ಕನ್ನಡಪ್ರಭ ವಾರ್ತೆ ಬೀದರ್
ಸೆಪ್ಟೆಂಬರ್ 3 ರಂದು ಬೀದರ್ ನಲ್ಲಿ ನಡೆಯುವ ಬಸವ ಸಂಸ್ಕೃತಿ ಅಭಿಯಾನವು ಅರ್ಥಪೂರ್ಣ ರೀತಿಯಲ್ಲಿ ನಡೆಯುವಲ್ಲಿ ಎಲ್ಲಾ ಮಠಾಧೀಶರು ಮತ್ತು ಬಸವಭಕ್ತರು ಸಹಕರಿಸಬೇಕೆಂದು ಅನುಭವ ಮಂಟಪ ಬಸವಕಲ್ಯಾಣದ ಅಧ್ಯಕ್ಷರು ಮತ್ತು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರಾದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ನುಡಿದರು.ಬೀದರ್ ನಗರದ ಡಾ. ಪಟ್ಟದೇವರ ಪ್ರಸಾದ ನಿಲಯದಲ್ಲಿ ಭಾನುವಾರ ಮಧ್ಯಾಹ್ನ ಬಸವ ಸಂಸ್ಕೃತಿ ಅಭಿಯಾನದ ಪೂರ್ವಭಾವಿ ಸಭೆಯ ಸಾನಿಧ್ಯ ವಹಿಸಿ ಮಾತನಾಡಿ, 12ನೇ ಶತಮಾನದ ಬಸವಾದಿ ತತ್ವದ ಸಂದೇಶವು ಜಗತ್ತಿಗೆ ತಲುಪಬೇಕಾಗಿದೆ. ಈ ಅಭಿಯಾನವು ಇತಿಹಾಸದಲ್ಲಿ ಎಂದೆಂದಿಗೂ ಆಗದೆ ಇರದೆ ಹಿಂದೆ ಆಗಿಲ್ಲ ಭವಿಷ್ಯದಲ್ಲಿ ಆಗದೆ ಸೆಪ್ಟೆಂಬರ್ ನಲ್ಲಿ ನಡೆಯುವ ಬಸವ ಸಂಸ್ಕೃತಿ ಅಭಿಯಾನವು ಐತಿಹಾಸಿಕವಾಗಿ ನಡೆಯಬೇಕಾಗಿದೆ ಎಂದರು.
ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವುದರ ಜೊತೆಗೆ ಬಸವಭಕ್ತರು ಸಹಾಯ, ಸಹಕಾರ ತನು. ಮನ. ಧನದಿಂದ ಈಗಾಗಲೇ ಸಹಾಯ ಮತ್ತು ಸಹಕಾರ ಮಾಡಿರುತ್ತಾರೆ ಎಂದರು.ಸ್ವಾಗತ ಸಮಿತಿ ಅಧ್ಯಕ್ಷರಾಗಿ ಧನ್ನೂರ ಆಯ್ಕೆ: ಇದೇ ಸಂದರ್ಭದಲ್ಲಿ ಬಸವ ಸಂಸ್ಕೃತಿ ಅಭಿಯಾನದ ಸ್ವಾಗತ ಸಮಿತಿಯ ಅಧ್ಯಕ್ಷರನ್ನಾಗಿ ಅಪ್ಪಟ ಬಸವ ತತ್ವ ನಿಷ್ಠರಾದ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷರಾದ ಬಸವರಾಜ ಧನ್ನೂರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಬಸವರಾಜ ಧನ್ನೂರ ಮಾತನಾಡಿ, ಬಸವ ಸಂಸ್ಕೃತಿ ಅಭಿಯಾನವು ವಿಶಿಷ್ಟ ರೀತಿಯಲ್ಲಿ ನಡೆಯಬೇಕಾಗಿದೆ. ನಮ್ಮ ಸಂಸ್ಕೃತಿ ಪ್ರತಿಬಿಂಬಿಸುವ ಶರಣಿಯರು ಇಲ್ಕಳ ಸೀರೆಯನ್ನು ಧರಿಸಬೇಕು ಮತ್ತು ಶರಣರು ಧೋತರ ಧರಿಸಿಕೊಳ್ಳಬೇಕು. ಲಿಂಗಾಯತ ಧರ್ಮ ತತ್ವವನ್ನು ಪ್ರತಿಬಿಂಬಿಸುವ ವಿಭೂತಿ ರುದ್ರಾಕ್ಷಿ ಇಷ್ಟ ಲಿಂಗದ ಪ್ರತಿರೂಪವು ಅಭಿಯಾನದಲ್ಲಿ ಆಕರ್ಷಕವಾಗಿರಬೇಕು.12ನೇ ಶತಮಾನದ ಬಸವಾದಿ ಶರಣರ ಬಹು ಮೌಲ್ಯ ತತ್ವಗಳನ್ನು ಈ ಸಮಾವೇಶದಿಂದ ಅರಿತುಕೊಳ್ಳಬಹುದು ಅದರಂತೆ ಜಿಲ್ಲೆಯ ಎಲ್ಲಾ ಹಳ್ಳಿಗಳಿಂದ ಬಸವಾದಿ ಭಕ್ತರು ಸಮಾವೇಶಕ್ಕೆ ಆಗಮಿಸಬೇಕಾಗಿ ಕೋರಿದರು.
ಹುಲಸೂರಿನ ಡಾ. ಶಿವಾನಂದ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡಿ, ಬಸವ ಸಂಸ್ಕೃತಿ ಅಭಿಯಾನವು ಯಶಸ್ವಿಯಾಗಬೇಕಾದರೆ ಮಠಾಧೀಶರು ನಾವು ಒಂದು ತಿಂಗಳವರೆಗೆ ಸಕ್ರಿಯವಾಗಿ ಅಭಿಯಾನದಲ್ಲಿ ಭಾಗವಹಿಸಿ ಬಸವ ತತ್ವವನ್ನು ಮನೆ ಮನೆಗೆ ಮುಟ್ಟಿಸಬೇಕಾಗಿದೆ ಎಂದರು.ಗುರುಬಸವ ಪಟ್ಟದೇವರು ನೇತೃತ್ವ ವಹಿಸಿ ಮಾತನಾಡಿ, ಬಸವ ಸಂಸ್ಕೃತಿ ಅಭಿಯಾನವು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಒಳ್ಳೆಯ ರೀತಿಯ ಸಿದ್ಧತೆ ಮಾಡುತ್ತಿದ್ದಾರೆ ಸುಮಾರು 300ಕ್ಕೂ ಹೆಚ್ಚು ಬಸವ ತತ್ವದ ಮಠಾಧೀಶರು ಬಸವ ಸಂಸ್ಕೃತಿ ಅಭಿಯಾನದಲ್ಲಿ ಭಾಗವಹಿಸುವವರಿದ್ದಾರೆ.
ಈ ಅಭಿಯಾನದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಸಂವಾದ ಕಾರ್ಯಕ್ರಮವು ನಗರದ ಚನ್ನಬಸವ ಪಟ್ಟದೇವರ ರಂಗಮಂದಿರದಲ್ಲಿ ನಡೆಸಲಾಗುವುದು. ಅದೇ ರೀತಿ ಬಸವ ಸಂಸ್ಕೃತಿ ಅಭಿಯಾನದ ಬಹಿರಂಗ ಸಭೆಯು ಭೂಮರೆಡ್ಡಿ ಕಾಲೇಜು ಬೀದರಿನಲ್ಲಿ ನಡೆಸಲಾಗುವುದು ಮತ್ತು ಬಸವೇಶ್ವರ ವೃತ್ತದಿಂದ ಜಾಥಾ ಪ್ರಾರಂಭವಾಗಿ ಭೂಮರೆಡ್ಡಿ ಕಾಲೇಜಿನಲ್ಲಿ ಸಮಾವೇಶವಾಗಲಿದೆ ಎಂದು ಪೂಜ್ಯರು ಮಾಹಿತಿ ನೀಡಿದರು.ಪೂಜ್ಯರಾದ ಪ್ರಭುದೇವರು ಲಿಂಗಾಯತ ಮಹಾಮಠ ಬೀದರ್ ಮತ್ತು ಬಸವಕಲ್ಯಾಣದ ಪೂಜ್ಯರಾದ ಸಿದ್ದರಾಮೇಶ್ವರ ಸ್ವಾಮಿಗಳು, ಬಸವಗಿರಿಯ ಅಕ್ಕ ಡಾ. ಗಂಗಾಂಬಿಕೆ ಮಾತನಾಡಿದರು.
ಬಸವ ಪರ ಸಂಘಟನೆಯ ಪ್ರಮುಖರಾದ ಜಿಲ್ಲಾ ಕಸಾಪ ಅಧ್ಯಕ್ಷರಾದ ಸುರೇಶ್ ಚನ್ನಶೆಟ್ಟಿ, ರಾಜೇಂದ್ರ ಕುಮಾರ್ ಗಂದಗೆ, ಕುಶಾಲರಾವ್ ಪಾಟೀಲ ಖಾಜಾಪುರ್, ಚಂದ್ರಕಾಂತ ಮಿರ್ಚೆ, ಸಂಗ್ರಾಮ ಎಂಗಳೆ, ಗುರುನಾಥ ಬಿರಾದರ, ಶ್ರೀಕಾಂತ್ ಬೋರಗಿ ಸ್ವಾಮಿ, ಶ್ಯಾಮರಾವ್ ಮ್ಯಾಕ್ರಿ, ಧೂಳಯ್ಯ ಸ್ವಾಮಿ, ಉಷಾ ಮಿರ್ಚೆ, ಜಯದೇವಿ ಯದ್ಲಾಪುರ. ಸುವರ್ಣ ಧನ್ನೂರ್, ನಿರ್ಮಲ ಮಸೂದಿ ಹಾಗೂ ಡಾ. ಚನ್ನಬಸವ ಪಟ್ಟದೇವರ ಪ್ರಸಾದ ನಿಲಯದ ವಿದ್ಯಾರ್ಥಿಗಳು ಹಾಗೂ ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಮಕ್ಕಳು ಉಪಸ್ಥಿತರಿದ್ದರು.ಉಮಕಾಂತ ಮೀಸೆ ಸ್ವಾಗತಿಸಿದರು. ಯೋಗೇಂದ್ರ ಯದ್ಲಾಪುರೆ ನಿರೂಪಿಸಿದರು.