ರಾಮನಗರ: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸೆ.15ರಂದು ಹಮ್ಮಿಕೊಳ್ಳಲಾಗಿರುವ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಬೀದರ್‌ನಿಂದ ಚಾಮರಾಜನಗರದವರೆಗೆ ಮಾನವ ಸರಪಳಿ ನಿರ್ಮಿಸುವ ಕಾರ್ಯಕ್ರಮವನ್ನು ಸಂಬಂಧಿಸಿದ ಎಲ್ಲಾ ಇಲಾಖೆಗಳು ಅಧಿಕಾರಿಗಳು, ಸಿಬ್ಬಂದಿ, ನೋಡಲ್ ಅಧಿಕಾರಿಗಳು ಯಶಸ್ವಿಗೊಳಿಸಲು ಅಗತ್ಯವಿರುವ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ಭಾಗಿಯಾಗುವವರಿಗೆ ಯಾವುದೇ ರೀತಿಯ ಸಂವಹನ ಕೊರತೆ ಎದುರಾಗಬಾರದು. ಪ್ರತಿಯೊಬ್ಬ ಅಧಿಕಾರಿಯೂ ತಮಗೆ ನೀಡಿರುವ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕು. ಈ ಮಾನವ ಸರಪಳಿಗೆ ಮಾನವ ಸಂಪನ್ಮೂಲವನ್ನು ತರಲು ಅಗತ್ಯವಿರುವೆಡೆ ಬಸ್‌ಗಳ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಈ ಸರಪಳಿಯು ಹಾದು ಹೋಗುವ ಮಾರ್ಗಸೂಚಿ ಬಗ್ಗೆ ಹಾಗೂ ಅಲ್ಲಿ ನಿಯೋಜಿಸಿರುವ ಅಧಿಕಾರಿಗಳು, ಸಿಬ್ಬಂದಿ, ಶಿಕ್ಷಕರು, ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಪೂರ್ವ ಮಾಹಿತಿ ನೀಡಬೇಕು. ಅಂದು ಬೆಳಿಗ್ಗೆ 8 ಗಂಟೆಗೆ ಸ್ಥಳದಲ್ಲಿ ಹಾಜರಿರಬೇಕು. ಈ ಕಾರ್ಯಕ್ರಮ ಬೆಳಿಗ್ಗೆ 8.30ರಿಂದ 10.30ರವರೆಗೆ ನಡೆಯಲಿದೆ ಎಂದು ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.ಮುನ್ನೆಚ್ಚರಿಕೆ ಕ್ರಮವಾಗಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ತಿಳಿಸಿದ ಜಿಲ್ಲಾಧಿಕಾರಿಯವರು ಅಂದು ಈ ಮಾರ್ಗದಲ್ಲಿ ವಾಹನ ದಟ್ಟಣೆ ಇರದಂತೆ ಎಚ್ಚರ ವಹಿಸಲಾಗಿದೆ ಎಂದು ಯಶವಂತ್ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಆರ್.ಚಂದ್ರಯ್ಯ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶಿವಕುಮಾರ್, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಮಾನವ ಸರಪಳಿ ನಿರ್ಮಾಣಕ್ಕೆ ಸಹಕರಿಸಿ: ಡಿಸಿ
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದ ಕುರಿತು ಜಿಲ್ಲೆಯ ಸಂಘ-ಸಂಸ್ಥೆಗಳ ಪ್ರಮುಖರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಮಾನವ ಸರಪಳಿ ನಿರ್ಮಾಣದ ಕುರಿತು ನಗರ ಸಭೆ ವಾಹನಗಳ ಮೂಲಕ ಗೀತೆ ಮತ್ತು ಪ್ರಜಾಪ್ರಭುತ್ವದ ಮಹತ್ವ ಸಾರುವ ಹಾಡುಗಳ ಮೂಲಕ ಪ್ರಚಾರ ಮಾಡಲಾಗುವುದು. ನೀಡಿರುವ ಪಾಯಿಂಟ್‌ಗಳಲ್ಲಿ ಸಾರ್ವಜನಿಕರನ್ನು ಸೇರಿಸಿ ಮಾನವ ಸರಪಳಿಯನ್ನು ಅಂದು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿಯವರು ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳ ಪ್ರಮುಖರನ್ನು ಕೋರಿದರು.
ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ, ಅಪರ ಜಿಲ್ಲಾಧಿಕಾರಿ ಆರ್.ಚಂದ್ರಯ್ಯ, ಮುಖಂಡರಾದ ಚಲುವರಾಜು, ವೆಂಕಟೇಶ್, ಹರೀಶ್ ಬಾಲು, ಗೋವಿಂದರಾಜು, ಶ್ರೀನಿವಾಸ್, ಶಿವಣ್ಣ, ನೀಲಿ ರಮೇಶ್, ಗುರುಮೂರ್ತಿ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.
ರಾಮನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ದ ಕುರಿತು ಜಿಲ್ಲೆಯ ಸಂಘ-ಸಂಸ್ಥೆಗಳ ಪ್ರಮುಖರೊಂದಿಗೆ ಜಿಲ್ಲಾಧಿಕಾರಿ ಯಶವಂತ್ ಸಭೆ ನಡೆಸಿದರು.