ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಅಂದಿನ ಕ್ರೀಡಾ ಸಚಿವರಾದ ಅಪ್ಪಚ್ಚು ರಂಜನ್ ಅವರು, ಹಾಕಿ ಪ್ರೇಮಿಗಳ ಒತ್ತಾಸೆ ಮೇರೆಗೆ ಟರ್ಫ್ ಮೈದಾನಕ್ಕೆ ಅನುದಾನ ಕಲ್ಪಿಸಿದರು. ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಇಲ್ಲಿನ ಶಾಸಕರಾದ ಡಾ. ಮಂತರ್ ಗೌಡ ಮುಂದುವರಿದ ಕಾಮಗಾರಿಗೆ ಅನುದಾನ ತರುವ ಮೂಲಕ ಅತೀ ಬೇಗ ಉದ್ಘಾಟನೆಗೆ ಕಾರಣಕರ್ತರಾಗಿದ್ದಾರೆ. ರಾಷ್ಟ್ರಮಟ್ಟದ ಹಾಕಿ ಪಂದ್ಯಾವಳಿ ಗುರವಾರ ಇದೇ ಟರ್ಫ್ ಮೈದಾನದಲ್ಲಿ ನಡೆಯುವುದು ಇಲ್ಲಿನ ಕ್ರೀಡಾಪ್ರೇಮಗಳಿಗೆ ಹೆಮ್ಮೆಯ ವಿಷಯ ಎಂದರು.
ಕೊಡಗಿನ ಜನರು ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿರುವುದರಿಂದ ಅನೇಕರು ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಯುವಶಕ್ತಿ ಕ್ರೀಡಾಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಪೋಷಕರು ಹೆಚ್ಚಿನ ಸಹಕಾರ ನೀಡಬೇಕು ಎಂದ ಅವರು, ಟರ್ಫ್ ಮೈದಾನಕ್ಕೆ ಬೇಕಾದ ಎಲ್ಲಾ ಸೌಲಭ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಹಾಕಿ ಕ್ರೀಡೆ ಎಂಬುವುದು ಕೊಡಗಿನ ಜನರ ರಕ್ತದಲ್ಲಿದೆ. ಟರ್ಫ್ ಮೈದಾನ ಉದ್ಘಾಟನೆಯೊಂದಿಗೆ ಕ್ರೀಡಾಪ್ರೇಮಿಗಳ ಕನಸ್ಸು ನನಸ್ಸಾಗಿದೆ. ಟರ್ಫ್ ಮೈದಾನದ ಗುಣಮಟ್ಟ ಕಾಯ್ದುಕೊಳ್ಳುವುದು ಉತ್ತಮ ನಿರ್ವಹಣೆಯಿಂದ ಮಾತ್ರ ಸಾಧ್ಯ. ಯುವಸಬಲೀಕರಣ ಕ್ರೀಡಾ ಇಲಾಖೆಯ ಇದರ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು. ತಡೆಗೋಡೆ, ಗ್ಯಾಲರಿ ನಿರ್ಮಾಣಕ್ಕೆ ಸೂಕ್ತ ಅನುದಾನ ತರವುದಾಗಿ ಭರವಸೆ ನೀಡಿದರು.
ಬಿಜೆಪಿಯಿಂದ ಉಸ್ತುವಾರಿ ಸಚಿವರಿಗೆ ಘೇರಾವ್ ಪ್ರಯತ್ನ
ಪಟ್ಟಣದಲ್ಲಿ ನಿರ್ಮಾಣವಾಗಿರುವ ಸಿಂಥೆಟಿಕ್ ಟರ್ಫ್ ನಿರ್ಮಾಣಕ್ಕೆ ಹೆಚ್ಚಿನ ಶ್ರಮವಹಿಸಿದ್ದ ಪ್ರಮುಖರಿಗೆ ಆಹ್ವಾನ ನೀಡದೆ ಅವಮಾನಿಸಲಾಗಿದೆ ಎಂದು ಬಿಜೆಪಿ ನಗರಾಧ್ಯಕ್ಷ ಎಸ್.ಆರ್. ಸೋಮೇಶ್ ಪ್ರಮುಖರಾದ ಪಿ.ಕೆ. ಚಂದು, ಮೃತ್ಯುಂಜಯ, ಮೋಹಿನಿ, ಬಿ.ಜೆ. ದೀಪಕ್, ಜಯಲಕ್ಷ್ಮಿ, ಶುಭಾಕರ್, ಶರತ್‍ಚಂದ್ರ, ಮನುಕುಮಾರ್ ರೈ ಮತ್ತಿತರರು ಜೂನಿಯರ್ ಕಾಲೇಜು ಮುಖ್ಯದ್ವಾರದಲ್ಲಿ ಉಸ್ತುವಾರಿ ಸಚಿವರಿಗೆ ಘೇರಾವ್ ಮಾಡುವ ಪ್ರಯತ್ನ ಮಾಡಿದರು.ಡಿವೈಎಸ್‍ಪಿ ಗಂಗಾಧರಪ್ಪ ಮತ್ತು ಬಿಜೆಪಿ ಕಾರ್ಯಕರ್ತರಿಗೂ ಮಾತಿನ ಚಕಮಕಿ ನಡೆಯಿತು. ಮಾಜಿ ಕ್ರೀಡಾ ಸಚಿವ ಅಪ್ಪಚು ರಂಜನ್, ಸಂಸದ ಪ್ರತಾಪ್ ಸಿಂಹ ಅವರನ್ನು ಸೌಜನ್ಯದಿಂದ ಆಹ್ವಾನಿಸಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ತಮ್ಮ ಅಹವಾಲು ಹೇಳಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಡಿವೈಎಸ್‍ಪಿ ಅವರಿಗೆ ಮನವಿ ಮಾಡಿದರು.
ಟರ್ಫ್ ಕಾಮಗಾರಿ ಉಸ್ತುವಾರಿ ಸಮಿತಿಯ ಅಧ್ಯಕ್ಷರಾಗಿದ್ದ ಎಂ.ಬಿ.ಅಭಿಮನ್ಯು ಕುಮಾರ್ ಅವರು ಉಸ್ತುವಾರಿ ಸಚಿವರೊಂದಿಗೆ ಆಹವಾಲು ಹೇಳಿಕೊಳ್ಳಲು ಅವಕಾಶ ಮಾಡಿಕೊಡಲಾಯಿತು. ಸರ್ಕಾರದ ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆ ಮುದ್ರಿಸಲಾಗಿದೆ. ಯುವ ಸಬಲೀಕರಣ ಇಲಾಖೆಯ ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಕರೆ ಮಾಡಿ ಆಹ್ವಾನ ನೀಡಿದ್ದಾರೆ. ಅಭಿವೃದ್ಧಿಯ ವಿಷಯ ಯಾರನ್ನು ನಿರ್ಲಕ್ಷ್ಯ ಮಾಡುವ ಪ್ರಮೇಯ ಇಲ್ಲ ಎಂದು ಹೇಳಿದರು.