ಬಳ್ಳಾರಿ: ವೈ.ಎಂ. ಸತೀಶ್ ಫೌಂಡೇಶನ್, ವೀರಶೈವ ವಿದ್ಯಾವರ್ಧಕ ಸಂಘ, ಇನ್ಫೋಸಿಸ್ ಫೌಂಡೇಶನ್ ಮತ್ತು ನಿರ್ಮಾಣ್ ಸಂಸ್ಥೆಗಳು ಜಂಟಿಯಾಗಿ ಬಳ್ಳಾರಿಯ ವೀರಶೈವ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಮೆಗಾ ಉದ್ಯೋಗ ಮೇಳದಲ್ಲಿ 1200ಕ್ಕೂ ಹೆಚ್ಚು ಅಭ್ಯರ್ಥಿಗಳು ಪಾಲ್ಗೊಂಡು, 30ಕ್ಕೂ ಹೆಚ್ಚಿನ ಕಂಪನಿಗಳಲ್ಲಿ ಸಂದರ್ಶನ ನೀಡಿದ್ದಾರೆ.
ವೈ.ಎಂ. ಸತೀಶ್ ಫೌಂಡೇಶನ್‍ನ ಏಚರೆಡ್ಡಿ ಕಾರ್ತಿಕ ಅವರು ಮೆಗಾ ಜಾಬ್ ಮೇಳವನ್ನು ಉದ್ಘಾಟಿಸಿ, ಈ ಜಾಬ್ ಮೇಳ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸುವಲ್ಲಿ ನೆರವಾಗಲಿದೆ. ನಾಡಿನ ಪ್ರಖ್ಯಾತ ಕಂಪನಿಗಳು, ಎಸ್‍ಎಸ್‍ಎಲ್‍ಸಿ - ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸ ಮಾಡಿದವರಿಗೆ ಉದ್ಯೋಗ ನೀಡುತ್ತಿವೆ ಎಂದರು.ವೈ.ಎಂ. ಸತೀಶ್ ಫೌಂಡೇಶನ್‍ನ ಸಂಸ್ಥಾಪಕ ಟ್ರಸ್ಟಿ ಆಗಿರುವ ವಿಧಾನಪರಿಷತ್ ಸದಸ್ಯರಾದ ವೈ.ಎಂ. ಸತೀಶ್ ಅವರು ಉದ್ಯೋಗ ಮೇಳದ ಸ್ಥಳಕ್ಕೆ ಭೇಟಿ ನೀಡಿ, ವಿವಿಧ ಕಂಪನಿಗಳು ಯುವ ಪ್ರತಿಭೆಗಳಿಗೆ ನಡೆಸುತ್ತಿದ್ದ ಸಂದರ್ಶನ ಮತ್ತು ನೇಮಕಾತಿ ಪ್ರಕ್ರಿಯೆಗಳನ್ನು ಪರಿಶೀಲಿಸಿ, ಅನೇಕ ಸಲಹೆಗಳನ್ನು-ಮಾರ್ಗದರ್ಶನಗಳನ್ನು ನೀಡಿದರು.
ಉದ್ಯೋಗ ನೇಮಕಾತಿ ಪತ್ರವನ್ನು ಸಾಂಕೇತಿಕವಾಗಿ ವಿತರಿಸಿದ ಅವರು, ವೈ.ಎಂ. ಸತೀಶ್ ಫೌಂಡೇಶನ್‍ನ ಆಶ್ರಯದಲ್ಲಿ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಪ್ರತೀ ವರ್ಷ ಮೆಗಾ ಜಾಬ್ ಮೇಳವನ್ನು ಏರ್ಪಡಿಸಲಾಗುತ್ತದೆ. ಪ್ರತಿ ಜಾಬ್ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಆಸಕ್ತ ಅಭ್ಯರ್ಥಿಗಳು ಮತ್ತು ಕಂಪನಿಗಳ ಪಾಲ್ಗೊಳ್ಳುವಿಕೆಗೆ ವಿಶೇಷ ಶ್ರಮವಹಿಸಲಾಗುತ್ತದೆ ಎಂದರು.ಈ ಮೆಗಾ ಜಾಬ್ ಮೇಳದಲ್ಲಿ ಐಟಿಐ, ಡಿಪ್ಲೊಮಾ, ಬಿಎಸ್ಸಿ, ಡಿ ಫಾರ್ಮಾ, ಪದವಿ ಮತ್ತು ಸ್ನಾತ್ತಕೋತ್ತರ ಪದವಿ, ಪಿಯುಸಿ ಮತ್ತು ಎಸ್‍ಎಸ್‍ಎಲ್‍ಸಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ಬಳ್ಳಾರಿ, ಬೆಂಗಳೂರು ಮತ್ತು ಹೈದರಾಬಾದ್‍ನಲ್ಲಿ ಉದ್ಯೋಗ ನೇಮಕಾತಿ ಪ್ರಕ್ರಿಯೆ ನಡೆಯಿತು.
ಜಾಬ್‍ಮೇಳದಲ್ಲಿ ಪಾಲ್ಗೊಂಡಿದ್ದ ಅಭ್ಯರ್ಥಿಗಳು, `ಜಾಬ್ ಮೇಳದಲ್ಲಿ ಹೆಸರಾಂತ ಕಂಪನಿಗಳು ಪಾಲ್ಗೊಂಡಿವೆ. ಸಂದರ್ಶನ ಮತ್ತು ನೇಮಕಾತಿ ಕುರಿತು ಅತ್ಯಂತ ವ್ಯವಸ್ಥಿತವಾಗಿ ನಡೆದಿದೆ. ಉಚಿತವಾದ ಸಂದರ್ಶನ ಆಗಿರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾಸಕ್ತರು ಪಾಲ್ಗೊಂಡಿದ್ದೇವೆ'''''''' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.35ಕ್ಕೂ ಹೆಚ್ಚಿನ ಕಂಪನಿಗಳ ಪ್ರತಿನಿಧಿಗಳು, ಅಭ್ಯರ್ಥಿಗಳಿಗೆ ಸಂದರ್ಶನ, ನೇಮಕಾತಿ, ಸೌಲಭ್ಯಗಳು, ಷರತ್ತುಗಳು - ನಿಯಮಗಳು ಇನ್ನಿತರೆಗಳ ಅರ್ಹ ಆಸಕ್ತ ಅಭ್ಯರ್ಥಿಗಳಿಗೆ ಪ್ರಾಥಮಿಕ ಮಾರ್ಗದರ್ಶನ ನೀಡಿದ್ದಾರೆ.
ವೀರಶೈವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ದರೂರು ಶಾಂತನಗೌಡ, ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಬಿ.ಟಿ. ಪಾಟೀಲ್, ವೀರಶೈವ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಆಡಳಿತ ಮಂಡಳಿ ಸದಸ್ಯರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.