ಜೆಜೆಎಂ ಕಾಮಗಾರಿ ವಿಳಂಬ: ನೀರಿನ ಸಮಸ್ಯೆ ಉಲ್ಬಣ

KannadaprabhaNewsNetwork | Published : Oct 9, 2024 1:30 AM

ಸಾರಾಂಶ

ನೀರಿನ ಸಮಸ್ಯೆಗೆ ಮುಕ್ತಿಯೆಂಬಂತೆ ಜಲಜೀವನ್ ಮಿಷನ್ ಯೋಜನೆಯಡಿ ಮನೆಮನೆಗೂ ನಳ ಬಂದು ನೀರಿನ ಸಮಸ್ಯೆ ಬಗೆಹರಿಯಿತು ಎನ್ನುವ ಸಂತಸದಲ್ಲಿ ಜನರಿದ್ದರು.

ಕೂಡ್ಲಿಗಿ: ಜಲಜೀವನ್ ಮಿಷನ್ ನ ಪೈಪ್ ಲೈನ್ ಕಾಮಗಾರಿ ವಿಳಂಬದಿಂದ ತಾಲೂಕಿನ ಬಡೇಲಡಕು ಗ್ರಾಮದ ಹೊಸ ಊರು, ಗೊಲ್ಲರಹಟ್ಟಿಯಲ್ಲಿ 100ಕ್ಕೂ ಹೆಚ್ಚು ಮನೆಗಳಿಗೆ ಕುಡಿಯುವ ನೀರಿನ ತೊಂದರೆಯಾಗಿದೆ. ಜನತೆ ಈಗ ತಳ್ಳುಗಾಡಿಯ ಮೂಲಕ ನೀರು ತರುತ್ತಿದ್ದಾರೆ.

ಕಳೆದ ಐದಾರು ತಿಂಗಳಿಂದ ಜೆಜೆಎಂ ಯೋಜನೆಯ ಪೈಪ್ ಲೈನ್ ಕಾಮಗಾರಿ ನಡೆಸುತ್ತಿದ್ದೂ ಬಡೇಲಡಕು ಆಶ್ರಯ ಕಾಲೋನಿ (ಹೊಸಊರು) ಹಾಗೂ ಗೊಲ್ಲರಹಟ್ಟಿಗಳಿಗೆ ಕಳೆದ ಎರಡು ದಶಕಗಳಿಂದ ನೀರಿನ ಸಮಸ್ಯೆ ಇದೆ. ಇಲ್ಲಿಯ ನೀರಿನ ಸಮಸ್ಯೆಗೆ ಮುಕ್ತಿಯೆಂಬಂತೆ ಜಲಜೀವನ್ ಮಿಷನ್ ಯೋಜನೆಯಡಿ ಮನೆಮನೆಗೂ ನಳ ಬಂದು ನೀರಿನ ಸಮಸ್ಯೆ ಬಗೆಹರಿಯಿತು ಎನ್ನುವ ಸಂತಸದಲ್ಲಿ ಜನರಿದ್ದರು. ಈ ಹಿಂದೆ 2-3 ದಿನಕ್ಕೊಮ್ಮೆಯಾದರೂ ಟ್ಯಾಂಕ್ ನಿಂದ ನೀರು ಬಿಡಲಾಗಿತ್ತು. ಈಗ ಕಾಮಗಾರಿ ವಿಳಂಬದಿಂದ 5-6 ತಿಂಗಳಿಂದ ಆಂಜನೇಯ ದೇವಸ್ಥಾನ ಹತ್ತಿರ ಆಶ್ರಯ ಕಾಲೋನಿ ಹಾಗೂ ಗೊಲ್ಲರಹಟ್ಟಿ ಜನತೆಗೆ ಒಂದೆಡೆ ನೀರಿಗೆ ಹೋಗುವಂತೆ ಮಾಡಲಾಗಿದೆ. ವಿದ್ಯುತ್ ತೊಂದರೆಯಿಂದ ನೀರು ಬಿಡುವ ಸಮಯವೂ ನಿಗದಿತವಾಗಿಲ್ಲ. ಹೀಗಾಗಿ ಕುಡಿಯುವ ನೀರು ತರುವುದು ಇಲ್ಲಿಯ ಜನತೆಗೆ ಸಾಹಸವಾಗಿದೆ.

ಬಡೇಲಡಕು ಗ್ರಾಮದ ಆಶ್ರಯ ಕಾಲೋನಿ ಹಾಗೂ ಗೊಲ್ಲರಹಟ್ಟಿ ಜನತೆಗೆ ಮೂಲಭೂತ ಸೌಲಭ್ಯ ಸಿಗುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆಯಂತೂ ಹೇಳತೀರದು. ಕಳೆದ ಕೆಲ ತಿಂಗಳ ಹಿಂದಷ್ಟೇ ಪೈಪ್ ಲೈನ್ ಡ್ಯಾಮೇಜ್ ನಿಂದಾದ ತೊಂದರೆಯಿಂದ ಗೊಲ್ಲರಹಟ್ಟಿ ಗ್ರಾಮದಲ್ಲಿ ತೋರಿದ ವಾಂತಿ-ಭೇದಿ ಪ್ರಕರಣ ಸಂದರ್ಭದಲ್ಲಿ ಗ್ರಾಮಕ್ಕೆ ಭೇಟಿ ನೀಡಿದ ಶಾಸಕರಿಗೆ ಕಾಲೋನಿ ಜನರು ದಶಕಗಳಿಂದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ತಿಳಿಸಿದ್ದರು. ಜೆಜೆಎಂ ಯೋಜನೆ ಕಾಮಗಾರಿ ಪ್ರಾರಂಭವಾಗಿ ಪೈಪ್ ಲೈನ್ ಕಾರ್ಯ ಮುಗಿದ ನಂತರ ನೀರಿನ ಸಮಸ್ಯೆಗೆ ಮುಕ್ತಿಯಾಗಬಹುದು ಅಂದುಕೊಂಡಿದ್ದರು. ಆದರೆ ಇಲ್ಲಿಯ ಜನತೆಯ ಆಸೆ ಇನ್ನೂ ಈಡೇರಿಸಲ್ಲ.

ಐದಾರು ತಿಂಗಳಿಂದ ಗ್ರಾಮದ ಹೊಸ ಊರು, ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆಯುತ್ತಿರುವ ಜೆಜೆಎಂ ಕಾಮಗಾರಿ ವಿಳಂಬದಿಂದ ನೀರಿನ ತೊಂದರೆಯಾಗಿರುವುದು ನಿಜ. ಕಾಮಗಾರಿ ಮುಗಿಯುವ ತನಕ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಬೇಗನೆ ಕಾಮಗಾರಿ ಮುಗಿಸುವಂತೆ ಮೇಲಧಿಕಾರಿಗಳ ಗಮನ ಸೆಳೆಯುತ್ತೇವೆ ಎನ್ನುತ್ತಾರೆ ಬಡೇಲಡಕು ಗ್ರಾಪಂ ಅಧ್ಯಕ್ಷೆ ಯು.ಮಂಜುಳಾ ಸತೀಶ.

ಇಲ್ಲಿ ನೀರಿನ ಸಮಸ್ಯೆ ಒಂದೆರಡು ದಿನದ್ದಲ್ಲ. ಬಡೇಲಡಕು ಗ್ರಾಮದ ಹೊಸ ಊರು ಆಶ್ರಯ ಕಾಲೋನಿ ಹಾಗೂ ಗೊಲ್ಲರಹಟ್ಟಿಗೆ ಐದಾರು ವರ್ಷಗಳಿಂದ ದಿನನಿತ್ಯದ ಗೋಳು. ಸಮಸ್ಯೆ ಬಗೆಹರಿಸಲು ಶಾಸಕರ ಗಮನಕ್ಕೂ ತಂದಿದ್ದೇವೆ ಎನ್ನುತ್ತಾರೆ ಬಡೇಲಡಕು ಗ್ರಾಮದ ಆಶ್ರಯ ಕಾಲೋನಿ ನಿವಾಸಿ ಹನುಮಂತಪ್ಪ.

Share this article