ಜೆಜೆಎಂ ಸಮಸ್ಯೆ: ಮುಂದಿನ ವಾರ ಪ್ರತ್ಯೇಕ ಸಭೆ

KannadaprabhaNewsNetwork |  
Published : Jun 25, 2025, 01:18 AM IST
ಪರಮೇಶ್ವರ್ | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಕೈಗೊಂಡಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲ್ ಜೀವನ್ ಮಿಷನ್(ಜೆಜೆಎಂ) ಯೋಜನೆಯ ಕಾಮಗಾರಿಗಳ ಪ್ರಗತಿ ಪರಿಶೀಲಿಸಲು ಮುಂದಿನ ವಾರ ಪ್ರತ್ಯೇಕ ಸಭೆ ನಡೆಸಲು ದಿನಾಂಕ ನಿಗಧಿಗೊಳಿಸಲು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್‌ ಅವರು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಅವರಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರುಜಿಲ್ಲೆಯಲ್ಲಿ ಕೈಗೊಂಡಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲ್ ಜೀವನ್ ಮಿಷನ್(ಜೆಜೆಎಂ) ಯೋಜನೆಯ ಕಾಮಗಾರಿಗಳ ಪ್ರಗತಿ ಪರಿಶೀಲಿಸಲು ಮುಂದಿನ ವಾರ ಪ್ರತ್ಯೇಕ ಸಭೆ ನಡೆಸಲು ದಿನಾಂಕ ನಿಗಧಿಗೊಳಿಸಲು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್‌ ಅವರು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಅವರಿಗೆ ಸೂಚಿಸಿದರು. ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ 2024-25ನೇ ಸಾಲಿನ ತ್ರೈಮಾಸಿಕ ಕೆ.ಡಿ.ಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.ಜೆಜೆಎಂ ಪ್ರಗತಿ ಪರಿಶೀಲನಾ ಸಭೆಗೆ ಜಿಲ್ಲೆಯ ಎಲ್ಲಾ ಶಾಸಕರನ್ನು ಆಹ್ವಾನಿಸಿ ಕೂಲಂಕುಷವಾಗಿ ಚರ್ಚಿಸಲಾಗುವುದು ಎಂದು ತಿಳಿಸಿದ ಅವರು, ಮನೆ-ಮನೆಗೆ ಕುಡಿಯುವ ನೀರೊದಗಿಸಲು ಕಳೆದ 2021 ರಿಂದ ಈವರೆಗೂ ಜಿಲ್ಲೆಯಲ್ಲಿ 4 ಹಂತಗಳಲ್ಲಿ ಜೆಜೆಎಂ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಅನುಮೋದಿತ ಒಟ್ಟು 3699 ಜೆಜೆಎಂ ಕಾಮಗಾರಿಗಳ ಪೈಕಿ 1449 ಕಾಮಗಾರಿಗಳನ್ನು ಮಾತ್ರ ಪೂರ್ಣಗೊಳಿಸಲಾಗಿದೆ. ಯೋಜನೆ ಕೈಗೆತ್ತಿಕೊಂಡು 4 ವರ್ಷಗಳು ಕಳೆದರೂ ಇನ್ನೂ ಪ್ರಗತಿಯಲ್ಲಿಯೇ ಇದೆ ಎಂದು ವರದಿಯಲ್ಲಿ ನೀಡಲಾಗಿದೆ. ಮೂಲಭೂತ ಸೌಕರ್ಯಗಳಲ್ಲೊಂದಾದ ಕುಡಿಯುವ ನೀರನ್ನು ಒದಗಿಸುವುದು ಅಧಿಕಾರಿಗಳ ಜವಾಬ್ದಾರಿ. ಟೆಂಡರ್ ಕರೆದಿರುವ ಎಲ್ಲ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿದರು. ಶಾಸಕ ಬಿ.ಸುರೇಶ್ ಗೌಡ ಮಾತನಾಡಿ, ಜೆಜೆಎಂ ಯೋಜನೆಯಡಿ ಟೆಂಡರ್ ಕರೆದಿರುವ 3699 ಕಾಮಗಾರಿಗಳ ಪೈಕಿ 48 ಕಾಮಗಾರಿಗಳನ್ನು ರದ್ದುಪಡಿಸಲಾಗಿದೆ. ಕಾಮಗಾರಿಗಳನ್ನು ರದ್ದುಪಡಿಸಲು ಕಾರಣವೇನು? ಮರು ಟೆಂಡರ್ ಕರೆಯಲು ಕ್ರಮ ಕೈಗೊಂಡಿಲ್ಲ. ಕೆಲವು ಗುತ್ತಿಗೆದಾರರಿಗೆ ಈವರೆಗೂ ಕಾರ್ಯಾದೇಶ ನೀಡಿಲ್ಲ. ಕಾರಣವೇನೆಂದು ಪ್ರಶ್ನಿಸಿದ ಅವರು ಆಡಳಿತ ವ್ಯವಸ್ಥೆಯ ನ್ಯೂನ್ಯತೆಗಳನ್ನು ಸರಿಪಡಿಸಲು ವಿಪಕ್ಷದವರು ನೀಡುವ ಸಲಹೆಗಳನ್ನು ಅಧಿಕಾರಿಗಳು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಶಾಸಕರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾ ಪಂಚಾಯತಿ ಸಿಇಓ ಜಿ. ಪ್ರಭು ಅವರು, ನಿಗದಿತ ಅವಧಿಯೊಳಗೆ ಜೆಜೆಎಂ ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರಿಗೆ ದಂಡ ವಿಧಿಸಲಾಗುತ್ತಿದೆ. ದಂಡಕ್ಕೆ ಹೆದರಿ ಕೆಲವು ಗುತ್ತಿಗೆದಾರರು ಕಾಮಗಾರಿಯ ಕಾರ್ಯಾದೇಶ ಪಡೆಯಲು ಮುಂದಾಗುತ್ತಿಲ್ಲ ಎಂದರು. ನಂತರ ರಾಷ್ಟ್ರೀಯ ಹೆದ್ದಾರಿಗಳ ಪ್ರಗತಿ ಪರಿಶೀಲಿಸಿದ ಸಚಿವರು, ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಗುಂಡಿಗಳನ್ನು ಮುಚ್ಚಲು ಅಧಿಕಾರಿಗಳು ಈವರೆಗೂ ಕ್ರಮ ಕೈಗೊಂಡಿಲ್ಲ. ಮಧುಗಿರಿ, ಬಟವಾಡಿ ಹಾಗೂ ಬೆಳಗುಂಬ ರಸ್ತೆಯ ಕೆಳ ಸೇತುವೆಯಲ್ಲಿ ಮಳೆ ನೀರು ನಿಲ್ಲದಂತೆ ಕಳೆದ ಸಭೆಯಲ್ಲಿಯೇ ನಿರ್ದೇಶನ ನೀಡಿದ್ದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಬೆಂಗಳೂರಿನಲ್ಲಿ ಮಳೆ ನೀರಿನಿಂದ ಜೀವ ಹಾನಿಗಳಾಗಿವೆ. ಕೂಡಲೇ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಗುಂಡಿಗಳನ್ನು ಮುಚ್ಚಬೇಕು. ನಿರ್ಲಕ್ಷ್ಯ ತೋರಿದರೆ ಕೇಂದ್ರ ಸಚಿವರಿಗೆ ದೂರು ನೀಡಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಅನೂಪ್ ಅವರಿಗೆ ಸೂಚನೆ ನೀಡಿದರು. ಪರಿಸರಕ್ಕೆ ಹಾನಿಯುಂಟಾಗುವುದರಿಂದ ಜಿಲ್ಲೆಯಲ್ಲಿ ಯಾವುದೇ ರೀತಿಯ ಗಣಿಗಾರಿಕೆಗೆ (ಮೈನಿಂಗ್) ಅವಕಾಶ ನೀಡಬಾರದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲೆಯ ಎಲ್ಲಾ ಉಪವಿಭಾಗಾಧಿಕಾರಿ, ತಹಸೀಲ್ದಾರರಿಗೆ ಖಡಕ್ ಸೂಚನೆ ನೀಡಿದರು.ಕೇಂದ್ರ ಸ್ಥಾನದಲ್ಲಿರದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇನ್ನು ಮುಂದೆ ಅಧಿಕಾರಿಗಳು ಕಡ್ಡಾಯವಾಗಿ ದಿನಚರಿ ನಿರ್ವಹಣೆ ಮಾಡಬೇಕು ಎಂದು ಎಚ್ಚರಿಕೆ ನೀಡಿದರು. ಸಭೆಯಲ್ಲಿ ಶಾಸಕರಾದ ಜಿ.ಬಿ. ಜ್ಯೋತಿಗಣೇಶ್, ಷಡಾಕ್ಷರಿ, ಸುರೇಶ್ ಬಾಬು, ಡಾ. ಹೆಚ್.ಡಿ. ರಂಗನಾಥ್, ಎಸ್.ಆರ್. ಶ್ರೀನಿವಾಸ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮಾ ಸೇರಿದಂತೆ ಜಿಲ್ಲಾ ಹಾಗೂ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

PREV

Recommended Stories

ವಿದ್ಯಾರ್ಥಿಗಳು ಸರ್ಕಾರಿ ಯೋಜನೆ ಸದುಪಯೋಗ ಪಡೆದುಕೊಳ್ಳಿ
ಗುರು, ಶಿಷ್ಯರದು ಜಗತ್ತಿನ ಶ್ರೇಷ್ಠ ಸಂಬಂಧ