ಧಾರವಾಡ:
ಉದ್ಯೋಗ ಒದಗಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಫಲವಾಗಿವೆ ಎಂದು ಡಿ. 10ರಂದು ಧಾರವಾಡದಲ್ಲಿ ಸಾವಿರಾರು ಉದ್ಯೋಗಾಕಾಂಕ್ಷಿಗಳು ಮತ್ತೊಂದು ಬೃಹತ್ ಪ್ರತಿಭಟನಾ ಧರಣಿಗೆ ಸಿದ್ಧರಾಗಿದ್ದಾರೆ.ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಹೋರಾಟಗಾರ ಭವಾನಿ ಶಂಕರ್, ಕಳೆದ ಮೂರು ತಿಂಗಳಿಂದ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯಿಂದ ಉದ್ಯೋಗಕ್ಕಾಗಿ ಆಗ್ರಹಿಸಿ ಹೋರಾಟ ನಡೆಯುತ್ತಿದೆ. ಇದರ ಭಾಗವಾಗಿ ಅ. 17ಕ್ಕೆ ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ರಾಜ್ಯಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ನ್ಯಾ. ಸಂತೋಷ ಹೆಗ್ಡೆ, ಹಿರಿಯ ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ನೇತೃತ್ವದ ನಿಯೋಗದಲ್ಲಿ ಮುಖ್ಯಮಂತ್ರಿ ಭೇಟಿಯಾಗಲು ಅವಕಾಶ ಕೇಳಲಾಗಿತ್ತು. ಸರ್ಕಾರದಿಂದ ಸ್ಪಂದನೆ ಸಿಗಲಿಲ್ಲ. ಡಿ.1ಕ್ಕೆ ಮತ್ತೆ ಹೋರಾಟ ಮಾಡಲು ಮುಂದಾದ ಉದ್ಯೋಗಾಕಾಂಕ್ಷಿಗಳಿಗೆ ಅವಕಾಶ ನೀಡದೇ ಪೊಲೀಸ್ ಇಲಾಖೆ ಅಪಮಾನ ಮಾಡಿದೆ ಎಂದು ಕಿಡಿಕಾರಿದರು.
ಈ ಹಿನ್ನೆಲೆಯಲ್ಲಿ ಉದ್ಯೋಗ ಆಕಾಂಕ್ಷಿಗಳಿಗೆ ಉನ್ನತ ಹಂತದ ಹೋರಾಟಕ್ಕೆ ಮುನ್ನಡೆಯುವುದಲ್ಲದೆ ಬೇರೆ ದಾರಿಯಿಲ್ಲ. ಆದ್ದರಿಂದ, ಉದ್ಯೋಗ ಒದಗಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿಳಂಬ ನೀತಿ ಖಂಡಿಸಿ ಡಿ. 10 ರಂದು ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಬೃಹತ್ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನಾ ಧರಣಿಗೆ ರೈತ ಸಂಘಟನೆ, ಕಾರ್ಮಿಕ ಸಂಘಟನೆ, ವಿದ್ಯಾರ್ಥಿ ಯುವಜನ ಮಹಿಳಾ ಸಂಘಟನೆ, ಹಲವಾರು ಜನಪರ ಸಂಘಟನೆಗಳ ನಾಯಕರು ಹಾಗೂ ಸಾಮಾಜಿಕ ಹೋರಾಟಗಾರರು ಬೆಂಬಲ ಸೂಚಿಸಿ ಮಾತನಾಡಲಿದ್ದಾರೆ. ಈ ಬೃಹತ್ ಪ್ರತಿಭಟನಾ ಧರಣಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾಕಾಂಕ್ಷಿಗಳು ಭಾಗವಹಿಸಬೇಕೆಂದು ಹೋರಾಟ ಸಮಿತಿ ಮನವಿ ಮಾಡುತ್ತದೆ ಎಂದು ಭವಾನಿ ಶಂಕರ ತಿಳಿಸಿದರು.3ನೇ ಹೋರಾಟದ ಹಕ್ಕೊತ್ತಾಯ:
ನೇಮಕಾತಿಯನ್ನು ಕೆಲವೇ ಹುದ್ದೆಗಳಿಗೆ ಸೀಮಿತಗೊಳಿಸದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿಯಲ್ಲಿ ವಯೋಮಿತಿಯನ್ನು ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿಗೆ 33 ಹಾಗೂ ಸಾಮಾನ್ಯ ವರ್ಗಕ್ಕೆ 30 ವರ್ಷಗಳಿಗೆ ಹೆಚ್ಚಿಸಿ ಯಾವುದೇ ನೆಪಗಳನ್ನು ಕೊಡದೇ ಶೀಘ್ರವೇ ನೇಮಕಾತಿ ಅಧಿಸೂಚನೆ ಹೊರಡಿಸಬೇಕು. ರಾಜ್ಯದಲ್ಲಿ ಕಳೆದ ನಾಲೈದು ವರ್ಷಗಳಿಂದ ಸರಿಯಾದ ನೇಮಕಾತಿಗಳು ನಡೆಯದ ಹಿನ್ನೆಲೆಯಲ್ಲಿ ಎಲ್ಲ ನೇಮಕಾತಿಗಳಿಗೆ ಅರ್ಹ ವಯೋಮಿತಿಯನ್ನು 5 ವರ್ಷಗಳಿಗೆ ಸಡಿಲಿಕೆ ಮಾಡಬೇಕು. ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ಹೆಚ್ಚಿರುವ ಜಯನಗರ, ಸಪ್ತಾಪುರ, ಶ್ರೀನಗರ, ಕಲ್ಯಾಣನಗರ ಭಾಗದಲ್ಲಿ ಅವರಿಗೆ ಅನುಕೂಲವಾಗುವಂತೆ ಇಂದಿರಾ ಕ್ಯಾಂಟೀನ್ ತೆರೆಯುವುದ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮೂರನೇ ಬಾರಿ ಉದ್ಯೋಗಾಕಾಂಕ್ಷಿಗಳು ಗಂಭೀರವಾಗಿ ಹೋರಾಟಕ್ಕೆ ಸಜ್ಜಾಗಿದ್ದಾರೆ.