ಎಸ್‌ವಿಪಿ ವಿದ್ಯಾಸಂಸ್ಥೆ ಆವರಣದಲ್ಲಿ ಜ.೩೧ ಶನಿವಾರ ನಡೆಯಲಿರುವ ಬೃಹತ್ ಉದ್ಯೋಗ ಮೇಳವನ್ನು ಜೆಡಿಎಸ್ ಯುವ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ ಎಂದು ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ಎಸ್‌ವಿಪಿ ವಿದ್ಯಾಸಂಸ್ಥೆ ಆವರಣದಲ್ಲಿ ಜ.೩೧ ಶನಿವಾರ ನಡೆಯಲಿರುವ ಬೃಹತ್ ಉದ್ಯೋಗ ಮೇಳವನ್ನು ಜೆಡಿಎಸ್ ಯುವ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ ಎಂದು ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ತಿಳಿಸಿದರು. ನಗರದ ತಮ್ಮ ಗೃಹಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ೬೦ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದು ಶನಿವಾರದ ವೇಳೆಗೆ ಮತ್ತಷ್ಟು ಕಂಪನಿಗಳು ನೋಂದಣಿ ಮಾಡಿಕೊಳ್ಳಲಿದೆ. ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳದಲ್ಲಿಯೇ ನೇಮಿಸಿಕೊಂಡು ನೇಮಕಾತಿ ಪತ್ರವನ್ನೂ ನೀಡಲಿದೆ ಎಂದು ತಿಳಿಸಿದ ಶಾಂತಕುಮಾರ್ ಎಸ್‌ಎಸ್‌ಎಲ್‌ಸಿ ಪಾಸಾದವರಿಂದ ಹಿಡಿದು ಪಿಯುಸಿ, ಡಿಪ್ಲೊಮ, ಫಾರ್ಮಸಿ, ನರ್ಸಿಂಗ್, ಬಿಇ, ಬಿಎ, ಬಿಕಾಂ ಸೇರಿದಂತೆ ಯಾವುದೇ ಪದವಿ ಹೊಂದಿದವರೂ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.ಆಸಕ್ತರಿಗೆ ಈಗಾಗಲೇ ತಮ್ಮ ಕಚೇರಿಯಲ್ಲಿ ಅರ್ಜಿ ನೀಡಲಾಗುತ್ತಿದ್ದು ಸುಮಾರು ನೂರಾರು ಉದ್ಯೋಗಾಕಾಂಕ್ಷಿಗಳು ಅರ್ಜಿ ಪಡೆದು ನೊಂದಾಯಿಸಿದ್ದಾರೆ. ಜ.೩೧ರಂದು ಉದ್ಯೋಗ ಮೇಳ ನಡೆಯುವ ಸ್ಥಳದಲ್ಲಿಯೇ ನೋಂದಣಿಗೆ ಅವಕಾಶ ಕಲ್ಪಿಸಿದ್ದು ಅಲ್ಲಿಯೇ ನೇರವಾಗಿ ಬಂದು ನೊಂದಾಯಿಸಬಹುದಾಗಿದೆ. ತಾವು ಓದುತ್ತಿರುವ ಕಾಲೇಜಿನಲ್ಲಿಯೇ ಕ್ಯಾಂಪಸ್ ಇಂಟರ್‌ವ್ಯೂ ಆಗುತ್ತಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿಯವರಿಗೆ ಬಯೋಡೇಟಾ ನೀಡುವ ಅವಶ್ಯತೆಯಿಲ್ಲ. ಪದವಿ ಮುಗಿಸಿರುವವರು ಬಯೋಡೇಟ ನೀಡಲಿ ಸಾಕು ಎಂದು ತಿಳಿಸಿದರು.ಬೆಂಗಳೂರು ಸೇರಿದಂತೆ ಅನೇಕ ನಗರಗಳಲ್ಲಿ ಅನೇಕ ಕಂಪನಿಗಳಿಗೆ ಕೆಲಸ ಮಾಡುವವರು ಅವಶ್ಯಕತೆ ಇದೆ. ೩೦ರಿಂದ ೪೦ ಸಾವಿರ ಸಂಬಳ ಕೊಡಲೂ ಅನೇಕ ಕಂಪನಿಗಳು ಮುಂದೆ ಬಂದಿವೆ. ತಾಲೂಕಿನ ಎಲ್ಲ ನಿರುದ್ಯೋಗಿಗಳಿಗೂ ಕೆಲಸ ದೊರೆಯಬೇಕೆಂಬುದು ನನ್ನ ಆಸೆ. ಕೆಲವು ಕಂಪನಿಗಳಲ್ಲಿ ವಿದ್ಯೆಯ ಜೊತೆ ಕೌಶಲ್ಯವನ್ನೂ ಕೇಳುವುದರಿಂದ ಮುಂದಿನ ದಿನಗಳಲ್ಲಿ ಸ್ಕಿಲ್ ಡೆವಲಪ್‌ಮೆಂಟ್ ಬಗ್ಗೆ ತರಬೇತಿ ನೀಡಲು ಕಾರ್ಯಕ್ರಮ ಆಯೋಜಿಸಲಾಗುವುದು. ಅದಕ್ಕಾಗಿ ಈಗಾಗಲೇ ಕೌಶಲ್ಯ ತರಬೇತಿ ಪರಿಣಿತರನ್ನು ಸಂಪರ್ಕಿಸಿರುವುದಾಗಿ ತಿಳಿಸಿದರು. ಅಕ್ಷಯಕಲ್ಪ ಕಂಪನಿಯವರಿಗೆ ಸುಮಾರು ೨೦೦ ಉದ್ಯೋಗಿಗಳ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ. ಟಾಟಾ ಪ್ಲೇಸ್‌ಮೆಂಟ್ಸ್ ನವರಿಗೆ ೧೦೦ಜನ ಎಂಜಿನಿಯರುಗಳು ಬೇಕಾಗಿದ್ದಾರೆ. ಅದೇ ರೀತಿ ಕ್ರಿಯೇಟಿವ್ ಇಂಜಿನಿಯರ್ಸ್, ಐಐಎಫ್‌ಎಲ್, ಪೆಟ್ರೋಸಾಫ್ಟ್ ಟೆಕ್ನಾಲಜೀಸ್, ರಮೇಶ್ ಎಂಟರ್‌ಪ್ರೈಸಸ್, ಎಚ್.ಡಿಎಫ್‌ಸಿ ಲೈಫ್, ಮುತ್ತೂಟ್ ಫೈನಾನ್ಸ್ ಹೀಗೆ ಹಲವಾರು ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ ಎಂದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಶಿವಸ್ವಾಮಿ, ಜೆಡಿಎಸ್ ನಗರಾಧ್ಯಕ್ಷ ರಾಜು ಕಂಚಾಘಟ್ಟ, ಮುಖಂಡರಾದ ನಟರಾಜು ಗುರುಗದಹಳ್ಳಿ, ಬಸವರಾಜು, ಸಂಘಟನಾ ಕಾರ್ಯದರ್ಶಿ ನಟರಾಜು, ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.