ಉದ್ಯೋಗ ಖಾತ್ರಿ ಕೂಲಿಯು ₹316 ರಿಂದ ₹349ಕ್ಕೆ ಹೆಚ್ಚಳ

KannadaprabhaNewsNetwork | Published : Apr 1, 2024 12:50 AM

ಸಾರಾಂಶ

ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದಲ್ಲಿ ಉದ್ಯೋಗ ಖಾತ್ರಿ ದುಡಿಮೆ ಖಾತ್ರಿ ಅಭಿಯಾನ ಹಾಗೂ ಮತದಾನ ಜಾಗೃತಿ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವ ಕೂಲಿಕಾರರ ಕೂಲಿ ಮೊತ್ತವನ್ನು ₹316 ರಿಂದ ₹349 ಹೆಚ್ಚಳವಾಗಿದೆ ಇದರ ಲಾಭವನ್ನು ನರೇಗಾ ಕಾರ್ಮಿಕರು ಪಡೆದುಕೊಳ್ಳಬೇಕೆಂದು ತಾಪಂ ಅಧಿಕಾರಿ ರಮೇಶ ಸುಲ್ಪಿ ಹೇಳಿದರು.

ತಾಲೂಕಿನ ರಾಜೇಶ್ವರ ಗ್ರಾಮದಲ್ಲಿ ನಡೆದ ವಲಸೆ ಯಾಕ್ರಿ ನಿಮ್ಮೂರಲ್ಲೆ ಉದ್ಯೋಗ ಖಾತ್ರಿ/ದುಡಿಮೆ ಖಾತ್ರಿ ಅಭಿಯಾನ ಹಾಗೂ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಲೋಕಸಭೆ ಚುನಾವಣೆ ನಿಮಿತ್ತ ಮೇ.7 ರಂದು ನಡೆಯುವ ಮತದಾನದಂದು ಕಡ್ಡಾಯವಾಗಿ ಎಲ್ಲರು ಮತದಾನದ ಹಕ್ಕು ಚಲಾಯಿಸಬೇಕು ಎಂದರು.

ದೇಶಕ್ಕೆ ಉತ್ತಮ ವ್ಯಕ್ತಿ ಆಯ್ಕೆ ಮಾಡುವುದು ಮತದಾರರ ಮೇಲೆ ನಿಂತಿದೆ. ಹೀಗಾಗಿ ಮತದಾರರು ಯಾವುದೇ ಆಸೆ ಆಮೀಷಗಳಿಗೆ ಒಳಗಾಗದೆ ಧೈರ್ಯದಿಂದ ನಿಮಗೆ ಸೂಕ್ತ ಎನಿಸಿದ ವ್ಯಕ್ತಿಗಳಿಗೆ ತಮ್ಮ ಅಮುಲ್ಯವಾದ ಮತದಾನದ ಹಕ್ಕು ಚಲಾಯಿಸುವ ಮೂಲಕ ಬಲಿಷ್ಠ ಸರ್ಕಾರ ನಿರ್ಮಾಣಕ್ಕಾಗಿ ಸಹಕಾರಿಯಾಗಬೇಕು ಎಂದರು.

ಬೇಸಿಗೆಯಲ್ಲಿ ಉದ್ಯೋಗ ಇಲ್ಲವೆಂದು ಗ್ರಾಮೀಣ ಭಾಗದ ಜನರು ವಲಸೆ ಹೋಗಬಾರದು ಎಂಬ ದೃಷ್ಟಿಯಿಂದ ವಲಸೆ ಯಾಕ್ರಿ ನಿಮ್ಮೂರಲ್ಲೆ ಉದ್ಯೋಗ ಖಾತ್ರಿ ದುಡಿಮೆ ಖಾತ್ರಿ ಅಭಿಯಾನ ಮೂಲಕ ಕಾರ್ಮಿಕರಿಗೆ ಏಪ್ರೀಲ್ ನಿಂದ ನಿರಂತರ ಉದ್ಯೋಗ ನೀಡುವುದೇ ಈ ಅಭಿಯಾನ ಮೂಲ ಉದ್ದೇಶವಾಗಿದೆ. ಹೀಗಾಗಿ ಕಾರ್ಮಿಕರು ಫಾರ್ಮ್‌ ನಂ.6ರಲ್ಲಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿ, 100 ದಿವಸ್ ಉದ್ಯೋಗ ಪಡೆದುಕೊಳ್ಳಬೇಕು ಮತ್ತು ಯಾವುದೇ ಸಮಸ್ಯೆ ಇದ್ದಲ್ಲಿ ನಮ್ಮ ಗಮನಕ್ಕೆ ತಂದರೆ ಬಗೆಹರಿಸಲಾಗುವುದು ಎಂದು ತಿಳಿಸಿದರು.

ತಾಪಂ ಸಹಾಯಕ ನಿರ್ದೇಶಕ (ನರೇಗಾ) ಸಂತೋಷ ಚವ್ಹಾಣ ಮಾತನಾಡಿ, ಬೆಸಿಗೆ ಮುಗಿಯುವವರೆಗು ನರೇಗಾ ಕಾರ್ಮಿಕರಿಗೆ ನಿರಂತರವಾಗಿ ಕೆಲಸ ಕೊಡಬೇಕು ಮತ್ತು ಕಾರ್ಮಿಕರಿಂದ ಯಾವುದೇ ದೂರುಗಳು ಬರದಂತೆ ನೋಡಿಕೊಳ್ಳಬೇಕು ಹಾಗೂ ಕಾಮಗಾರಿ ದಾಖಲಾತಿಗಳು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಬೇಕು ಎಂದು ಹೇಳಿದರು.

ನಂತರ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಬ್ಯಾನರ್ ಹಿಡಿದುಕೊಂಡು ಮತದಾನ ಜಾಗೃತಿ ಮೂಡಿಸಲಾಯಿತು. ಈ ವೇಳೆ ಪಿಡಿಒ ಪದ್ಮಪ್ಪಾ ಗಾಣಿಗೇರ್, ರಾಕೇಶ ಐನೊಳ್ಳಿ, ಐಇಸಿ ಸಂಯೋಜಕ ವೀರಾರೆಡ್ಡಿ, ತಾಂತ್ರಿಕ ಸಂಯೋಜಕ ಅಮರನಾಥ ಪಾಟೀಲ್, ಟಿಎ.ಗಳಾದ ಮಾಣಿಕ ಮೋರೆ, ಶ್ರೀಕಾಂತ ಪಾಟೀಲ್, ಜಲೀಲ ಸಾಬ್, ಅವಿನಾಶ ಸೇರಿ ಇತರರಿದ್ದರು.

ನರೇಗಾ ಕಾರ್ಮಿಕರ ಕೂಲಿ ಮೊತ್ತವನ್ನು ₹349 ಕ್ಕೆ ಹೆಚ್ಚಿಸಲಾಗಿದೆ ಹಾಗೂ ನರೇಗಾ ಮಕ್ಕಳಿಗಾಗಿ ಗ್ರಾಪಂಗಳಲ್ಲಿ ಕೂಸಿನ ಮನೆ ಪ್ರಾರಂಭಿಸಲಾಗಿದೆ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವಿವಿಧ ಯೋಜನೆಗಳ ಮಾಹಿತಿ ಮತ್ತು ಕುಂದುಕೊರತೆಗಳ ನಿವಾರಣೆಗಾಗಿ ನೂತನ ಏಕೀಕೃತ ಸಹಾಯವಾಣಿ 8277506000 ಆರಂಭಿಸಲಾಗಿದೆ. ಹೀಗಾಗಿ ಕಾರ್ಮಿಕರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಸುಲ್ಪಿ ತಿಳಿಸಿದರು.ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದಲ್ಲಿ ಉದ್ಯೋಗ ಖಾತ್ರಿ ದುಡಿಮೆ ಖಾತ್ರಿ ಅಭಿಯಾನ ಹಾಗೂ ಮತದಾನ ಜಾಗೃತಿ ಕಾರ್ಯಕ್ರಮ ಜರುಗಿತು.

Share this article