ಕನ್ನಡಪ್ರಭ ವಾರ್ತೆ ಯಾದಗಿರಿ
ಗೊಂಡ ಕುರುಬ, ಜೇನು ಕುರುಬ ಮತ್ತು ಕಾಡು ಕುರುಬ ಪರ್ಯಾಯ ಪದ ಕುರುಬ ಎಂದು ಪರಿಗಣಿಸಿ, ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುವಂತೆ ಒತ್ತಾಯಿಸಿ, ಕರ್ನಾಟಕ ಪ್ರದೇಶ ಗೊಂಡ ಕುರುಬ ಸಂಘದ ವಡಗೇರಾ ತಾಲೂಕು ವತಿಯಿಂದ ಮಂಗಳವಾರ ಜಿಲ್ಲೆಯ ವಡಗೇರಾ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.ಎಸ್ಟಿ ಮೀಸಲಾತಿಗಾಗಿ ನಿರಂತರ ಹೋರಾಟಗಳು ಹಾಗೂ ಸಮಾವೇಶಗಳು ನಡೆಸುವ ಮೂಲಕ ಸರ್ಕಾರಕ್ಕೆ ಮನವಿ ಮಾಡಿದಾಗ ಕೇಂದ್ರ ಸರ್ಕಾರ ಎಸ್ಟಿ ಮೀಸಲಾತಿಗೆ ಕುಲಶಾಸ್ತ್ರ ಅಧ್ಯಯನಕ್ಕೆ ಆದೇಶ ಮಾಡಿತ್ತು. ಆದರೆ, ಇದೀಗ ಆದೇಶ ನೀಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕಲ್ಯಾಣ ಕರ್ನಾಟಕ ಭಾಗದ ಯಾದಗಿರಿ, ಕಲಬುರಗಿ, ಬೀದರ್ ಜಿಲ್ಲೆಗಳಲ್ಲಿ ಗೊಂಡ ಪರ್ಯಾಯ ಪದ ಕುರುಬ ಎಂದು ಪರಿಗಣಿಸಿ ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು. ತಿಂಥಣಿ ಬ್ರಿಜ್ ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರು ಪೀಠದ ಕಿರಿಯ ಶ್ರೀಗಳಾದ ಲಿಂಗಬೀರ ದೇವರು ಮಾತನಾಡಿ, ಯಾದಗಿರಿ, ಬೀದರ್, ಕಲಬುರಗಿ ಜಿಲ್ಲೆಗಳು ಕುರುಬರನ್ನು ಗೊಂಡ ಪರ್ಯಾಯವಾಗಿ ಪರಿಗಣಿಸಲು 1997 ರಲ್ಲಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಕೇಂದ್ರ ಸರ್ಕಾರದ ಆದೇಶದ ಮೇರೆಗೆ 2014ರ ಸಿದ್ದರಾಮಯ್ಯವರ ಸರ್ಕಾರ ಕುಲಶಾಸ್ತ್ರ ಅಧ್ಯಯನದ ವರದಿಯ ಪೂರಕ ದಾಖಲೆಗಳನ್ನು ಮೂರು ಭಾರಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು. ಅಲೆಮಾರಿ ಸಂಚಾರಿಗಳಾಗಿ ಊರು ಊರು ಸುತ್ತುತ್ತಿದ್ದ ಗೊಂಡ ಕುರುಬರನ್ನು ಆಗಿನ ಬ್ರಿಟಿಷ್ ಕಾಲದಲ್ಲಿ ಸೇರಿಸಲಾಗಿತ್ತು. ಅಲ್ಲದೆ ಡಾ. ಅಂಬೇಡ್ಕರ್ ಅವರು ಸಹ ಸಂವಿಧಾನದಲ್ಲಿ ನಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದ್ದರು ಎಂದು ತಿಳಿಸಿದರು.ಕುರುಬ ಸಮಾಜದ ಹಿರಿಯ ಮುಖಂಡ ಸಿದ್ದಣ್ಣಗೌಡ ಕಾಡಂನೊರ ಮತ್ತು ಕುರುಬ ಸಂಘದ ಮಾಜಿ ಜಿಲ್ಲಾಧ್ಯಕ್ಷ ವಿಶ್ವನಾಥ್ ನೀಲಹಳ್ಳಿ ಮಾತನಾಡಿದರು. ಕುರುಬ ಸಂಘದ ಜಿಲ್ಲಾಧ್ಯಕ್ಷ ಮಲ್ಲಣ್ಣ ಐಕೂರ, ಮರಿಗೌಡ ಹುಲಕಲ್, ತಾಲೂಕು ಅಧ್ಯಕ್ಷ ಸಾಯಬಣ್ಣ ವರಕೇರಿ, ಚಂದ್ರಶೇಖರ್ ವಾರದ, ಮಾಜಿ ಜಿಪಂ ಸದಸ್ಯೆ ಪಾರ್ವತಮ್ಮ ಕಾಡಂನೊರ, ಮರೇಪ್ಪ ಬಿಳಾರ, ಸಿದ್ದರಾಮಪ್ಪ ಅರಿಕೇರಾ, ಸಾಯಬಣ್ಣ ಕೆಂಗೂರಿ, ಸಿದ್ದಪ್ಪ ಸಂಕಿನ್, ಹಣಮಂತರಾಯಗೌಡ ಪೊಲೀಸ್ ಪಾಟೀಲ್, ಮಾಜಿ ಗ್ರಾಪಂ ಉಪಾಧ್ಯಕ್ಷೆ ಶಾಂತಮ್ಮ ಕರಿಕಳ್ಳಿ, ಪ್ರಭು ವಾರದ, ಮರೆಪ್ಪ ಜಡಿ ಸೇರಿ ಕುರುಬ ಸಮುದಾಯದ ನೂರಾರು ಜನರು, ಮುಖಂಡರು ಇದ್ದರು.
ವಡಗೇರಾ ಪಟ್ಟಣದ ಹೊನ್ನಯ್ಯ ತಾತಾ ದೇವಸ್ಥಾನದಿಂದ ಮೆರವಣಿಗೆ ಮೂಲಕ ತಹಸೀಲ್ದಾರ್ ಕಚೇರಿವರೆಗೆ ಪಾದಯಾತ್ರೆ ಮೂಲಕ ತೆರಳಿ ತಹಸೀಲ್ದಾರ್ ಕಚೇರಿ ಒಳಗೆ ಕುರಿಗಳನ್ನು ನುಗ್ಗಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಹಸೀಲ್ದಾರರ ಮುಖಾಂತರ ರಾಜ್ಯಪಾಲರು ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.