ಹಾವೇರಿ: ಮನುಷ್ಯ ಕುಲದ ವರ್ಗೀಕರಣ ಸಹಿಸದ ದಾಸ ಪರಂಪರೆಯ ಅಗ್ರಗಣ್ಯ ಕನಕದಾಸರ ದರ್ಶನ ತತ್ವವನ್ನು ಪರಿಚಯಿಸುವ ಮೂಡಲಪಾಯ ಬಯಲಾಟಕ್ಕೆ ಸಂಬಂಧಿಸಿದ ಜ್ಞಾನದಾನಿ ಕನಕ ಪುಸ್ತಕ ಅಕ್ಷರ ಲೋಕದ ಮಾಧ್ಯಮದಲ್ಲಿ ವಿನೂತನ ಪ್ರಯತ್ನ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಟಿ.ಎಂ. ಭಾಸ್ಕರ್ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸುರೇಶ ಜಂಗಮಶೆಟ್ಟಿ ಮಾತನಾಡಿ, ರಂಗಕರ್ಮಿ ಎಂ.ಎಸ್. ಮಾಳವಾಡರು ಕನಕದಾಸರ ಜೀವನ ಸಂದೇಶವನ್ನು ವೀರತೆ ಹಾಗೂ ಹಾಸ್ಯ ಪ್ರಧಾನದಲ್ಲಿ ಆಧುನಿಕತೆಯ ಸ್ಪರ್ಶ ನೀಡಿರುವರು. ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಈ ಕಾರ್ಯ ಶ್ಲಾಘನೀಯ. ಹಾವೇರಿ ವಿಶ್ವವಿದ್ಯಾಲಯದಲ್ಲಿ ಕನಕ ಅಧ್ಯಯನ ಪೀಠ ಆರಂಭಿಸುವ ಚಿಂತನೆ ನಮ್ಮದು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಡಿ. ರವಿ ಮಾತನಾಡಿ, ಕನಕ ಎಂಬ ಜ್ಞಾನ ಹೊಸ ಹೊಸ ರೂಪದಲ್ಲಿ ಪ್ರಕಟವಾಗುತ್ತಲೇ ಇರುತ್ತದೆ. ಹೊಸ ಸಂಗತಿಗಳನ್ನು ಸ್ಫುರಿಸುವ ಜ್ಞಾನದಾನಿ ಕನಕ ಕೃತಿಕಾರ ಎಂ.ಎಸ್. ಮಾಳವಾಡರ ಅನಾರೋಗ್ಯದ ಮಧ್ಯೆ ಅವರಿಗೊಂದು ಆತ್ಮಚೈತನ್ಯ ತುಂಬಲಿದೆ. ಪ್ರಾಧಿಕಾರ ಪುಸ್ತಕ ಪ್ರಕಟಣೆಗೆ ಅಭಿಮಾನ ಪಡುತ್ತದೆ ಎಂದರು.ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಸಂಶೋಧಕ ಡಾ. ಜಗನ್ನಾಥ ಗೇನಣ್ಣವರ ಪ್ರಾಸ್ತಾವಿಕವಾಗಿ, ಕರ್ನಾಟಕ ಜಾನಪದ ವಿವಿ ಸಹಾಯಕ ಪ್ರಾಧ್ಯಾಪಕ ಡಾ. ಚಂದ್ರಪ್ಪ ಸೊಬಟಿ ಪುಸ್ತಕ ಕುರಿತು ಹಾಗೂ ಸಾಹಿತಿ ಸಂಕಮ್ಮ ಸಂಕಣ್ಣನವರ ಮಾತನಾಡಿದರು.
ಸತೀಶ ಕುಲಕರ್ಣಿ, ವಿ.ಎನ್. ತಿಪ್ಪನಗೌಡ್ರ, ನಾಗೇಂದ್ರ ಕಡಕೋಳ, ಹನುಮಂತಗೌಡ ಗಾಜಿಗೌಡ್ರ, ಎಸ್.ಆರ್. ಹಿರೇಮಠ, ಮಾಲತೇಶ ಅಂಗೂರ, ಲೀಲಾವತಿ ಪಾಟೀಲ, ಮಹಾದೇವಿ ಕಣವಿ, ದಾಕ್ಷಾಯಣಿ ಗಾಣಗೇರ, ಅಮೃತಮ್ಮ ಶೀಲವಂತರ, ರೇಣುಕಾ ಗುಡಿಮನಿ, ಜುಬೇದಾ ನಾಯಕ್, ಲೀಲಾ ಬೇವಿನಮರದ ಉಪಸ್ಥಿತರಿದ್ದರು.ಭೂಮಿಕಾ ರಜಪೂತ ವಚನ ಗಾಯನ ಪ್ರಸ್ತುತಪಡಿಸಿದರು. ಪರಿಮಳಾ ಜೈನ್ ಸ್ವಾಗತಿಸಿದರು. ಗೂಳಪ್ಪ ಅರಳಿಕಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪೃಥ್ವಿರಾಜ್ ಬೆಟಗೇರಿ ವಂದಿಸಿದರು.
ವೈಚಾರಿಕ ಹಾಗೂ ವೈಜ್ಞಾನಿಕ ಚಿಂತನೆಗಳನ್ನು ಒರೆಗೆ ಹಚ್ಚುವ ಜತೆಗೆ ಬಂಡಾಯ ಸಾರಿದವರು ಕನಕರು. ಅಮೃತ ಸಾಗರದಂತಿರುವ ಅವರನ್ನು ಬಯಲಾಟದ ಮೂಲಕ ಇಡೀ ಸಮಾಜಕ್ಕೆ ಕನ್ನಡಿಯಾಗಿಸಿರುವ ಎಂ.ಎಸ್. ಮಾಳವಾಡರು ಅಭಿನಂದನಾರ್ಹರು ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು.ಯಾವುದೇ ಕಲೆಗೆ ಸಾಮಾಜಿಕ ಬದ್ಧತೆ ಇರಬೇಕು. ಅದು ಸಮಾಜವನ್ನು ತಿದ್ದುವ ಸಾಧನವಾಗಬೇಕು. ಈ ಹಿನ್ನೆಲೆಯಲ್ಲಿ ಕನಕದಾಸರನ್ನು ಬಯಲಾಟದ ಮೂಲಕ ಜನಪದೀಯವಾಗಿಸಲು ಮತ್ತು ಶ್ರಮ ಸಂಸ್ಕೃತಿಯ ಬಿಂಬದಲ್ಲಿ ಕಾಣಲು ಯತ್ನಿಸಿರುವೆ. ಅದು ಪವಾಡಗಳನ್ನು ಮತ್ತು ಐತಿಹ್ಯಗಳನ್ನು ಮೀರಿದ ನಿಲುವಿನಿಂದ ಕೂಡಿದೆ ಎಂದು ರಂಗಕರ್ಮಿ ಎಂ.ಎಸ್. ಮಾಳವಾಡ ಹೇಳಿದರು.