ಕಾರ್ಕಳ: ಸಮಾಜಮುಖಿ ಚಟುವಟಿಕೆಗಳನ್ನು ಕಾರ್ಕಳ ಕ್ಷೇತ್ರದಾದ್ಯಂತ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದೇವೆ. 2015ರಲ್ಲಿ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳದಲ್ಲಿ ಸುಮಾರು 400ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ದೊರೆತಿತ್ತು. ಅದೇ ಮಾದರಿಯಲ್ಲಿ ಈ ಬಾರಿಯೂ ‘ವಿಕಾಸ ಉದ್ಯೋಗ ಸೇತು’ ಕಾರ್ಯಕ್ರಮದ ಮೂಲಕ ಯುವಜನತೆಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶ ಹೊಂದಿದ್ದೇವೆ ಎಂದು ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು.
ಈಗಾಗಲೇ 1,500ಕ್ಕೂ ಹೆಚ್ಚು ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಪ್ಲೊಮಾ, ಪದವಿ ಹಾಗೂ 300ಕ್ಕೂ ಹೆಚ್ಚು ಎಂಜಿನಿಯರಿಂಗ್ ಪದವೀಧರರು ಹೆಸರು ನೋಂದಾಯಿಸಿದ್ದಾರೆ. ಯುವಕರು ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕು, ತಾಳ್ಮೆ ಬೆಳೆಸಿಕೊಳ್ಳಬೇಕು. ಉದ್ಯೋಗ ಪಡೆಯಲು ಯಾವುದೇ ಶಿಫಾರಸು ಅಗತ್ಯವಿಲ್ಲ. ವಿದ್ಯಾರ್ಥಿನಿಯರಿಗೆ ಕಂಪನಿಗಳಿಂದ ವಸತಿ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.
ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಟ್ರಸ್ಟಿ ವಿವೇಕ್ ಆಳ್ವ, ವಿದ್ಯಾರ್ಥಿಗಳು ಸದಾ ಸಕಾರಾತ್ಮಕ ಮನೋಭಾವ ಹೊಂದಿರಬೇಕು. ಯಾವುದೇ ಉದ್ಯೋಗಕ್ಕೆ ಪೂರ್ವಸಿದ್ಧತೆ ಅತ್ಯಗತ್ಯ. ಕೇವಲ ಪ್ರಮಾಣಪತ್ರಕ್ಕಾಗಿ ಶಿಕ್ಷಣ ಪಡೆಯದೆ, ಕೌಶಲ್ಯ ಮತ್ತು ತಾಳ್ಮೆಯನ್ನು ಬೆಳೆಸಿಕೊಳ್ಳುವುದು ಮುಖ್ಯ ಎಂದರು.ಕ್ರಿಯೇಟಿವ್ ಕಾಲೇಜಿನ ಸಹ-ಸಂಸ್ಥಾಪಕ ಅಶ್ವಥ್ ಎಸ್.ಎಲ್. ಮಾತನಾಡಿ, ‘ಸಹನೆ, ಶ್ರಮ ಮತ್ತು ಆತ್ಮವಿಶ್ವಾಸ ಬೆಳೆಸಿಕೊಳ್ಳುವುದು ಯಶಸ್ಸಿನ ಮೂಲಮಂತ್ರವಾಗಿದೆ. ಯುವ ಸಮುದಾಯ ಉದ್ಯೋಗ ಪಡೆದು ತಮ್ಮ ಕುಟುಂಬಕ್ಕೆ ಬೆಳಕು ಚೆಲ್ಲುವ ಕಾರ್ಯ ಮಾಡಬೇ ಎಂದು ಹೇಳಿದರು.
ಕರುಣಾಕರ ಕೋಟ್ಯಾನ್ ನಿರೂಪಿಸಿದರು. ಸುಮಾ ಪ್ರಾರ್ಥಿಸಿದರು. ರಾಜೇಶ್ ಆಚಾರ್ಯ ಸ್ವಾಗತಿಸಿ, ವಂದಿಸಿದರು.