ನೀರಿಗಾಗಿ ಆಗ್ರಹಿಸಿದ್ದ ಜೆಜೆ ಹಳ್ಳಿ ಬಂದ್ ಯಶಸ್ವಿ

KannadaprabhaNewsNetwork |  
Published : Jun 11, 2024, 01:37 AM IST
ಚಿತ್ರ 3 | Kannada Prabha

ಸಾರಾಂಶ

ಜೆಜೆಹಳ್ಳಿ ಹೋಬಳಿ ಕೆರೆಗಳಿಗೆ ವಿವಿ ಸಾಗರದ ನೀರು ಹರಿಸಿ ಎಂದು ಆಗ್ರಹಿಸಿ ರೈತ ಸಂಘ ಹಾಗೂ ಹಸಿರುಸೇನೆಯಿಂದ ಜೆಜೆ ಹಳ್ಳಿ ಬಂದ್ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಹಿರಿಯೂರು

ತಾಲೂಕಿನ ಜವನಗೊಂಡನ ಹಳ್ಳಿ ಹೋಬಳಿ ಕೆರೆಗಳಿಗೆ ವಿವಿ ಸಾಗರದಿಂದ ನೀರು ಹರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಸೋಮವಾರ ಜವನಗೊಂಡನಹಳ್ಳಿ ಬಂದ್‌ಗೆ ಕರೆ ನೀಡಿದ್ದು ಭಾಗಶಃ ಯಶಸ್ವಿಯಾಯಿತು.

ವ್ಯಾಪಾರಿಗಳು ಅಂಗಡಿ ಮುಂಗಟ್ಟು ಸ್ವಯಂ ಪ್ರೇರಿತರಾಗಿ ಮುಚ್ಚಿ ಬಂದ್‌ಗೆ ಬೆಂಬಲ ಸೂಚಿಸಿದರು. ಬಂದ್‌ನ ನೇತೃತ್ವ ವಹಿಸಿದ್ದ ರೈತ ಸಂಘದ ತಾಲೂಕು ಅಧ್ಯಕ್ಷ ಕೆಟಿ ತಿಪ್ಪೇಸ್ವಾಮಿ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆಯಿಂದ ವಾಣಿ ವಿಲಾಸ ಜಲಾಶಯಕ್ಕೆ ನೀರು ಹರಿಸುವ ಯೋಜನೆ ಸುಲಭವಾಗಿ ಮಾಡಬಹುದಿತ್ತು. ಆದರೆ ದುಡ್ಡು ಮಾಡುವ ನಿಟ್ಟಿನಲ್ಲಿ ಕಾಮಗಾರಿ ದಿಕ್ಕು ತಪ್ಪಿಸಲಾಯಿತು. ಭೂ ಸ್ವಾಧೀನ ಪ್ರಕ್ರಿಯೆ ಸೇರಿ ವಿವಿಧ ಕಾರಣಗಳಿಂದ ಕಾಮಗಾರಿ

ವಿಳಂಬವಾಗುತ್ತಲೇ ಇದೆ. ಅದಕ್ಕೆಂತಲೇ ರೈತರು ಹೋರಾಟ ಹಮ್ಮಿಕೊಂಡು ಸತತವಾಗಿ 543 ದಿನ ಹೋರಾಟ ನಡೆಸಿದರು. ಆಗಿನ ನೀರಾವರಿ ಸಚಿವ ಬಸವರಾಜ್ ಬೊಮ್ಮಾಯಿ ಸ್ಥಳಕ್ಕೆ ಬಂದು ಭರವಸೆ ನೀಡಿದ್ದರು.

ತಾಲೂಕಿನಲ್ಲಿ ಡ್ಯಾಂ ಇದ್ದರೂ ಸಹ ತಾಲೂಕಿನ ಜನರಿಗೆ ನೀರು ಸಿಗದಿರುವುದು ದುರಂತ. ಗಾಯಿತ್ರಿ ಜಲಾಶಯ ಸೇರಿ ಸುಮಾರು 15 ಕೆರೆಗಳಿಗೆ ನೀರು ಹರಿಸಿದರೆ ಈ ಭಾಗದ ರೈತರ ಬದುಕಾದರೂ ಹಸನಾಗುತ್ತದೆ. ಬೇಸಿಗೆ ಬಂದರೆ ಸಾಕು ನೀರಿನ ಹಾಹಾಕಾರ ತಾಲೂಕಿನಲ್ಲಿ ಮೊದಲು ತಟ್ಟುವುದೇ ಈ ಹೋಬಳಿಗೆ. ಹಾಗಾಗಿ ಈ ಭಾಗದ ಕೆರೆಗಳಿಗೆ ವಿವಿ ಸಾಗರದ ನೀರು ಹರಿಸುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದರು.

ಮುಖಂಡ ಜೆಜಿ ಹಳ್ಳಿ ಮಂಜುನಾಥ್ ಮಾತನಾಡಿ, ನಮ್ಮ ಹೋಬಳಿಯಲ್ಲಿ ಹೋರಾಟ ಇಲ್ಲದಿರುವುದರಿಂದ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದೇವೆ. ತಾಲೂಕು ಅಭಿವೃದ್ಧಿಯಾಗಲಿ ಎಂದು ನಾವು ಶ್ರಮ ಹಾಕಿ ಜನಪ್ರತಿನಿಧಿ ಗೆಲ್ಲಿಸಿದರೆ ಅವರೇ ಅಭಿವೃದ್ಧಿಯಾಗುತ್ತಿದ್ದಾರೆ. ಶಿರಾ ಶಾಸಕ ಟಿಬಿ ಜಯಚಂದ್ರರವರು ಕೃಷಿ ಮತ್ತು ನೀರಾವರಿಗೆ ಕೊಡುವ ಆದ್ಯತೆ ನಮ್ಮಲ್ಲೂ ಆಗಬೇಕಿದೆ. ಇತ್ತೀಚಿಗಷ್ಟೇ ಸಂಸದರಾಗಿ ಆಯ್ಕೆಯಾಗಿರುವ ಗೋವಿಂದ ಕಾರಜೋಳರು ಜವನಗೊಂಡನಹಳ್ಳಿ ಹೋಬಳಿ ಭಾಗದಲ್ಲಿ ನೀರಿನ ಸಮಸ್ಯೆ ನಿವಾರಣೆ ಮಾಡಲು ಭರವಸೆ ನೀಡಿರುವುದು ಸದ್ಯದ ಆಶಾದಾಯಕ ಬೆಳವಣಿಗೆ ಎಂದರು.

ಜಿಪಂ ಮಾಜಿ ಸದಸ್ಯ ಸಿಬಿ ಪಾಪಣ್ಣ ಮಾತನಾಡಿ, ಕಳೆದ ಆರು ತಿಂಗಳ ಹಿಂದೆ ಚಿಕ್ಕನಾಯಕನಹಳ್ಳಿ ತಾಲೂಕಿನ ಬೋರನಕಣಿವೆ ಜಲಾಶಯದಿಂದ ಗಾಯಿತ್ರಿ ಜಲಾಶಯಕ್ಕೆ ನೀರು ಹರಿಸುವಂತೆ ಒತ್ತಾಯಿಸಲಾಗಿತ್ತು.

27 ಕಿಲೋಮೀಟರ್ ದೂರದಿಂದ 14 ಚೆಕ್ ಡ್ಯಾಂ ತುಂಬಿಕೊಂಡು ಗಾಯಿತ್ರಿ ಜಲಾಶಯಕ್ಕೆ ನೀರು ಹರಿಸಲಾಯಿತು.

ಮೊಳಕಾಲ್ಮುರು, ಚಳ್ಳಕೆರೆ, ಆಂಧ್ರಪ್ರದೇಶದವರೆಗೂ ವಿವಿ ಸಾಗರದ ನೀರು ಹರಿಸುತ್ತಾರೆ. ಆದರೆ ಇಲ್ಲಿನವರಿಗೆ ನೀರು ಸಿಗುತ್ತಿಲ್ಲ. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಬೇಕಿದೆ. ಮಾಜಿ ಸಂಸದ ಕೋದಂಡರಾಮಯ್ಯ ಅವರು ನೀರಿನ ಹೋರಾಟಕ್ಕೆ ಧುಮುಕಿದ ಪರಿಣಾಮ ಇಂದು ಭದ್ರಾ ಮೇಲ್ದಂಡೆ ಯೋಜನೆಯಿಂದ ವಿವಿ ಸಾಗರ ಡ್ಯಾಂಗೆ ನೀರು ಬರಲು ಸಾಧ್ಯವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ರಿಗೆ ಈ ಭಾಗಕ್ಕೆ ನೀರು ತರುವುದು ದೊಡ್ಡ ಸವಾಲು ಅಲ್ಲ. ಜವನಗೊಂಡನಹಳ್ಳಿ ಹೋಬಳಿಗೆ ನೀರು ಕೊಡಲಾಗುತ್ತದೆ ಎಂದು ಕಾಮಗಾರಿ ಮಾಡಲಾಗುತ್ತಿದೆ. ನೀರೇ ಇಲ್ಲದಿರುವುದರಿಂದ ಕಾಮಗಾರಿ ಯಾಕೆ ಆರಂಭಿಸಿದ್ದಾರೆ ಎಂದು ತಿಳಿಯುತ್ತಿಲ್ಲ. ಗಾಯಿತ್ರಿ ಜಲಾಶಯಕ್ಕೆ ಮೊದಲು ನೀರಿನ ಅಲೋಕೆಷನ್ ಮಾಡಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆ ಸ್ಥಳಕ್ಕೆ ತಹಸೀಲ್ದಾರ್ ರಾಜೇಶ್ ಕುಮಾರ್ ಭೇಟಿ ನೀಡಿ ಮನವಿ ಸ್ವೀಕರಿಸಿ ಮಾತನಾಡಿ, ಸರ್ಕಾರಕ್ಕೆ ನಿಮ್ಮ ಬೇಡಿಕೆ ತಲುಪಿಸುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಜೆಜೆ ಹಳ್ಳಿ ಹೋಬಳಿ ತಾಲೂಕಿನಲ್ಲಿಯೇ ಅತ್ಯಂತ ಹೆಚ್ಚಿನ ನೀರಿನ ತೊಂದರೆ ಅನುಭವಿಸುವ ಹೋಬಳಿಯಾಗಿದೆ. ಬೇಸಿಗೆ ಬಂದರೆ ಸಾಕು ರೈತರ ಜಮೀನು ಜೊತೆಗೆ ಜನರಿಗೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿಬಿಡುತ್ತದೆ. ನಮ್ಮ ಪಂಚಾಯ್ತಿ ವ್ಯಾಪ್ತಿಯ ಅರಿಶಿನಗುಂಡಿ ಮತ್ತು ಹೊನ್ನಾಳ್ ಕೆರೆಗೆ ನೀರು ಹರಿದರೆ ಯಲ್ಲದಕೆರೆ ಪಂಚಾಯ್ತಿ ವ್ಯಾಪ್ತಿಯ ಬಹಳಷ್ಟು ಹಳ್ಳಿಗಳಿಗೆ ನೀರಿನ ತೊಂದರೆ ತಪ್ಪುತ್ತದೆ. ಹಾಗಾಗಿ ಆದಷ್ಟು ಬೇಗ ನಮ್ಮ ಹೋಬಳಿ ಕೆರೆಗಳಿಗೆ ನೀರು ತುಂಬಿಸುವ ಕೆಲಸವಾಗಬೇಕಿದೆ.

ಚಂದ್ರು ಬ್ಯಾರಮಡು, ಯಲ್ಲದಕೆರೆ ಗ್ರಾಪಂ ಸದಸ್ಯರು.

ಈ ವೇಳೆ ರೈತ ಮುಖಂಡರಾದ ಆಲೂರು ಸಿದ್ದರಾಮಣ್ಣ, ಹುಣಸೆಹಳ್ಳಿ ಶಶಿಧರ್, ಎಸ್.ಟಿ. ಮಂಜಣ್ಣ, ಜೆಜೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಅಲ್ತಾಫ್, ಕರಿಯಾಲ ಪಂಚಾಯ್ತಿ ಅಧ್ಯಕ್ಷೆ ವಿಜಯಮ್ಮ, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಸಣ್ಣತಿಮ್ಮರಾಯಪ್ಪ, ಕಣ್ಣಪ್ಪ, ಎಂಆರ್ ವೀರಣ್ಣ, ಗೋವಿಂದರಾಜು, ಪಿ ಎಸ್ ಪಾತಯ್ಯ, ರಂಗಸ್ವಾಮಿ, ಶಿವಣ್ಣ, ಕೆಆರ್ ಹಳ್ಳಿ ರಾಜಣ್ಣ, ವೀರಣ್ಣ ಮುಂತಾದ ನೂರಾರು ರೈತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತೈಲ ಸುಂಕ ವಿನಾಯ್ತಿ ಚುನಾವಣಾ ಗಿಮಿಕ್‌: ಕಾಂಗ್ರೆಸ್‌
ದಾವಣಗೆರೆ ದಕ್ಷಿಣ ಕೈ ಬಂಡಾಯ ಶಮನ