ನರಗುಂದ: ಕನಸು ಕಟ್ಟಿಕೊಂಡು ಬಂದ ಪತ್ನಿಗೆ ನಿರಾಸೆ ಮಾಡಬೇಡಿ. ನಿಮ್ಮ ಬಗ್ಗೆ ಏನು ಗೊತ್ತಿಲ್ಲದ ಹೆಣ್ಣುಮಗಳು ನಿಮ್ಮನ್ನೇ ನಂಬಿ ಬಂದಿದ್ದಾಳೆ. ಈಗ ಎಡವಿದಂತೆ ಮತ್ತೆಂದೂ ಜೀವನದಲ್ಲಿ ಎಡವಿ ಬೀಳಬೇಡಿ. ಮನುಷ್ಯತ್ವದಿಂದ ರಾಜಮಾರ್ಗದಲ್ಲಿ ಜೀವನ ಸಾಗಿಸಿರೆಂದು ಪತ್ರಿವನಮಠದ ಗುರು ಸಿದ್ಧವೀರ ಶಿವಯೋಗಿ ಶಿವಾಚಾರ್ಯ ಶ್ರೀಗಳು ತಿಳಿಸಿದರು.
ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಮದ್ಯವರ್ಜನ ಶಿಬಿರಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.ಬೆಳ್ತಂಗಡಿಯ ನಟರಾಜ ಮಾತನಾಡಿ, ಇಲ್ಲಿಯವರೆಗೆ ನಡೆದ 2059 ಶಿಬಿರಗಳಲ್ಲಿ 1,36 ಲಕ್ಷಕ್ಕೂ ಹೆಚ್ಚು ಮದ್ಯವ್ಯಸನಿಗಳು ಶಿಕ್ಷಣ ಪಡೆದಿದ್ದಾರೆ. ಕುಡಿತದಿಂದ ಬೀದಿಗೆ ಬಂದಿದ್ದ ವ್ಯಕ್ತಿ ಶಿಕ್ಷಣ ಪಡೆದ ನಂತರ ಸಮಾಜದಲ್ಲಿ ಗೌರವದಿಂದ ಜೀವನ ಮಾಡುತ್ತಿದ್ದಾನೆ. ಧೈರ್ಯವಂತರಿಗೆ ಮಾತ್ರ ಸಮಾಜದಲ್ಲಿ ಜೀವನ ನಡೆಸಲು ಸಾಧ್ಯ ಎಂದರು.
ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಂಜುನಾಥ ಮೆಣಸಗಿ ಮಾತನಾಡಿ, ಮದ್ಯವರ್ಜನ ಶಿಬಿರದಲ್ಲಿ ಪಡೆದ ಶಿಕ್ಷಣ ವ್ಯರ್ಥ ಆಗಬಾರದು. ಇವತ್ತಿನಿಂದ ನವಜೀವನಕ್ಕೆ ಕಾಲಿಡುತ್ತಿರುವ ತಮ್ಮ ಬದುಕು ಮತ್ತೊಬ್ಬರು ಬೊಟ್ಟು ಮಾಡದಂತಿರಲಿ. ತಂದೆ- ತಾಯಿ, ಹೆಂಡತಿ ಮಕ್ಕಳಿಗಿಂತ ಮದ್ಯ ಮುಖ್ಯ ಅಲ್ಲ ಎಂಬುದನ್ನು ಅರಿತು ಜೀವನ ಸಾಗಿಸಬೇಕು ಎಂದರು.ಕಾಂಗ್ರೆಸ್ ಮಾಧ್ಯಮ ವಕ್ತಾರ ಡಾ. ಸಂಗಮೇಶ ಕೊಳ್ಳಿ, ನಾಗೇಶ ವೈ, ಕೇಶವ ದೇವಾಂಗ, ಕೊಪ್ಪಳ ನಿರ್ದೇಶಕ ಚಂದ್ರಶೇಖರ ಜೆ., ಶಿವಾನಂದ ಬೆಂತೂರು, ಗೌರವಾಧ್ಯಕ್ಷ ರಾಜು ಕಲಾಲ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಿಬಿರದ ಕೊನೆಯ ದಿನ 93 ಶಿಬಿರಾರ್ಥಿಗಳನ್ನು ಮತ್ತು ಅವರ ಹೆಂಡತಿಯೊಂದಿಗೆ ಮರುಮದುವೆ ಮಾಡಿಸಿ, ನವಜೀವನಕ್ಕೆ ಕಾಲಿಡಿಸಲಾಯಿತು. ಮದುಮಕ್ಕಳಂತೆ, ನವಜೋಡಿಗಳಂತೆ ವೇದಿಕೆ ಮುಂಭಾಗದಲ್ಲಿ ಆಸೀನರಾಗಿದ್ದರು. ಈ ಸಂದರ್ಭದಲ್ಲಿ ಯಲ್ಲಪ್ಪಗೌಡ್ರ ನಾಯ್ಕರ, ಶಿವಾನಂದ ಬೆಂತೂರ, ಎಚ್.ಬಿ. ಅಸೂಟಿ, ನೀಲಪ್ಪ ಗುಡದನ್ನವರ, ಉಮಾ ದ್ಯಾವನೂರ, ಜೆ. ಚಂದ್ರಶೇಖರ, ವಿ.ಎನ್. ಕೊಳ್ಳಿಯವರ, ಚನ್ನಪ್ಪ ಕಂಠಿ, ಯೋಜನಾಧಿಕಾರಿ ಮಾಲತಿ ದಿನೇಶ, ಶಂಕರಗೌಡ ಪಾಟೀಲ, ನವಜೀವನ ಸಮಿತಿ ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯವರು ಇದ್ದರು. ರಾಜೇಸಾಬ ತಹಸೀಲ್ದಾರ ಸ್ವಾಗತಿಸಿದರು. ಆನಂದ ಗೌಳಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.