ಜಿಪಂ, ತಾಪಂ ಚುನಾವಣೆಗೆ ಸಜ್ಜಾಗಿ: ಯೋಗೇಶ್ವರ್

KannadaprabhaNewsNetwork |  
Published : Nov 14, 2026, 01:45 AM IST
ಪೋಟೊ೧೩ಸಿಪಿಟಿ೫: ಜಿಪಂ ತಾಪಂ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ನಿಗಮ ಮಂಡಳಿಗೆ ನೂತನ ಅಧ್ಯಕ್ಷ, ನಿರ್ದೇಶಕರಾಗಿ ಆಯ್ಕೆಯಾದವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಚನ್ನಪಟ್ಟಣ: ಜಿಪಂ, ತಾಪಂ ಚುನಾವಣೆಗೆ ಕಾಲ ಸನ್ನಿಹಿತವಾಗಿದ್ದು, ಕಾಲಹರಣ ಮಾಡದೇ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಈಗಿನಿಂದಲೇ ಚುನಾವಣೆಗೆ ಸಜ್ಜಾಗುವಂತೆ ಶಾಸಕ ಸಿ.ಪಿ.ಯೋಗೇಶ್ವರ್ ಕರೆ ನೀಡಿದರು

ಚನ್ನಪಟ್ಟಣ: ಜಿಪಂ, ತಾಪಂ ಚುನಾವಣೆಗೆ ಕಾಲ ಸನ್ನಿಹಿತವಾಗಿದ್ದು, ಕಾಲಹರಣ ಮಾಡದೇ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಈಗಿನಿಂದಲೇ ಚುನಾವಣೆಗೆ ಸಜ್ಜಾಗುವಂತೆ ಶಾಸಕ ಸಿ.ಪಿ.ಯೋಗೇಶ್ವರ್ ಕರೆ ನೀಡಿದರು.

ತಾಲೂಕಿನ ಮಳೂರು, ತಿಟ್ಟಮಾರನಹಳ್ಳಿ ಹಾಗೂ ಬೇವೂರು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪಂಚಾಯಿತಿ ಚುನಾವಣೆಗಳಲ್ಲಿ ಸ್ಪರ್ಧಿಸಲು ಆಸಕ್ತಿ ಹೊಂದಿರುವ ಆಕಾಂಕ್ಷಿಗಳ ಅಭಿಪ್ರಾಯ ಸಂಗ್ರಹಿಸುವ ಉದ್ದೇಶದಿಂದ ಪೂರ್ವಭಾವಿ ಸಭೆ ಕರೆಯಲಾಗಿದೆ. ಇಲ್ಲಿ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯಗಳನ್ನು ಸಂಗ್ರಹಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಎಲ್ಲರ ಅಭಿಪ್ರಾಯಗಳಿಗೆ ಮನ್ನಣೆ ನೀಡಲಾಗುವುದು ಎಂದರು.

ಚಳಿಗಾಲದ ಅವೇಶನದ ಬಳಿಕ ಚುನಾವಣೆ ಘೋಷಣೆಯಾಗುವ ಸಾಧ್ಯತೆಯಿದ್ದು, ಚುನಾವಣೆಗೆ ಎಲ್ಲರೂ ಸಿದ್ಧರಾಗುವಂತೆ ಸೂಚಿಸಿದ ಶಾಸಕರು ಮುಂಬರುವ ದಿನಗಳು ಸಾಲುಸಾಲು ಚುನಾವಣೆಗಳಿಂದ ಕೂಡಿರಲಿವೆ. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಹಾಗೂ ನಗರಸಭೆ ಚುನಾವಣೆಗಳು ಎದುರಾಗಲಿವೆ. ಹೀಗಾಗಿ ಕಾರ್ಯಕರ್ತರು ಈಗಿನಿಂದಲೇ ಸಂಘಟನಾತ್ಮಕವಾಗಿ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.

ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಎಲ್ಲರಿಗೂ ಅವಕಾಶ ಸಿಗಲಿದೆ. ಯಾರೂ ಆತುರಪಡದೆ ತಾಳ್ಮೆಯಿಂದ ಇರಬೇಕು. ನಿಮ್ಮ ವೈಯಕ್ತಿಕ ಸಮಸ್ಯೆ, ಭಿನ್ನಾಭಿಪ್ರಾಯ ಹಾಗೂ ಗೊಂದಲಗಳನ್ನು ಬದಿಗಿಟ್ಟು, ಪಕ್ಷ ಅಂತಿಮಗೊಳಿಸುವ ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲೆಯವರೇ ಮುಖ್ಯಮಂತ್ರಿಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಅಭಿವೃದ್ಧಿ ಹಾಗೂ ರಾಜಕೀಯ ಪ್ರಾತಿನಿಧ್ಯದ ದೃಷ್ಟಿಯಿಂದ ಈ ಚುನಾವಣೆ ನಮಗೆ ಪ್ರತಿಷ್ಠೆಯ ವಿಷಯವಾಗಿದೆ. ಜಿಲ್ಲೆಯ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕಾದರೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಲ್ಲಿ ನಮ್ಮ ಪಕ್ಷದ ಪ್ರತಿನಿಧಿಗಳು ಗೆದ್ದು ಬರಬೇಕು ಎಂದು ಹೇಳಿದರು.

ಚನ್ನಪಟ್ಟಣ ತಾಲೂಕಿನಲ್ಲಿ ಖಾಸಗಿ ಬಸ್ ನಿಲ್ದಾಣ ಕಾಮಗಾರಿ, ನೀರಾವರಿ ಯೋಜನೆಗಳು ಹಾಗೂ ಸತ್ತೆಗಾಲ ಯೋಜನೆ ಜಾರಿಯಾಗಬೇಕಿದೆ. ತಾಲೂಕಿನ ರಸ್ತೆಗಳ ಅಗಲೀಕರಣ ಮತ್ತು ಡಾಂಬರೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ರಾಜ್ಯದ ಗಮನ ಸೆಳೆದಿರುವ ಹೈನುಗಾರಿಕೆಗೆ ಮತ್ತಷ್ಟು ಉತ್ತೇಜನ ನೀಡುವ ಉದ್ದೇಶದಿಂದ ಪಶು ಆಹಾರ ತಯಾರಿಕಾ ಘಟಕ ಸ್ಥಾಪನೆ, ಪಶುಸಂಗೋಪನೆಯ ಸಮಗ್ರ ಅಭಿವೃದ್ಧಿಗಾಗಿ ೧೦೦ ಎಕರೆ ಪ್ರದೇಶದಲ್ಲಿ ಮಾದರಿ ಪಾರ್ಕ್ ನಿರ್ಮಾಣ ಸೇರಿದಂತೆ ಹತ್ತಾರು ಅಭಿವೃದ್ಧಿ ಯೋಜನೆಗಳಿಗೆ ಮುನ್ನುಡಿ ಬರೆಯಲಾಗಿದೆ. ಈ ಎಲ್ಲ ಯೋಜನೆಗಳು ಸಾಕಾರಗೊಳ್ಳಬೇಕಾದರೆ ಸ್ಥಳೀಯ ಸಂಸ್ಥೆಗಳಲ್ಲಿ ನಮ್ಮ ಪ್ರತಿನಿಗಳು ಆಯ್ಕೆಯಾಗುವುದು ಅತ್ಯಗತ್ಯ ಎಂದರು.

ಸಭೆಯಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಸ್.ಆರ್. ಪ್ರಮೋದ್, ಸುನೀಲ್, ಬಮೂಲ್ ನಿರ್ದೇಶಕ ಲಿಂಗೇಶ್ ಕುಮಾರ್, ಸಿ.ಪಿ.ರಾಜೇಶ್, ಶಿವಣ್ಣ, ಕೂಡ್ಲೂರು ದಿನೇಶ್, ಕರುಣ್ ಆನಂದ್, ರಾಂಪುರ ಮಲವೇಗೌಡ, ಪುಟ್ಟಸ್ವಾಮಿ, ರಮೇಶ್, ಪ್ರಧಾನರ ರಾಜು, ಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.

ಸಭೆಯಲ್ಲಿ ಮಳೂರು, ತಿಟ್ಟಮಾರನಹಳ್ಳಿ ಹಾಗೂ ಬೇವೂರು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ವ್ಯಾಪ್ತಿಯ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು. ಈ ಪೈಕಿ ಮೂರು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪ್ರಮುಖ ಆಕಾಂಕ್ಷಿಗಳು ತಮ್ಮ ಸ್ಪರ್ಧೆಗೆ ಅವಕಾಶ ಕಲ್ಪಿಸಿಕೊಡುವಂತೆ ಶಾಸಕರು ಹಾಗೂ ಮುಖಂಡರಲ್ಲಿ ಮನವಿ ಮಾಡಿಕೊಂಡರು.

ಪೋಟೊ೧೩ಸಿಪಿಟಿ೫: ಜಿಪಂ ತಾಪಂ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ನಿಗಮ ಮಂಡಳಿಗೆ ನೂತನ ಅಧ್ಯಕ್ಷ, ನಿರ್ದೇಶಕರಾಗಿ ಆಯ್ಕೆಯಾದವರನ್ನು ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಸರ್ವತೋಮುಖ ಪ್ರಗತಿಗೆ ಶ್ರಮಿಸಿ
ಎಸಿಯಾಗಿ ಪದೋನ್ನತಿ ಹೊಂದಿದ ತಹಸೀಲ್ದಾರ್‌ ಬೋಸಗಿ