ರಾಜ್ಯದ ಎಲ್ಲ ಸರ್ಕಾರಿ ವಿವಿ, ಕಾಲೇಜಲ್ಲಿ ಇನ್ಮುಂದೆ ಒಂದೇ ಶುಲ್ಕ

KannadaprabhaNewsNetwork | Published : Jan 4, 2024 1:45 AM

ಸಾರಾಂಶ

ರಾಜ್ಯದಲ್ಲಿ ಒಂದೊಂದು ವಿಶ್ವವಿದ್ಯಾಲಯಗಳಲ್ಲಿ ಒಂದೊಂದು ಶುಲ್ಕವಿದ್ದು ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತಿದ್ದ ಕಾರಣ ರಾಜ್ಯ ಸರ್ಕಾರ ರಾಜ್ಯದ ಎಲ್ಲ ಸರ್ಕಾರಿ ವಿಶ್ವವಿದ್ಯಾಲಯಗಳಿಲ್ಲಿಯೂ ಏಕರೂಪ ಶುಲ್ಕವನ್ನು ನಿಗದಿಪಡಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಉನ್ನತ ಶಿಕ್ಷಣದ ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಕಲಾ, ವಿಜ್ಞಾನ, ವಾಣಿಜ್ಯ, ವ್ಯವಹಾರ ಸೇರಿದಂತೆ ವಿವಿಧ ವಿಭಾಗಗಳಡಿ ಬರುವ ಪ್ರತಿಯೊಂದು ಕೋರ್ಸುಗಳಿಗೂ ರಾಜ್ಯದ ಎಲ್ಲಾ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲೂ ಏಕರೂಪ ಅಥವಾ ಒಂದೇ ಮಾದರಿಯ ಶುಲ್ಕ ನಿಗದಿಪಡಿಸಿ ರಾಜ್ಯ ಸರ್ಕಾರ ಆದೇಶಿಸಿದೆ.ಪರಿಣಾಮ- ಇನ್ನು ಮುಂದೆ ಒಂದೇ ಕೋರ್ಸಿಗೆ ಒಂದೊಂದು ವಿವಿಯಲ್ಲಿ ಒಂದೊಂದು ಶುಲ್ಕ ಇರುವುದಿಲ್ಲ. ಉದಾಹರಣೆಗೆ ಬೆಂಗಳೂರು ವಿವಿಯಲ್ಲಿ ಯಾವುದೇ ಬಿಎ ಕೋರ್ಸಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿ ಹಾಗೂ ಬೆಳಗಾವಿಯ ರಾಣಿ ಚೆನ್ನಮ್ಮ ವಿವಿಯಲ್ಲಿ ಬಿಎ ಕೋರ್ಸಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿ ಅಥವಾ ಇನ್ಯಾವುದೇ ವಿವಿಯ ವಿದ್ಯಾರ್ಥಿ ಎಲ್ಲರಿಗೂ ಒಂದೇ ರೀತಿಯ ಶುಲ್ಕ ಇರುತ್ತದೆ. ಪ್ರವೇಶ ಶುಲ್ಕ ಮಾತ್ರವಲ್ಲ, ಪರೀಕ್ಷಾ ಶುಲ್ಕ, ಲೈಬ್ರರಿ ಶುಲ್ಕ, ವಿದ್ಯಾರ್ಥಿ ನಿಧಿ, ಬೋಧನಾ ಶುಲ್ಕ ಸೇರಿದಂತೆ ಯಾವ್ಯಾವ ರೀತಿಯ ಶುಲ್ಕಗಳಿವೆಯೋ ಎಲ್ಲವೂ ಏಕ ಮಾದರಿಯಲ್ಲಿರುತ್ತದೆ. ಈ ಸಂಬಂಧ ರಾಜ್ಯದ ಎಲ್ಲಾ ವಿವಿಗಳ ಕುಲಪತಿಗಳು ಮತ್ತು ಕುಲ ಸಚಿವರಿಗೆ ಪತ್ರ ಬರೆದಿರುವ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರು, ಎಲ್ಲ ವಿವಿಗಳಲ್ಲಿ ಏಕರೂಪ ವಿದ್ಯಾರ್ಥಿ ಶುಲ್ಕ ಮತ್ತು ಪರೀಕ್ಷಾ ಶುಲ್ಕ ನಿಗದಿಪಡಿಸಲು ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷರಾಗಿದ್ದ ಪ್ರೊ.ಸಿದ್ದೇಗೌಡ ಅವರ ನೇತೃತ್ವದ ಸಮಿತಿ ರಚಿಸಲಾಗಿತ್ತು. ಈ ಸಮಿತಿಯು ತಯಾರಿಸಿ ಕೊಟ್ಟ ಏಕರೂಪ ಶುಲ್ಕದ ವರದಿಗೆ ಸರ್ಕಾರ ಅನುಮೋದನೆ ನೀಡಿದ್ದು, ಮುಂಬರುವ ಶೈಕ್ಷಣಿಕ ಸಾಲಿನಿಂದ ಇದನ್ನು ತಮ್ಮ ವಿವಿಗಳಲ್ಲಿ ಅಳವಡಿಸಿಕೊಂಡು ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಸರ್ಕಾರದ ಈ ಆದೇಶದಿಂದ ನಿಗದಿತ ಏಕರೂಪ ಶುಲ್ಕಕ್ಕಿಂತ ಹೆಚ್ಚು ಶುಲ್ಕ ಪಡೆಯುತ್ತಿದ್ದ ವಿವಿಗಳಿಗೆ ನಷ್ಟವಾಗಲಿದೆ, ಕಡಿಮೆ ಶುಲ್ಕ ಪಡೆಯುತ್ತಿದ್ದ ವಿವಿಗಳಿಗೆ ಲಾಭವಾಗಲಿದೆ. ಕನ್ನಡೇತರ ವಿದ್ಯಾರ್ಥಿಗಳು ಈ ಶುಲ್ಕದ ಜೊತೆಗೆ ಹೆಚ್ಚುವರಿಯಾಗಿ 5000 ರು, ಎನ್‌ಆರ್‌ಐ ವಿದ್ಯಾರ್ಥಿಗಳು 8ರಿಂದ 12 ಸಾವಿರ ರು. ಮತ್ತು ವಿದೇಶಿ ವಿದ್ಯಾರ್ಥಿಗಳಿಗೆ 12 ಸಾವಿರ ರು. ವಿಶೇಷ ಶುಲ್ಕ ನಿಗದಿಪಡಿಸಲಾಗಿದೆ. ಸಂಭಾವನೆ, ಭತ್ಯೆಗಳೂ ಏಕರೂಪ: ವಿದ್ಯಾರ್ಥಿಗಳಿಂದ ಪಡೆಯುವ ಶುಲ್ಕ ಮಾತ್ರವಲ್ಲದೆ ಪರೀಕ್ಷೆಗಳಲ್ಲಿ ಮೌಲ್ಯಮಾಪಕರಿಗೆ ನಿಡುವ ಸಂಭಾವನೆ, ವಿವಿಧ ಭತ್ಯೆಗಳೂ ಸೇರಿದಂತೆ ಇನ್ನೂ ಹಲವು ವಿಚಾರಗಳಲ್ಲಿ ಏಕರೂಪತೆ ತರಲಾಗಿದೆ. ಯಾವ್ಯಾವ ಕೋರ್ಸಿಗೆ ಎಷ್ಟು ಶುಲ್ಕ?ಪದವಿ ಭಾಗದ ಕೋರ್ಸ್‌ಗಳ ಶುಲ್ಕಕಲೆ: ಬಿ.ಎ - ₹11,700 , ಬಿಎ (ಸ್ಪೆಷಲೈಸೇಷನ್‌) ₹16,200, ಬಿಎಸ್‌ಡಬ್ಲ್ಯು- ₹16,400, ಬಿಎ ಎಲ್‌ಎಲ್‌ಬಿ- ₹27,750ವಾಣಿಜ್ಯ: ಬಿ.ಕಾಂ- ₹19,700, ಬಿ.ಕಾಂ (ಸ್ಪೆಷಲೈಸೇಷನ್‌)-₹24700, ಬಿಬಿಎ- ₹28,700, ಬಿಬಿಎ (ಸ್ಪೆಷಲೈಸೇಷನ್‌) - ₹31,700ವಿಜ್ಞಾನ: ಬಿಎಸ್ಸಿ- ₹21,700, ಬಿಎಸ್ಸಿ (ಸ್ಪೆಷಲೈಸೇಷನ್‌)- ₹25,700, ಬಿಸಿಎ- ₹30,700ಶಿಕ್ಷಣ: ಬಿಇಡಿ- ₹12,750, ಬಿಪಿಇಡಿ- ₹42,750ಸ್ನಾತಕೋತ್ತರ ಪದವಿ ವಿಭಾಗದ ಕೋರ್ಸುಗಳ ಶುಲ್ಕಕಲಾ: ಎಂಎ- ₹15,250, ಎಂಎ (ಸ್ಪೆಷಿಯಲೈಸೇಷನ್‌)- ₹17,250, ಎಂಎಸ್‌ಡಬ್ಲ್ಯು- ₹21,250, ಎಂಸಿಎ- ₹21,750, ಎಂಎ (ವಿದೇಶಿ ಭಾಷೆ)- ₹23,250ವಾಣಿಜ್ಯ: ಎಂ.ಕಾಂ- ₹19,750, ಎಂ.ಕಾಂ (ಸ್ಪೆಷಿಯಲೈಸೇಷನ್‌)- ₹64,750, ಎಂಟಿಟಿಎಂ- ₹67,750, ಎಂಬಿಎ- ₹59,750, ಎಂಬಿಎ (ಇ)- ₹79,750ವಿಜ್ಞಾನ: ಎಂಎಸ್ಸಿ- ₹17,750, ಎಂಎಸ್ಸಿ (ಬಯೋಟೆಕ್‌-ಮೈಕ್ರೋಬಯಾಲಜಿ)- ₹24,750, ಎಂಎಸ್ಸಿ (ಎಲೆಕ್ಟ್ರಾನಿಕ್‌ ಮೀಡಿಯಾ, ಸೈಕಾಲಜಿಕಲ್‌ ಕೌನ್ಸೆಲಿಂಗ್‌)- ₹41,250, ಎಂಸಿಎ/ಎಂಟೆಕ್‌- ₹45,250, ಪಿಜಿ ಡಿಪ್ಲೊಮಾ- ₹22,250ಶಿಕ್ಷಣ: ಎಂಇಡಿ, ಎಂಪಿಇಡಿ, ಎಲ್‌ಎಲ್‌ಎಂ- ₹27,750

Share this article