ಗುಣವಂತೆಯ ಸರ್ಕಾರಿ ಶಾಲೆಯಲ್ಲಿ ನಿರ್ಮಿಸಿದ ಕೊಠಡಿ ಉದ್ಘಾಟನೆ
ಮಕ್ಕಳನ್ನು ಉತ್ತಮ ಪ್ರಜೆಯನ್ನಾಗಿ ಮಾಡುವಲ್ಲಿ ಶಾಲೆಗಳ ಪಾತ್ರ ದೊಡ್ಡದು. ಕುಂದು ಕೊರತೆಯಿರುವ ಸರ್ಕಾರಿ ಶಾಲೆಯನ್ನು ಬೆಳೆಸುವ ಕೆಲಸಕ್ಕೆ ಜನಸಾಮಾನ್ಯರು ಕೈಜೋಡಿಸಬೇಕು ಎಂದು ಮಾಜಿ ಶಾಸಕ ಸುನೀಲ ನಾಯ್ಕ ಹೇಳಿದರು.
ತಾಲೂಕಿನ ಗುಣವಂತೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾನಿಗಳ ಸಹಕಾರದೊಂದಿಗೆ ನಿರ್ಮಿಸಿದ ಸುಸಜ್ಜಿತ ಕೊಠಡಿಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಮಹತ್ವ ನೀಡಬೇಕು. ಗುಣವಂತೆಯ ಶಾಲೆಗೆ ಎಸ್‌ಡಿಎಂಸಿ ಹಾಗೂ ಊರ ನಾಗರಿಕರ ಹಾಗೂ ದಾನಿಗಳು ಸೇರಿ ಸುಂದರ ರೂಪವನ್ನು ನೀಡಿದ್ದಾರೆ. ಶಾಲೆಯ ಅಭಿವೃದ್ಧಿಗೆ ನಿರಂತರವಾಗಿ ಸಹಕಾರ ನೀಡುತ್ತೇನೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕಿ ಶಾರದಾ ಶೆಟ್ಟಿ ಮಾತನಾಡಿ, ಮಕ್ಕಳು ಉತ್ತಮ ನಾಗರಿಕರಾಗಲು ಶಿಕ್ಷಕರ ಪಾತ್ರ ದೊಡ್ಡದು. ನಮ್ಮ ಶಾಲೆ ನಮ್ಮ ಹೆಮ್ಮೆ ಎನ್ನುವ ಪರಿಕಲ್ಪನೆ ಇದ್ದಾಗ ಅಭಿವೃದ್ಧಿ ಹೊಂದಬಹುದು ಎಂಬುದಕ್ಕೆ ಇಲ್ಲಿನ ಶಾಲೆಯು ನಿದರ್ಶನವಾಗಿದೆ. ಎಸ್‌ಡಿಎಂಸಿಯ ಕಾಳಜಿಯಿಂದ ಉತ್ತಮ ಕಾರ್ಯ ನಡೆದಿದೆ ಎಂದರು.
ಉದ್ಯಮಿ ಮಾಸ್ತಪ್ಪ ನಾಯ್ಕ, ರಾಜೇಂದ್ರ ಆಚಾರ್ಯ, ಡಯಟ್ ಪ್ರಾಚಾರ್ಯ ಎನ್.ಆರ್. ಹೆಗಡೆ, ಕಸಾಪ ಅಧ್ಯಕ್ಷ ಎಸ್.ಎಚ್. ಗೌಡ, ಎಂ.ವಿ. ಹೆಗಡೆ, ಶ್ರೀಪತಿ ದೇವಾಡಿಗ, ಗ್ರಾಪಂ. ಸದಸ್ಯರು ಇದ್ದರು.ಶಾಲೆಗೆ ಸ್ಥಳ ದಾನ ನೀಡಿದ ಕುಟುಂಬದ ನಾಗವೇಣಿ ರಾಮ ಹೆಗಡೆ, ಸಹಕಾರ ನೀಡಿದ ಮಾಜಿ ಶಾಸಕ ಸುನೀಲ ನಾಯ್ಕ ಮತ್ತು ದಾನಿಗಳನ್ನು ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ದಾಮೋದರ ದೇವಾಡಿಗ, ಉಪಾಧ್ಯಕ್ಷೆ ತನುಜಾ ಗೌಡ ಹಾಗೂ ಸದಸ್ಯರನ್ನು ಸನ್ಮಾನಿಸಲಾಯಿತು.
ಶಿಕ್ಷಕರಾದ ಟ್ರೀಜಾ ರೋಡ್ರಿಗಿಸ್, ವಿಮಲಾ ಅಂಬಿಗ, ವಿಠ್ಠಲ ಭಟ್ಟ, ವಿದ್ಯಾ ನಾಯ್ಕ, ಮಹಾದೇವಿ ಗೌಡ, ಗಾಯತ್ರಿ ನಾಯ್ಕ, ಚೇತನಾ ಗೌಡ, ಅಜಯ ಅಡಿಗುಂಡಿ ಅವರನ್ನು ಗೌರವಿಸಲಾಯಿತು. ವಿಠ್ಠಲ ಭಟ್ಟ ನಿರ್ವಹಿಸಿದರು.ಪುಸ್ತಕ ಬಿಡುಗಡೆ:
ಶಿಕ್ಷಕಿ ಮಹಾದೇವಿ ಗೌಡ ಅವರ ಚಿನಕುರಳಿ ಕವನ ಸಂಕಲನವನ್ನು ಡಯಟ್ ಸಿಇಒ ಶುಭಾ ನಾಯಕ ಬಿಡುಗಡೆಗೊಳಿಸಿದರು. ಅಂಕಣಕಾರ ನಾರಾಯಣ ಯಾಜಿ ಸಾಲೇಬೈಲು ಪುಸ್ತಕದ ಕುರಿತು ಮಾತನಾಡಿದರು. ಎಂ.ಎಸ್. ಹೆಗಡೆ ನಿರ್ವಹಿಸಿದರು.