ಹಲ್ಲೆ ಆರೋಪ ಮಾಡಿದ್ದ ಮಹಿಳೆ ವಿರುದ್ಧವೇ ತಿರುಗಿಬಿದ್ದ ಗ್ರಾಮಸ್ಥರು

KannadaprabhaNewsNetwork | Published : Jan 4, 2024 1:45 AM

ಸಾರಾಂಶ

ಮಹಿಳೆಯನ್ನು ಹಲ್ಲೆ ನಡೆದ ಸ್ಥಳದ ಪಂಚನಾಮೆಗೆ ಕರೆದುಕೊಂಡು ಹೋದಾಗ ಪೊಲೀಸರೇ ಕಂಗಾಲು

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೈಲಹೊಂಗಲ ತಾಲೂಕಿನ ಗ್ರಾಮವೊಂದರಲ್ಲಿ ಮಹಿಳೆ ಮೇಲೆ ಹಲ್ಲೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಬುಧವಾರ ಗ್ರಾಮಕ್ಕೆ ಪೊಲೀಸರು ತೆರಳಿ ಪಂಚನಾಮೆ ನಡೆಸಿದರು. ಈ ವೇಳೆ ಗ್ರಾಮಸ್ಥರು ಮಹಿಳೆ ವಿರುದ್ಧವೇ ಪ್ರತ್ಯಾರೋಪ ಮಾಡಿದ್ದು, ಪೊಲೀಸರೇ ಅಕ್ಷರಶಃ ಕಂಗಾಲಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗ್ರಾಮದಲ್ಲಿ ತಮ್ಮ ಮೇಲೆ ಹಲ್ಲೆ ಮಾಡಿ, ಬಟ್ಟೆ ಹರಿದಿದ್ದಾರೆ ಎಂದು ನೊಂದ ಮಹಿಳೆ ಆರೋಪ ಮಾಡಿದ್ದು ಶುದ್ಧ ಸುಳ್ಳು ಎಂದು ಗ್ರಾಮಸ್ಥರು ಮತ್ತು ಪಂಚಾಯತಿ ಸದಸ್ಯರು ಹೇಳಿದ್ದಾರೆ. ಗ್ರಾಮದಲ್ಲಿ ಜಮೀನಿನ ವಿಷಯಕ್ಕೆ ಸಂಬಂಧಿಸಿದಂತೆ ಮಹಿಳೆಯನ್ನು ಅರೆಬೆತ್ತಲೆಗೊಳಿಸಿದ್ದಾರೆ ಎಂದು ನೊಂದ ಮಹಿಳೆಯಿಂದ ಆರೋಪ ಬಂದಿತ್ತು. ಹೀಗಾಗಿ ಈ ಆರೋಪವನ್ನು ಬೆನ್ನತ್ತಿದ ಪೊಲೀಸ್ ಇಲಾಖೆ ಸಂತ್ರಸ್ತ ಮಹಿಳೆಯನ್ನು ಗ್ರಾಮಕ್ಕೆ ಕರೆತಂದು ಸ್ಥಳ ಪಂಚನಾಮೆ ನಡೆಸಿದರು. ಈ ವೇಳೆ ಬಹುತೇಕ ಗ್ರಾಮಸ್ಥರು ಮಹಿಳೆಯ ವಿರುದ್ಧವೇ ಆರೋಪ ಮಾಡಿದ್ದರಿಂದ ಪೊಲೀಸರು ಕಂಗಾಲಾಗಿದ್ದಾರೆ. ಅಲ್ಲದೇ ಮಹಿಳೆಗೆ ಪೊಲೀಸರು ಬಿಗಿ ಭದ್ರತೆಯಲ್ಲೇ ಸ್ಥಳ ಮಹಜರು ಮಾಡಿದ್ದಾರೆ.

ಈ ವೇಳೆ ಮಾತನಾಡಿದ ಗ್ರಾಪಂ ಸದಸ್ಯರು, ಈ ಪ್ರಕರಣವು ಶುದ್ಧ ಸುಳ್ಳು. 20 ವರ್ಷಗಳ ಹಿಂದೆ ಮಾರಾಟ ಮಾಡಿದ ಜಮೀನಿನಲ್ಲಿ ಕಟ್ಟಿರುವ ಮನೆಗಳಿಗೆ ಗ್ರಾಮ ಪಂಚಾಯಿತಿಯವರು ರಸ್ತೆಯ ನೀರು, ವಿದ್ಯುತ್ ಸೌಲಭ್ಯ ಹೀಗೆ ಹಲವಾರು ಸೇವೆಗಳನ್ನು ಕಲ್ಪಿಸಲು ಮುಂದಾದಾಗ ಅವರ ಮೇಲೆ ಸುಳ್ಳು ಆರೋಪ ಮಾಡಿ ಪ್ರಕರಣ ದಾಖಲಿಸಿದ್ದಾಳೆ. ಮಹಿಳೆ ಮಾಡಿರುವ ಯಾವ ಆರೋಪ, ಕೃತ್ಯ ಗ್ರಾಮದಲ್ಲಿ ನಡೆದಿಲ್ಲ ಎಂದಿದ್ದಾರೆ.

-----

ಯಾವುದೇ ರೀತಿಯ ದೂರು ಇಲ್ಲ

ಪೊಲೀಸರು ವಿಚಾರಣೆ ನಡೆಸಿದ ವೇಳೆ ಆರೋಪ ಮಾಡಿದ ಮಹಿಳೆಯೇ ಬೈಲಹೊಂಗಲ ಠಾಣೆ ಪೊಲೀಸರಿಗೆ ಪತ್ರವನ್ನು ಬರೆದುಕೊಟ್ಟಿದ್ದಾಳೆ. 2023 ನ.22 ರಂದು ಮಧ್ಯಾಹ್ನ 1.30 ಗಂಟೆ ಸುಮಾರಿಗೆ ನಡೆದ ಗಲಾಟೆ ಕುರಿತು ಎರಡೂ ಕಡೆಯವರು ಬೈಲಹೊಂಗಲ ಠಾಣೆ ಮೆಟ್ಟಿಲೇರಿದ್ದಾರೆ. ಈ ವೇಳೆ ದೂರುದಾರ ಮಹಿಳೆ ಹಾಗೂ ಮತ್ತೊಂದು ಗುಂಪಿನವರು 2023 ನ.24ರಂದು ಪೊಲೀಸರ ಸಮ್ಮುಖದಲ್ಲೇ, ಈ ಪ್ರಕರಣದ ವಿಚಾರವಾಗಿ ಯಾವುದೇ ರೀತಿಯ ದೂರು ಇರುವುದಿಲ್ಲ ಮತ್ತು ಯಾವುದೇ ರೀತಿಯ ತಂಟೆ ಮಾಡುವುದಿಲ್ಲ ಎಂದು ಪತ್ರವನ್ನು ಬರೆದುಕೊಟ್ಟಿರುವ ಕುರಿತು ಮೂಲಗಳಿಂದ ತಿಳಿದು ಬಂದಿದೆ.

Share this article