ಕನಕಗಿರಿ:
ಭಾರತವನ್ನು ಏಡ್ಸ್ ಮುಕ್ತವನ್ನಾಗಿಸಲು ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಶಶಿಧರ ಹೇಳಿದರು.ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಏಡ್ಸ್ ಜಾಗೃತಿ ಮಾಸಾಚರಣೆಯಲ್ಲಿ ಮಂಗಳವಾರ ಮಾತನಾಡಿದ ಅವರು, ಜಿಲ್ಲೆಯ ವಿವಿಧ ತಾಲೂಕು, ಗ್ರಾಮಗಳಲ್ಲಿ ಏಡ್ಸ್ ಜಾಗೃತಿ, ಗ್ರಾಮಸಭೆ, ಭಿತ್ತಿಪತ್ರ, ರಸಪ್ರಶ್ನೆ ಹಾಗೂ ಜಾನಪದ ಕಲಾತಂಡಗಳಿಂದ ಸಾರ್ವಜನಿಕರಿಗೆ ಎಚ್‌ಐವಿ ಅರಿವು ಮೂಡಿಸಲಾಗಿದೆ. ಯುವ ಜನತೆ ಸಾಮಾಜಿಕ ಮಾಧ್ಯಮದ ಪ್ರಭಾವದಿಂದಾಗಿ ದುಶ್ಚಟಕ್ಕೆ ಬಲಿಯಾಗದೆ ಜಾಗೃತರಾಗಬೇಕು. ಒಳ್ಳೆಯ ನಡವಳಿಕೆ ರೂಢಿಸಿಕೊಂಡು ದೇಶ ನಿರ್ಮಾಣದಲ್ಲಿ ಮಹತ್ತರ ಪಾತ್ರ ನಿರ್ವಹಿಸಬೇಕೆಂದು ಕರೆ ನೀಡಿದರು.
ಪಪಂ ಮುಖ್ಯಾಧಿಕಾರಿ ಲಕ್ಷ್ಮಣ್ಣ ಕಟ್ಟಿಮನಿ ಮಾತನಾಡಿ, ಯುವಕರು ತಮ್ಮನ್ನು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಮಾಜದ ಒಳತಿಗೆ ಶ್ರಮಿಸಬೇಕು. ಸೇವಾ ಮನೋಭಾವದ ಮೂಲಕ ಸಮಾಜ ಹಾಗೂ ದೇಶ ಕಟ್ಟುವ ಕಾರ್ಯ ಮಾಡುವಂತೆ ತಿಳಿಸಿದರು. ಪ್ರಾಚಾರ್ಯ ಅಮರೇಶ ದೇವರಾಳ ಅಧ್ಯಕ್ಷತೆ ವಹಿಸಿದ್ದರು. ಆ. 11ರಂದು ಕೊಪ್ಪಳದಲ್ಲಿ ನಡೆದ ಜಿಲ್ಲಾಮಟ್ಟದ ಭಿತ್ತಿಚಿತ್ರ ಸ್ಪರ್ಧೆಯಲ್ಲಿ ಗವಿಸಿದ್ದೇಶ್ವರ ಪದವಿ ಕಾಲೇಜಿನ ಅಕ್ಷತಾ ನಾಗದೇವಿ, ಗಂಗಾವತಿಯ ಟಿಎಂಎಇಎಸ್ ಶಿಕ್ಷಣ ಮಹಾವಿದ್ಯಾಲಯದ ಅಂಜಲಿ, ಗವಿಸಿದ್ದೇಶ್ವರ ಪದವಿ ಕಾಲೇಜಿನ ವೈಭವಿ ತೃತೀಯ ಪಡೆದ ಹಿನ್ನೆಲೆಯಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದಿಂದ ಸನ್ಮಾನಿಸಲಾಯಿತು. ಈ ವೇಳೆ ಪಪಂ ಅಧ್ಯಕ್ಷೆ ಹುಸೇನಬೀ ಚಳ್ಳಮರದ, ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ತಾಪಂ ಯೋಜನಾಧಿಕಾರಿ ಹುಲಗಪ್ಪ, ಉಪ ತಹಸೀಲ್ದಾರ್ ಅನಿತಾ ಇಂಡಿ, ಎನ್ಎಸ್ಎಸ್ ಅಧಿಕಾರಿ ಶಿವಪುತ್ರಪ್ಪ ಗಳಪೂಜೆ, ದಂತ ಆರೋಗ್ಯಾಧಿಕಾರಿ ಡಾ. ಬಿನಾದೇವಿ, ಜಿಲ್ಲಾ ಮೇಲ್ವಿಚಾರಕ ಮಾಲತೇಶ ಸಜ್ಜನ, ಸಿಬ್ಬಂದಿಗಳಾದ ರಮೇಶ, ಅಮರೇಶ, ಸಿದ್ದರಾಮಪ್ಪ, ಅಮೀನಸಾಬ್, ಮೆಹಬೂಬ್, ನಾಗರಾಜ, ಉಪನ್ಯಾಸಕರು ಇತರರಿದ್ದರು.