- ಚಿಕ್ಕಮಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಮೆರವಣಿಗೆ । ಆಜಾದ್ ಪಾರ್ಕ್‌ನಲ್ಲಿ ಧರಣಿ
ಹುಬ್ಬಳ್ಳಿಯ ಶ್ರೀರಾಮ ಭಕ್ತ ಶ್ರೀಕಾಂತ್ ಪೂಜಾರಿ ಅವರನ್ನು ಬಂಧಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಕ್ರಮ ಖಂಡಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಪಕ್ಷದ ಜಿಲ್ಲಾ ಕಚೇರಿಯಿಂದ ಆಜಾದ್ ಪಾರ್ಕ್ ವರೆಗೆ ಮೆರವಣಿಗೆ ನಡೆಸಿದ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಡಾ.ನರೇಂದ್ರ ಮಾತನಾಡಿ, 31 ವರ್ಷಗಳ ಹಳೆ ಪ್ರಕರಣವನ್ನು ರಾಮ ಜನ್ಮಭೂಮಿ ಹೋರಾಟಕ್ಕೆ ತಳಕು ಹಾಕಿರುವ ರಾಮಭಕ್ತ ಶ್ರೀಕಾಂತ್ ಪೂಜಾರಿ ಬಂಧಿನವನ್ನು ಖಂಡಿಸುತ್ತೇವೆ ಎಂದರು.ಜ.22 ರಂದು ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಇದರ ಅಂಗವಾಗಿ ರಾಮ ಮಂದಿರ ರಾಮಜನ್ಮ ಭೂಮಿ ನ್ಯಾಸ್ ತೀರ್ಥಕ್ಷೇತ್ರ ಟ್ರಸ್ಟ್ ನಿಂದ ಮನೆ ಮನೆಗೆ ಮಂತ್ರಾಕ್ಷತೆ ಮತ್ತು ಕರಪತ್ರಗಳನ್ನು ಹಂಚಲಾಗುತ್ತಿದೆ. ಈ ವಿಚಾರ ಪ್ರಸ್ತಾವಾಗುತ್ತಿದ್ದಂತೆ ಸಿದ್ದರಾಮಯ್ಯ ಅವರ ಕಾಲಿನಲ್ಲಿ ನಡುಕ ಉಂಟಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಆಗುತ್ತದೆ ಎಂಬ ಭೀತಿ ಮೂಡಿದೆ ಎಂದು ಆರೋಪಿಸಿದರು.
ಈ 31 ವರ್ಷದಲ್ಲಿ ಮೂರು ಬಾರಿ ಕಾಂಗ್ರೆಸ್ ಆಡಳಿತ ನಡೆಸಿದೆ. ಸಿದ್ದರಾಮಯ್ಯ ಅವರೇ ಸಿಎಂ ಆಗಿ 5 ವರ್ಷ ಆಡಳಿತ ಮುಗಿಸಿದ್ದಾರೆ. ಅಂದೇ ಬಂಧಿಸಬಹುದಿತ್ತು. ಹೀಗ್ಯಾಕೆ ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆ ಜನ ಸಾಮಾನ್ಯರಲ್ಲಿ ಉದ್ಭವಿಸುತ್ತದೆ. ಇದಕ್ಕೆ ತಕ್ಕ ಉತ್ತರವನ್ನೂ ನೀಡಲಿದ್ದಾರೆ. ಬಿಜೆಪಿ ಯಲ್ಲಿರುವ ಹಿಂದೂಗಳಿಗಷ್ಟೇ ಅಲ್ಲದೆ ಕಾಂಗ್ರೆಸ್‌ನ ಹಿಂದೂಗಳಿಗೂ ಇದು ನೋವು ತಂದಿದೆ ಎಂದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವೀಂದ್ರ ಬೆಳವಾಡಿ ಮಾತನಾಡಿ, ಸಿದ್ದರಾಮಯ್ಯರನ್ನು ಧರ್ಮ ವಿರೋಧಿ, ಜನ ವಿರೋಧಿ, ರಾಷ್ಟ್ರದ್ರೋಹಿ ಸಿಎಂ ಎಂದು ಜರಿದರು. ಅವರ ವಿರುದ್ಧ ಜನ ಜಾಗೃತಿ ಮೂಡಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. 500 ವರ್ಷಗಳ ಹೋರಾಟದ ಇತಿಹಾಸ ಇರುವ ಹಿರಿಯರ ಗೌರವಕ್ಕೆ ಕಾಂಗ್ರೆಸ್ ಸರ್ಕಾರ ಚ್ಯುತಿ ಬರುವ ರೀತಿ ನಡೆದುಕೊಳ್ಳುತ್ತಿದೆ ಎಂದು ದೂರಿದರು.
ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ನಯಾ ಪೈಸೆ ದೇಣಿಗೆ ಕೊಡುವುದಿಲ್ಲ ಎಂದು ಹೇಳಿದ್ದ ಸಿದ್ದರಾಮಯ್ಯ, ಈಗ ಮಂದಿರ ಉದ್ಘಾಟನೆಗೆ ಆಹ್ವಾನ ನೀಡಲಿಲ್ಲ ಎನ್ನುತ್ತಿದ್ದಾರೆ. ದೇಶದ್ರೋಹಿಗಳ ಜೊತೆ ಕೈಜೋಡಿ ಸಿರುವ ಅವರಿಗೆ ಯಾವುದೇ ಕಾರಣಕ್ಕೂ ಆಹ್ವಾನ ಸಿಗುವುದಿಲ್ಲ ಎಂದರು.
ಹುಬ್ಬಳ್ಳಿಯ ಶ್ರೀರಾಮ ಭಕ್ತ ಶ್ರೀಕಾಂತ್ ಪೂಜಾರಿ ಅವರನ್ನು ಬಂಧಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಖಂಡಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಬುಧವಾರ ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ ನಡೆಸಿದರು.