ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಮಾನವ ಕಳ್ಳ ಸಾಗಾಣಿಕೆಯು ಸಾಮಾಜಿಕ ಪಿಡುಗು. ಈ ಅನಿಷ್ಟವನ್ನು ನಿರ್ಮೂಲನೆ ಮಾಡಲು ಸಮಾಜದ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಜೆಎಂಎಫ್‌ಸಿ ಸಿವಿಲ್ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶ ಸುಧೀರ್ ಕರೆ ನೀಡಿದರು.ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಸಾರಂಗಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾನವ ಕಳ್ಳ ಸಾಗಾಣಿಕೆ ದಿನ ಹಾಗೂ ಮಾದಕ ದ್ರವ್ಯ ವಿರೋಧಿ ದಿನವನ್ನು ಉದ್ಘಾಟಿಸಿ ಮಾತನಾಡಿದರು.
ಮಾನವ ಕಳ್ಳ ಸಾಗಾಣಿಕೆ ವಿಶ್ವಾದ್ಯಂತ ವ್ಯಾಪಿಸಿದ್ದು, ಮಕ್ಕಳು, ಹೆಂಗಸರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ವಯಸ್ಸಿನ ಮಾನವ ಜೀವಿಗಳನ್ನು ಅಪಹರಣ ಮಾಡಿ ತಮ್ಮ ಸ್ವೇಚ್ಛಾಚಾರ, ಸಮಾಜಘಾತುಕ ಕೃತ್ಯಗಳು ಹಾಗೂ ಭಿಕ್ಷಾಟನೆ ಸೇರಿ ಕಾನೂನು ಬಾಹಿರ ಕೃತ್ಯಗಳಿಗೆ ಬಳಸಿಕೊಳ್ಳುವ ಜಾಲವು ಪ್ರಪಂಚದಲ್ಲಿ ಸದ್ದಿಲ್ಲದೇ ಕೆಲಸ ಮಾಡುತ್ತಿದೆ ಎಂದರು.ಶಾಲಾ ಮಕ್ಕಳು ಮಹಿಳೆಯರು ಹಾಗೂ ಯುವ ಜನರು ಜಾಗೃತರಾಗಿ ಸಮಾಜದಲ್ಲಿ ನಡೆಯುತ್ತಿರುವ ಮಾನವ ಕಳ್ಳ ಸಾಗಣೆ ಜಾಲವನ್ನು ತಡೆದು ಆರೋಗ್ಯವಂತ, ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಅಪರ ಸಿವಿಲ್ ನ್ಯಾಯಾಧೀಶರಾದ ದೇವರಾಜು ಮಾತನಾಡಿ, ಮಾನವ ಕಳ್ಳ ಸಾಗಾಣಿಕೆ ಸೇರಿದಂತೆ ಮಾದಕ ವಸ್ತುಗಳ ಸೇವನೆಯು ಮಾನವನ ನೆಮ್ಮದಿಯನ್ನು ಹಾಳು ಮಾಡುತ್ತಿದೆ. ಮಾದಕ ವಸ್ತುಗಳ ಸೇವನೆ ನಮ್ಮ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರುವ ಜೊತೆಗೆ ಮಾದಕ ದ್ರವ್ಯದ ಮತ್ತಿನಿಂದ ಕಾನೂನು ಬಾಹಿರ ಕೃತ್ಯಗಳನ್ನು ನಡೆಸುವ ಸಾಧ್ಯತೆಗಳು ಹೆಚ್ಚಾಗಿದೆ. ಇದರ ಬಗ್ಗೆ ಎಚ್ಚರ ವಹಿಸಬೇಕು ಎಂದು ಮನವಿ ಮಾಡಿದರು.ಅಪರ ಸಿವಿಲ್ ನ್ಯಾಯಾಧೀಶರಾದ ಕೆ.ವಿ.ಅರ್ಪಿತ ಮಾತನಾಡಿ, ಶಾಲಾ ಮಕ್ಕಳು ಸೇರಿದಂತೆ ಪುಟಾಣಿ ಮಕ್ಕಳು ಅಪರಿಚಿತರು ನೀಡುವ ಯಾವುದೇ ಸಿಹಿ ತಿಂಡಿಗಳು ಸೇರಿದಂತೆ ವಸ್ತುಗಳನ್ನು ಪಡೆದುಕೊಳ್ಳಬಾರದು. ಅಪರಿಚಿತ ವ್ಯಕ್ತಿಗಳು ಕಂಡು ಬಂದರೆ ಕೂಡಲೇ ತಮ್ಮ ಪೋಷಕರಿಗೆ ಇಲ್ಲವೇ ತಮ್ಮ ಶಿಕ್ಷಕರಿಗೆ ತಿಳಿಸುವ ಮೂಲಕ ಸಮಾಜಘಾತುಕ ಶಕ್ತಿಗಳನ್ನು ಬಗ್ಗು ಪಡೆಯುವ ನಿಟ್ಟಿನಲ್ಲಿ ಸಹಕಾರ ನೀಡಬೇಕು ಎಂದರು.
ಆರಕ್ಷಕ ನಿರೀಕ್ಷಕಿ ಸುಮಾರಾಣಿ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಸಂಸ್ಕೃತಿಯಿಂದ ಆದಷ್ಟು ದೂರವಿರಬೇಕು. ಮೊಬೈಲ್ ಮೂಲಕ ಬಹುತೇಕರು ಸುಲಭವಾಗಿ ಮಾನವ ಕಳ್ಳ ಸಾಗಾಣಿಕಾ ಜಾಲಕ್ಕೆ ಸಿಲುಕುತ್ತಿದ್ದಾರೆ. ಆದ್ದರಿಂದ ನಾವು ಸದಾಕಾಲ ಜಾಗೃತರಾಗಿರಬೇಕು ಎಂದರು.ಮಾದಕ ದ್ರವ್ಯ ವಸ್ತುಗಳು ಸೇರಿದಂತೆ ತಂಬಾಕು ಉತ್ಪನ್ನಗಳನ್ನು ಬಳಸುವ ವಿರುದ್ಧ ಆಗುವ ತೊಂದರೆಗಳ ಬಗ್ಗೆ ಶ್ರೀಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಮೂಲಕ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೆಗೌಡ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಎಸ್.ಜೆ ಮಂಜೇಗೌಡ, ಜಂಟಿ ಕಾರ್ಯದರ್ಶಿ ದೊಡ್ಡಯ್ಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿದ್ಯಾವತಿ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲೆ ಲಲಿತ, ಸಹಾಯಕ ಸರ್ಕಾರಿ ಅಭಿಯೋಜಕರಾದ ವೀಣಾಶ್ರೀ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶೀಳನೆರೆ ಸತೀಶ್, ಧಮೇಂದ್ರ, ಉಪಪ್ರಾಂಶುಪಾಲ ಡಾ.ರಾಮನಾಯಕ್ ಇದ್ದರು.