ಯುವತಿ ಸಾವು ಪ್ರಕರಣ: ಮರು ಮರಣೋತ್ತರ ಪರೀಕ್ಷೆ ಆಗ್ರಹ, ಇಂದು ಪ್ರತಿಭಟನೆ

KannadaprabhaNewsNetwork |  
Published : Jan 20, 2026, 02:45 AM IST
 | Kannada Prabha

ಸಾರಾಂಶ

ಮೃತ ಯುವತಿಯ ಕುಟುಂಬಸ್ಥರು ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಕಾರವಾರ

ತಾಲೂಕಿನ ಕದ್ರಾ ಗ್ರಾಮದ ಯುವತಿ ರಿಶೇಲ್ ಕಿಸ್ತೋದ್ ಅವರ ಆತ್ಮಹತ್ಯೆ ಪ್ರಕರಣವು ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಯುವತಿಯ ಸಾವಿನಲ್ಲಿ ಬಲವಾದ ಸಂಶಯವಿದೆ. ಈ ಹಿನ್ನೆಲೆ ಮೃತದೇಹದ ಮರು ಮರಣೋತ್ತರ ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿ ಮೃತ ಯುವತಿಯ ಕುಟುಂಬಸ್ಥರು ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಮೃತ ಯುವತಿಯ ಮರಣೋತ್ತರ ಪರೀಕ್ಷೆಯನ್ನು ಈಗಾಗಲೇ ನಡೆಸಲಾಗಿದ್ದು, ಜನವರಿ 10 ರಂದು ಕದ್ರಾದ ಸೆಂಟ್ ಆಂಥೋನಿ ದೇವಾಲಯದ ಎದುರಿನ ಸ್ಮಶಾನದಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಗಿತ್ತು. ಆದರೆ, ಮೃತದೇಹದ ಮೇಲೆ ಕಚ್ಚಿದ ಗಾಯದ ಗುರುತು ಹಾಗೂ ರಕ್ತದ ಕಲೆಗಳು ಕಂಡುಬಂದಿರುವುದು ಕುಟುಂಬಸ್ಥರಲ್ಲಿ ಆತಂಕ ಮತ್ತು ಸಂಶಯವನ್ನು ಮೂಡಿಸಿದೆ. ಈ ಸಾಕ್ಷ್ಯಗಳು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ, ಸತ್ಯಾಸತ್ಯತೆಯನ್ನು ಅರಿಯಲು ಮರು ಮರಣೋತ್ತರ ಪರೀಕ್ಷೆ ನಡೆಸುವುದು ಅತ್ಯಗತ್ಯ ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಮೃತ ಯುವತಿಯ ಮೇಲೆ ದೈಹಿಕ ಹಾಗೂ ಲೈಂಗಿಕ ದೌರ್ಜನ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೇ, ಈಗಾಗಲೇ ನಡೆದ ಮರಣೋತ್ತರ ಪರೀಕ್ಷೆಯ ಪ್ರಕ್ರಿಯೆಯ ಬಗ್ಗೆಯೂ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ನಿಯಮಗಳ ಪ್ರಕಾರ ರಾತ್ರಿ ವೇಳೆ ಮರಣೋತ್ತರ ಪರೀಕ್ಷೆ ನಡೆಸುವಂತಿಲ್ಲ, ಆದರೆ ಇಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತರದೆ ರಾತ್ರಿ ವೇಳೆ ಪರೀಕ್ಷೆ ನಡೆಸಿರುವುದು ಕಾನೂನು ಬಾಹೀರವಾಗಿದೆ ಎಂದು ಆರೋಪಿಸಿದ್ದಾರೆ.

ಈ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದಡಿ ಈಗಾಗಲೇ ಪಿಎಸ್‌ಐ ಓರ್ವರು ಅಮಾನತುಗೊಂಡಿದ್ದಾರೆ. ಆದರೆ ವೈದ್ಯರ ಭಾಗದಿಂದಲೂ ಲೋಪಗಳಾಗಿದ್ದು, ಈ ಬಗ್ಗೆಯೂ ಸೂಕ್ತ ತನಿಖೆಯಾಗಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಈ ಹಿನ್ನೆಲೆ ನ್ಯಾಯಕ್ಕಾಗಿ ಆಗ್ರಹಿಸಿ ಜ.20ರಂದು ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಮನವಿ ಸಲ್ಲಿಕೆ ಸಂದರ್ಭದಲ್ಲಿ ಮೃತ ಯುವತಿಯ ತಾಯಿ ರೀನಾ ಕಿಸ್ತೋದ ಡಿಸೋಜಾ, ಲಿಯೋ ಲೂಯಿಸ್, ಜಾರ್ಜ್ ಫರ್ನಾಂಡಿಸ್, ಕ್ಲೆಮೆಂಟ್ ಗುಡಿನೋ, ಸಿರಿಲ್ ಗೌಸ್ ಲ್ವಸ್, ಜಾನಿ ಲೋಪ್ಸ್, ಅಲ್ವಿನ್ ಫರ್ನಾಂಡಿಸ್, ವಿಲ್ಸನ್ ಫರ್ನಾಡೀಸ್ ಹಾಗೂ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಶಾಲೆ ಬೆಳೆಸುವ ಕೆಲಸಕ್ಕೆ ಕೈಜೋಡಿಸಿ: ಸುನೀಲ ನಾಯ್ಕ
ಯುವಜನಾಂಗ ವೇಮನರ ಚಿಂತನೆ ಅರಿತುಕೊಳ್ಳಲಿ: ತಹಸೀಲ್ದಾರ್ ರಾಘವೇಂದ್ರ ರಾವ್