ಹಾವೇರಿ: ಎಐ ತಂತ್ರಜ್ಞಾನದಿಂದ ಉದ್ಯೋಗಾವಕಾಶಗಳು ಕಡಿಮೆಯಾಗುತ್ತವೆ ಎಂಬುದು ಸರಿಯಲ್ಲ. ಒಂದು ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾದಂತೆ ಕಂಡುಬಂದರೂ, ಮತ್ತೊಂದು ಕ್ಷೇತ್ರದಲ್ಲಿ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತವೆ. ತಂತ್ರಜ್ಞಾನದಲ್ಲಿನ ಬದಲಾವಣೆಗಳಿಗೆ ಯುವಜನತೆ ಹೊಂದಿಕೊಳ್ಳಬೇಕು ಎಂದು ಅಂತಾರಾಷ್ಟ್ರೀಯ ಸೈಬರ್ ತಜ್ಞ ಹಾಗೂ ಸೈಬರ್ ಸೆಕ್ಯುರಿಟಿ ಪುಸ್ತಕದ ಲೇಖಕ ಡಾ. ಉದಯಶಂಕರ ಪುರಾಣಿಕ ಹೇಳಿದರು.
ಸೈಬರ್ ಸುರಕ್ಷತಾ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಯಾವ ರೀತಿಯ ತರಬೇತಿ ಪಡೆಯಬೇಕು, ಯಾವ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದರ ಕುರಿತು ಯುವಜನರಲ್ಲಿ ಮಾಹಿತಿ ಕೊರತೆಯಿದೆ. ಹೀಗಾಗಿ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿದ್ದರೂ, ಅದಕ್ಕೆ ತಕ್ಕಷ್ಟು ಅರ್ಹ ಅಭ್ಯರ್ಥಿಗಳು ಲಭ್ಯವಾಗುತ್ತಿಲ್ಲ. ಉತ್ತರ ಕರ್ನಾಟಕದ ಯುವಜನರಿಗೆ ಈ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಅಗತ್ಯ ಮಾರ್ಗದರ್ಶನ ನೀಡುವ ಉದ್ದೇಶದಿಂದ ಸಂಪೂರ್ಣ ಕನ್ನಡದಲ್ಲಿಯೇ ಸೈಬರ್ ಸೆಕ್ಯುರಿಟಿ ಕನ್ನಡ ಪುಸ್ತಕ ರಚಿಸಿರುವುದಾಗಿ ತಿಳಿಸಿದರು.
ಈ ಪುಸ್ತಕವನ್ನು ವಿದ್ಯಾರ್ಥಿಗಳು, ಎಐ ಕಲಿಕಾ ಕ್ಷೇತ್ರದ ಆಸಕ್ತರು, ಉಪನ್ಯಾಸಕರು ಸೇರಿದಂತೆ ಸಾರ್ವಜನಿಕರು ಓದಿ ಪ್ರಯೋಜನ ಪಡೆಯಬಹುದು. ಪುಸ್ತಕದ ಪ್ರತಿಯೊಂದು ಅಧ್ಯಾಯವೂ ಹಿಂದಿನ ಅಧ್ಯಾಯದ ತಳಹದಿಯ ಮೇಲೆ ರೂಪುಗೊಂಡಿದೆ. ಹೀಗಾಗಿ ಇಡೀ ಪುಸ್ತಕವನ್ನು ಓದಿದಾಗ ಮಾತ್ರ ವಿಷಯದ ಸಮಗ್ರ ಚಿತ್ರಣ ಲಭ್ಯವಾಗಲಿದೆ ಎಂದರು.ಇಂದು ಮನೆಗಳಲ್ಲಿ ಅಳವಡಿಸುವ ಸ್ಮಾರ್ಟ್ ಟಿವಿಗಳೂ ಬಳಕೆದಾರರ ಮಾತುಗಳನ್ನು ಆಲಿಸಿ, ಆ ಮಾಹಿತಿಯನ್ನು ಬೇರೆಡೆಗೆ ರವಾನಿಸುವಷ್ಟು ತಂತ್ರಜ್ಞಾನ ಬೆಳೆದಿದೆ. ಸೈಬರ್ ಅಪಾಯಗಳು ಈ ಮಟ್ಟಕ್ಕೆ ಬೆಳೆದಿವೆ. ಮೊಬೈಲ್‌ಗಳಲ್ಲಿ ಅಪರಿಚಿತ ಸಂಖ್ಯೆಗಳಿಂದ ಬರುವ ವಾಟ್ಸಪ್ ಸಂದೇಶಗಳನ್ನು ತೆರೆಯುವಾಗಲೂ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸುರೇಶ ಜಂಗಮಶೆಟ್ಟಿ ಮಾತನಾಡಿ, ಡಾ. ಉದಯಶಂಕರ ಪುರಾಣಿಕ ಅವರು ಜಾಗತಿಕ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ 37 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅಮೆರಿಕದ ಮಿಲಿಟರಿ ಅಂಡ್ ಏರೋಸ್ಪೇಸ್ ಸೈಬರ್ ಸೆಕ್ಯುರಿಟಿ ಗ್ರೂಪ್, ಯುರೋಪಿಯನ್ ಯೂನಿಯನ್ ಏಜೆನ್ಸಿ ಫಾರ್ ಸೈಬರ್ ಸೆಕ್ಯುರಿಟಿ ಸೇರಿದಂತೆ ವಿವಿಧ ಸಂಸ್ಥೆಗಳ ಭದ್ರತಾ ಸಮಿತಿಗಳ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಅಮೆರಿಕ ಮೂಲದ ಥೆಟಾ ಡೈನಾಮಿಕ್ಸ್ ಸಂಸ್ಥೆಯ ಸೈಬರ್ ಭದ್ರತಾ ವಿಭಾಗದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.