತನಾಡಿ, ಯಾವುದೇ ವಕೀಲರು ಅಗತ್ಯಕ್ಕಿಂತ ಹೆಚ್ಚಿನ ಶುಲ್ಕ ಪಡೆದ ಒಂದೂ ಕೂಡ ಉದಾಹರಣೆ ಇಲ್ಲ. ವಕೀಲರು ಹೆಚ್ಚಿಗೆ ಶುಲ್ಕ ತೆಗೆದುಕೊಂಡರೆ ಬಾರ್ ಕೌನ್ಸಿಲ್‌ನಲ್ಲಿ ದೂರು ದಾಖಲಿಸಬಹುದು. ರೈತರು ಮತ್ತು ಕಕ್ಷಿದಾರರು ಜಾಣರಿರುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಸರ್ಕಾರಿ ವಕೀಲರು ಖಾಯಂ ಆಗಿ ಇರುವುದಿಲ್ಲ. ಸರ್ಕಾರ ಬದಲಾದಂತೆ ವಕೀಲರನ್ನು ಕೂಡ ಬದಲಾಯಿಸಲಾಗುತ್ತದೆ. ಎಲ್ಲಾ ಕಾನೂನು ಪ್ರಕ್ರಿಯೆಯನ್ನು ಅರ್ಥಮಾಡಿಕೊಂಡು ವಕೀಲರ ಬಗ್ಗೆ ಮಾತನಾಡಬೇಕು. ಈಗ ಹೇಳಿಕೆ ನೀಡಿದ್ದಕ್ಕೆ ವಕೀಲರ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.ಬಾಯಿ ಚಪಲಕ್ಕೆ ಮಾತನಾಡುವ ಶಾಸಕ ಬಸನಗೌಡ ಪಾಟೀಲ ಯತ್ನಾಳರು ಯುಕೆಪಿಗೆ ನ್ಯಾಯ ಒದಗಿಸುವ ಕೆಲಸ ಮಾಡಲಿ ಎಂದು ಹಿರಿಯ ವಕೀಲ ಸುತಾರ ಸಲಹೆ ನೀಡಿದರು. ಮತ್ತು ಹಿರಿಯ ನ್ಯಾಯವಾದಿ ಉದಪುಡಿ ಅವರು ಮಾತನಾಡಿ ಕಾನೂನಿನ ಬಗ್ಗೆ ತಿಳಿದುಕೊಂಡು ವಕೀಲರ ಬಗ್ಗೆ ಮಾತನಾಡಬೇಕು. ಹೇಳಿಕೆ ನೀಡಿದ್ದಕ್ಕೆ ವಕೀಲರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ನ್ಯಾಯವಾದಿಗಳಾದ ಅಕ್ಷಯ ಬಾಡಗಿ, ಲಕ್ಷ್ಮೀ ಸೌದಿ, ಎಸ್.ಆರ್.ಸೊರಗಾವಿ, ಕೂಡಗಿ, ಎಸ್.ಬಿ.ಕಾಳೆ, ಶಿವಾನಂದ ಪಾರಶೆಟ್ಟಿ ಮುಂತಾದವರು ಇದ್ದರು.