ಕಂಪ್ಲಿಯಲ್ಲಿ ಅದ್ದೂರಿಯಾಗಿ ಜರುಗಿದ ಜೋಡಿ ಮಹಾ ರಥೋತ್ಸವ

KannadaprabhaNewsNetwork |  
Published : Dec 01, 2025, 02:30 AM IST
ಕಂಪ್ಲಿಯ ಆರಾಧ್ಯ ದೈವ ಶ್ರೀ ಪೇಟೆ ಬಸವೇಶ್ವರ ಹಾಗೂ ನೀಲಮ್ಮ ದೇವಿಯ ರಥೋತ್ಸವವು ಭಾನುವಾರ ಅದ್ದೂರಿಯಾಗಿ ಜರುಗಿತು.   | Kannada Prabha

ಸಾರಾಂಶ

ಭಕ್ತಿ, ಸಂಭ್ರಮ ಮತ್ತು ವೈಭವದ ಅನನ್ಯ ಸಮ್ಮಿಲನಕ್ಕೆ ಸಾಕ್ಷಿಯಾಯಿತು.

ಕಂಪ್ಲಿ: ಪಟ್ಟಣದ ಆರಾಧ್ಯ ದೈವ ಶ್ರೀ ಪೇಟೆ ಬಸವೇಶ್ವರ ಹಾಗೂ ಶ್ರೀ ನೀಲಮ್ಮ ದೇವಿಯ ಜೋಡಿ ಮಹಾ ರಥೋತ್ಸವ ಸಂಪ್ರದಾಯಬದ್ಧವಾಗಿ, ಸಕಲ ಧಾರ್ಮಿಕ ವೈಭವಗಳೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು. ಪಟ್ಟಣವು ಭಾನುವಾರ ಸಂಜೆ ಭಕ್ತಿ, ಸಂಭ್ರಮ ಮತ್ತು ವೈಭವದ ಅನನ್ಯ ಸಮ್ಮಿಲನಕ್ಕೆ ಸಾಕ್ಷಿಯಾಯಿತು.

ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಆರಂಭಗೊಂಡವು. ಸಂಜೆ ವೇಳೆಗೆ ರಥೋತ್ಸವದ ಪ್ರಮುಖ ಸಂಭ್ರಮ ಪ್ರಾರಂಭಗೊಂಡಿತು. ಬಣ್ಣಬಣ್ಣದ ಹೂಮಾಲೆಗಳಿಂದ, ಬಾಳೆಗಿಡಗಳಿಂದ ಸೇರಿ ವಿವಿಧ ರೀತಿಯ ಆಕರ್ಷಕ ಮಾಲೆಗಳಿಂದ ಸಿಂಗಾರಗೊಂಡ ರಥಗಳನ್ನು ಭಕ್ತರು ಶ್ರದ್ಧೆಯಿಂದ ಹೊರತರಲು ಜಮಾಯಿಸಿದರು. ತೇರಿನ ಮನೆಯಿಂದ ರಾಜಕುಮಾರ ರಸ್ತೆಯ ಮೂಲಕ ಕೂಲಿ ಕಟ್ಟೆ ಬಸವೇಶ್ವರ ದೇವಸ್ಥಾನದ ವರೆಗೂ ರಥಗಳನ್ನು ಎಳೆದೊಯ್ದು ಮರಳಿ ತೇರಿನ ಮನೆ ವರೆಗೂ ತರಲಾಯಿತು. ರಥದ ಹಗ್ಗ ಹಿಡಿದು ದೇವರ ಸೇವೆಯಲ್ಲಿ ಭಾಗವಹಿಸಿದ ಭಕ್ತರು ಶ್ರೀ ಪೇಟೆ ಬಸವೇಶ್ವರ ಮಹಾರಾಜ್ ಕೀ ಜೈ ಎಂಬ ಘೋಷಣೆಗಳಿಂದ ಭಕ್ತಿ ಸಮರ್ಪಿಸಿದರು.

ಹೂವಿನ ಅಡ್ಡಪಲ್ಲಕ್ಕಿ ಮತ್ತು ಉಚ್ಚಯಗಳ ಮೆರವಣಿಗೆಯು ಜರುಗಿತು. ತಾಷಾ, ರಾಮ್ ಡೋಲ್, ನಂದಿ ಕೋಲು ಸೇರಿದಂತೆ ವಿವಿಧ ಮಂಗಳ ವಾದ್ಯಗಳ ಕಲಾತ್ಮಕ ಪ್ರದರ್ಶನ ರಥ ಮೆರವಣಿಗೆಯ ವೈಭವವನ್ನು ಇನ್ನಷ್ಟು ಹೆಚ್ಚಿಸಿತು. ಮೆರವಣಿಗೆ ಸಾಗುತ್ತಿದ್ದಂತೆಯೇ ರಸ್ತೆ ಬದಿಗಳಲ್ಲಿ ನಿಂತು ಭಕ್ತರು ದೇವರ ದರ್ಶನ ಪಡೆಯಲು ಮುಗಿಬಿದ್ದರು. ಪಟ್ಟಣದ ಜತೆಗೆ ತಾಲೂಕಿನ ಹಲವಾರು ಗ್ರಾಮಗಳಿಂದ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. ರಥಗಳಿಗೆ ಹೂವು, ಉತ್ತತ್ತಿ, ಬಾಳೆಹಣ್ಣು ಸಮರ್ಪಿಸಿದರು. ದೇವಸ್ಥಾನ, ಹೂವಿನ ಪಲ್ಲಕ್ಕಿಯ ಸಿಂಗಾರವನ್ನು ಪರಶುರಾಮಪ್ಪ ಚಿತ್ರಗಾರ್ ಅವರ ಕುಟುಂಬದವರು ನಡೆಸಿ ಉತ್ಸವಕ್ಕೆ ವಿಶಿಷ್ಟ ಸೊಬಗು ತಂದಿದ್ದರು. ಕಾರ್ಯಕ್ರಮದ ಧಾರ್ಮಿಕ ವಿಧಿ–ವಿಧಾನಗಳು ದೇವಸ್ಥಾನದ ಅರ್ಚಕರಾದ ಕೆ. ಚಂದ್ರಶೇಖರಯ್ಯ ಸ್ವಾಮಿ ಮತ್ತು ಕೆ.ಸಿ. ಸಿದ್ದರಾಮಯ್ಯ ಶಾಸ್ತ್ರಿಗಳು ಪೌರೋಹಿತ್ಯದಲ್ಲಿ ಜರುಗಿದವು. ಈ ಸಂದರ್ಭದಲ್ಲಿ ಶ್ರೀ ಪೇಟೆ ಬಸವೇಶ್ವರ ಮತ್ತು ಕೂಲಿ ಕಟ್ಟೆ ಬಸವೇಶ್ವರ ದೇವಸ್ಥಾನಗಳ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸರ್ವ ಸಮುದಾಯಗಳ ಸದ್ಭಕ್ತರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

10 ಪ್ಯಾರಾದಲ್ಲಿ ಕೇಂದ್ರ ವಿರುದ್ಧ ಟೀಕಾ ಪ್ರಹಾರ
ಬೇಡಿಕೆಗೆ ತಕ್ಕಷ್ಟು ಬರುತ್ತಿಲ್ಲ ಮೈಸೂರು ರೇಷ್ಮೆ ಸೀರೆ