ಕುಷ್ಟಗಿ: ಕಳೆದ ಸುಮಾರು 15 ದಿನಗಳಿಂದ ಜೆಜೆಎಂ ಪೈಪಿನಿಂದ ನೀರು ಪೋಲಾಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ ಎನ್ನುವುದು ವಿಪರ್ಯಾಸದ ಸಂಗತಿ.
ತಾಲೂಕಿನ ಕೇಸೂರು ಗ್ರಾಪಂ ಆಡಳಿತ ಕೇಂದ್ರ ಸ್ಥಾನವಾದ ಕೇಸೂರು ಗ್ರಾಮದ ಎರಡನೇ ವಾರ್ಡಿನ ಜನತಾ ಕಾಲೋನಿಯಲ್ಲಿ ಸುಮಾರು 15 ದಿನಗಳ ಹಿಂದೆ ಜೆಜೆಎಂನವರು ನೆಲದೊಳಗೆ ಹಾಕಲಾದ ಪೈಪ್‌ಗಳಿಗೆ ಹಾನಿಯಾಗಿದೆ. ಪೈಪುಗಳ ಒಳಗೆ ಹೋಗುವ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವ ಆರೋಪವಿದೆ.ಕಳೆದ 15 ದಿನಗಳಿಂದ ಈ ಕಾಲೋನಿಯಲ್ಲಿ ಎರಡು ಮೂರು ಕಡೆ ನೀರು ಸೋರಿಕೆಯಾಗುವ ಮೂಲಕ ಪೋಲಾಗುತ್ತಿದೆ. ಸಾವಿರಾರು ಲೀಟರ್ ನೀರು ವ್ಯರ್ಥವಾಗುತ್ತಿದೆ. ಪರಿಣಾಮ ಇಲ್ಲಿ ಸಮರ್ಪಕ ಚರಂಡಿ ಹಾಗೂ ಸಿಸಿ ರಸ್ತೆ ಇರಲಾರದ ಕಾರಣ ಮುಖ್ಯ ರಸ್ತೆಯ ಮೇಲೆ ಹರಿದು ಮುಂದಕ್ಕೆ ಹೋಗದೆ ನಿಂತಲ್ಲೆ ನಿಂತುಕೊಂಡಿದೆ. ಇದರಿಂದ ದುರ್ವಾಸನೆ ಬೀರುತ್ತಿದೆ. ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
ಈ ಕುರಿತು ಗ್ರಾಪಂ ಸಿಬ್ಬಂದಿ ನೀರುಗಂಟಿಗಳನ್ನು ವಿಚಾರಿಸಿದಾಗ ನಮ್ಮ ಕೈನಲ್ಲಿ ಆಗುವಂತಹ ಎಲ್ಲ ಕೆಲಸಗಳನ್ನು ಮಾಡಲಾಗುತ್ತದೆ. ಇದು ಜೆಜೆಎಂ ಕಾಮಗಾರಿಯಾಗಿದ್ದು, ನಾವು ಕೆಲಸ ಮಾಡಲು ನಮ್ಮ ಹತ್ತಿರ ಸಾಮಗ್ರಿಗಳಿಲ್ಲ. ಅವರೇ ಬಂದು ಮಾಡಿಕೊಡಬೇಕು ಎಂದು ಸಬೂಬು ನೀಡುತ್ತಾರೆ.ಕೇಸೂರು ಗ್ರಾಮದಲ್ಲಿ ಜೆಜೆಎಂ ಪೈಪ್ ಸೋರಿಕೆ ಆಗುತ್ತಿರುವ ಕುರಿತು ಮಾಹಿತಿ ಇದ್ದು, ಗ್ರಾಪಂ ಸಿಬ್ಬಂದಿಯಿಂದ ದುರಸ್ತಿ ಮಾಡಲು ಸಾಧ್ಯವಾಗದ ಕಾರಣ. ಜೆಜೆಎಂ ಸಂಬಂಧಪಟ್ಟ ಎಂಜಿನಿಯರ್‌ಗೆ ತಿಳಿಸಲಾಗಿದೆ. ಅವರು ಬಂದು ದುರಸ್ತಿ ಮಾಡಿಕೊಡಬೇಕಾಗಿದೆ. ರಸ್ತೆ ಮೇಲೆ ಹರಿಯುವ ನೀರನ್ನು ಒಂದೆಡೆ ಸೇರಿಸಲು ತಾತ್ಕಾಲಿಕವಾಗಿ ಬೃಹತ್ ಪ್ರಮಾಣದ ಇಂಗುಗುಂಡಿ ನಿರ್ಮಾಣ ಮಾಡಿಕೊಡಲಾಗುತ್ತದೆ. ಇನ್ನೊಮ್ಮೆ ಅವರನ್ನು ಸಂಪರ್ಕಿಸಿ ಅತೀ ಶೀಘ್ರದಲ್ಲಿ ನೀರಿನ ಸೋರಿಕೆ ಸಮಸ್ಯೆ ಬಗೆಹರಿಸಿಕೊಡಲಾಗುವುದು ಎನ್ನುತ್ತಾರೆ ಕೇಸೂರು ಪಿಡಿಒ ಅಮೀನಸಾಬ ಅಲಾಂದಾರ.
ಕುಷ್ಟಗಿ ತಾಲೂಕಿನ ಕೇಸೂರು ಗ್ರಾಮದಲ್ಲಿ ಸೋರಿಕೆ ಆಗಿರುವಂತಹ ಕೆಲಸಗಳನ್ನು ಒಂದೊಂದಾಗಿ ಮಾಡಿಕೊಳ್ಳುತ್ತಾ ಬರುತ್ತಿದ್ದಾರೆ. ಇದನ್ನು ಸಹಿತ ದುರಸ್ತಿ ಮಾಡಿಸಿಕೊಡಲಾಗುತ್ತದೆ ಎನ್ನುತ್ತಾತೆ ಎಇಇ ಆರ್‌ಡಬ್ಲ್ಯೂಎಸ್ ವಿಜಯಕುಮಾರ.