ಹಳಿಯಾಳ: ಭಾರತವು ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶವಾಗಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಇಂದು ಸಾಕಷ್ಟು ಅವಕಾಶಗಳಿವೆ. ಅದಕ್ಕಾಗಿ ಈ ತಂತ್ರಜ್ಞಾನ ಕ್ಷೇತ್ರದಲ್ಲಿ ಯಶಸ್ವಿಯಾಗಬೇಕಾದರೆ ಇಂದಿನ ಯುವ ಜನಾಂಗವು ತಾಂತ್ರಿಕ ಶಿಕ್ಷಣದ ಜೊತೆಗೆ ಗುಣಮಟ್ಟದ ಕೌಶಲ ತರಬೇತಿಯಲ್ಲಿ ಪಾರಂಗತರಾಗಬೇಕು ಎಂದು ಸರ್ಕಾರಿ ಐಟಿಐ ಹವಗಿ ಕಾಲೇಜಿನ ಪ್ರಾಚಾರ್ಯ ಎಂ.ಎ. ಕಾಗದ ಹೇಳಿದರು.
ವೃತ್ತಿ ಕೌಶಲ ಉಳ್ಳವರಿಗೆ ಅವಕಾಶಗಳು ಹೇರಳವಾಗಿದ್ದು, ಉದ್ಯೋಗಗಳು ಸುಲಭವಾಗಿ ದೊರೆಯಲು ಸಾಧ್ಯವೆಂದರು.
ದೇಶದ ಆರ್ಥಿಕತೆಯು ಬದಲಾವಣೆಯ ಹಾದಿಯಲ್ಲಿ ಸಾಗಿದೆ. ಭಾರತವು ಮೇಕ್ ಇಂಡಿಯಾ ಹಾಗೂ ಸ್ಕಿಲ್ ಇಂಡಿಯಾದಂತಹ ವಿಚಾರಗಳಿಂದ ವಿಶ್ವದ ಗಮನ ಸೆಳೆದಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕೌಶಲಾಭಿವೃದ್ಧಿಗೆ ಆದ್ಯತೆ ನೀಡಬೇಕಾಗಿದೆ ಎಂದರು.ಗೋವಾ ರಾಜ್ಯದ ಎಂಆರ್‌ಎಫ್, ಬಳ್ಳಾರಿಯ ಜಿಂದಾಲ್ ಸ್ಟೀಲ್, ದಾಂಡೇಲಿಯ ಕಾಗದ ಕಾರ್ಖಾನೆ, ಬೆಂಗಳೂರಿನ ಬಾಶ್, ಅಶೇಜರ್ಸ್, ಕನೆಕ್ಟ್, ಇಂಪ್ಯಾಕ್ಟ್ ಹಾಗೂ ಶಾಂಬಾ ಸೇರಿದಂತೆ ಇನ್ನಿತರ ಕಂಪನಿಗಳ ಪ್ರತಿನಿಧಿಗಳು ಮೇಳದಲ್ಲಿ ಭಾಗವಹಿಸಿ ಸುಮಾರು 500ಕ್ಕೂ ಅಧಿಕ ಜನರಿಗೆ ಶಿಶಿಕ್ಷು ನೀಡಲು ಆಯ್ಕೆ ಮಾಡಿಕೊಂಡರು. ಜಿಲ್ಲೆ ಸೇರಿದಂತೆ ರಾಜ್ಯದ ಇನ್ನಿತರ ಭಾಗಗಳಿಂದ ಸಾವಿರಾರು ವಿದ್ಯಾರ್ಥಿಗಳು ಭಾಗಿಯಾಗಿ ಮೇಳವನ್ನು ಸದುಪಯೋಗ ಪಡೆದುಕೊಂಡರು.