ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಸುಮಾರು 3.5 ಕೋಟಿ ಉದ್ಯೋಗ ಸೃಷ್ಟಿಗೆ ಪ್ರೋತ್ಸಾಹ ಮತ್ತು ಸಾಮಾಜಿಕ ಭದ್ರತೆ ನೀಡುವಂತಹ ಮಹತ್ವಾಕಾಂಕ್ಷಿ ಯೋಜನೆಯಾದ ಭಾರತ್ ಉದ್ಯೋಗ (ರೋಜ್ಗಾರ್) ಯೋಜನೆಯನ್ನು ಜಿಲ್ಲೆಯಲ್ಲಿಯೂ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕೆಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾ ಪ್ರಜಾಸೌಧದ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಧಾನಮಂತ್ರಿ ವಿಕಸಿತ ಭಾರತ ಉದ್ಯೋಗ ಯೋಜನೆ ಕುರಿತ ತರಬೇತಿ ಹಾಗೂ ಮಾರ್ಗದರ್ಶನ ನೀಡುವ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ಕೌಶಲ್ಯ ಕಲಿಕೆಯಿಂದ ಯುವ ಸಮೂಹಕ್ಕೆ ಉದ್ಯೋಗ ಭದ್ರತೆ ಸಾಧ್ಯವಾಗಲಿದೆ ಎಂದು ಹೇಳಿದರು.ಅರ್ಥಿಕ ಭದ್ರತೆ ಹೆಚ್ಚಿಸುವ ಯೋಜನೆ
ಉದ್ಯೋಗಾಂಕ್ಷಿಗಳು, ಉದ್ಯೋಗದಾತರು ಮತ್ತು ಹೊಸದಾಗಿ ಉದ್ಯೋಗ ಗಳಿಸುವವರು ವಿಕಸಿತ ಭಾರತ ಉದ್ಯೋಗ ಯೋಜನೆಯ ಮಹತ್ವವನ್ನು ಅರಿತುಕೊಳ್ಳಬೇಕು. ಈ ಯೋಜನೆಯನ್ನು ಖಾಸಗಿ ವಲಯದ ನೌಕರರು ಮತ್ತು ಅವರ ಕುಟುಂಬದ ಸದಸ್ಯರ ಆರ್ಥಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ಉದ್ಯೋಗ ಆಧಾರಿತ ಪ್ರೋತ್ಸಾಹಧನ ಯೋಜನೆಯ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು 2 ವರ್ಷದಲ್ಲಿ 3.5 ಕೋಟಿಗಿಂತ ಅಧಿಕ ಉದ್ಯೋಗಗಳ ಸೃಷ್ಟಿಗೆ ಬೆಂಬಲ ನೀಡುವ ಯೋಜನೆಯಾಗಿದೆ ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ಕುಮಾರ್ ರಾಹುಲ್ ಮಾತನಾಡಿ, ‘ರೋಜ್‌ಗಾರ್’ ಯೋಜನೆ ವಿಕಸಿತ ಭಾರತ ಉದ್ಯೋಗ ಯೋಜನೆಯಲ್ಲಿ ನೂತನವಾಗಿ ಉದ್ಯೋಗಕ್ಕೆ ಸೇರಿದ ಉದ್ಯೋಗಿಗಳಿಗೆ ಗರಿಷ್ಠ 15,000 ರು.ಗಳ ವರೆಗೆ ಪ್ರೋತ್ಸಾಹಧನವನ್ನು ಎರಡು ಕಂತುಗಳಲ್ಲಿ ನೀಡಲಾಗುತ್ತದೆ ಎಂದು ಹೇಳಿದರು.ಉಳಿತಾಯ ಉತ್ತೇಜಿಸ ಉದ್ದೇಶ
ಒಂದು ಲಕ್ಷ ವರೆಗಿನ ವೇತನ ಹೊಂದಿರುವ ಉದ್ಯೋಗಿಗಳು ಇದಕ್ಕೆ ಅರ್ಹರು. ಮೊದಲ ಕಂತನ್ನು 6 ತಿಂಗಳ ಸೇವೆಯ ನಂತರ ಮತ್ತು 2ನೇ ಕಂತನ್ನು 12 ತಿಂಗಳ ಸೇವೆಯ ನಂತರ ಪಾವತಿಸಲಾಗುತ್ತದೆ. ಉಳಿತಾಯ ಮನೋಭಾವ ಉತ್ತೇಜಿಸಲು, ಪ್ರೋತ್ಸಾಹಧನದ ಒಂದು ಭಾಗವನ್ನು ಠೇವಣಿ ಖಾತೆಯಲ್ಲಿ ನಿಗದಿತ ಅವಧಿಗೆ ಇಡಲಾಗುತ್ತದೆ ಎಂದರು. ಯಲಹಂಕದ ಭವಿಷ್ಯ ನಿಧಿ ಶಾಖಾ ಕಚೇರಿಯ ಉಸ್ತುವಾರಿ ಇಎಸ್ಐಸಿ ಪ್ರತಿನಿಧಿ ಶ್ರೀ ಪ್ರಭು ಕುಮಾರ್ ರವರು “ಉದ್ಯೋಗದಾತರು,ಉದ್ಯೋಗಿಗಳ ನೋಂದಣಿಯನ್ನು ಉತ್ತೇಜಿಸುವ ಯೋಜನೆ” ಕುರಿತು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಯಲಹಂಕದ ಕಾರ್ಮಿಕರ ಭವಿಷ್ಯನಿಧಿಯ ಪ್ರಾದೇಶಿಕ ಕಚೇರಿಯ ಆಯುಕ್ತೆ ಸ್ವಾಗತಾ ರೈ, ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಧಿಕಾರಿ ರಘು ಜಿ.ಪಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಶಬಾನಾ ಆಜ್ಮಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.