ಕನ್ನಡಪ್ರಭ ವಾರ್ತೆ ಉಡುಪಿಯಕ್ಷಗಾನ ಕಲೆಗೆ ಅದ್ಭುತ ಶಕ್ತಿಯಿದೆ. ಅದು ಅಬಾಲವೃದ್ಧರನ್ನು ಕುಣಿಸುವ ಶಕ್ತಿಯನ್ನು ಹೊಂದಿದೆ. ಯಕ್ಷಗಾನವನ್ನು ಕಲಿತವರು ಆರೋಗ್ಯ, ಜೀವನೋತ್ಸಾಹದಿಂದ ಬದುಕುತ್ತಾರೆ. ಆದ್ದರಿಂದ ಯಕ್ಷಗಾನ ಅಕಾಡೆಮಿಯ ಮೂಲಕ ಅಗತ್ಯ ಸೌಲಭ್ಯಗಳನ್ನು ಕಲಾವಿದರನ್ನು ಮುಟ್ಟಿಸುವ ಕೆಲಸವಾಗುತ್ತಿದೆ. ಆದರೆ ಯಕ್ಷಗಾನ ಉಳಿಸುವುದು ಕೇವಲ ಅಕಾಡೆಮಿಯ ಕೆಲಸವಲ್ಲ, ಯಕ್ಷಗಾನದಲ್ಲಿ ತೊಡಗಿಸಿಕೊಂಡಿರುವ ಸಂಘ ಸಂಸ್ಥೆಗಳು ಅಕಾಡೆಮಿ ಜೊತೆಗೆ ಕೈ ಜೋಡಿಸಬೇಕು ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.ಅವರು ಕೊಡವೂರು ಶ್ರೀ ಶಂಕರ ನಾರಾಯಣ ದೇವಸ್ಥಾನದಲ್ಲಿ ಸುಮನಸಾ ಕೊಡವೂರು ಸಂಸ್ಥೆಯ ಆಶ್ರಯದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಒಂದು ತಿಂಗಳ ‘ಯಕ್ಷಗಾನ ಹೆಜ್ಜೆ ತರಬೇತಿ ಶಿಬಿರ’ದ ಸಮಾರೋಪದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಕ್ಕಳೊಂದಿಗೆ ಮಹಿಳೆಯರು ಯಕ್ಷಗಾನಕ್ಕೆ ಬರಬೇಕು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬಂತೆ ಮಹಿಳೆ ಯಕ್ಷಗಾನವನ್ನು ಕಲಿತರೆ ತನ್ನ ಮಕ್ಕಳನ್ನು ಮಾತ್ರವಲ್ಲದೆ, ಇತರರನ್ನು ಈ ಕಲೆಯ ಕಡೆಗೆ ಸೆಳೆಯುವ ಶಕ್ತಿ ಆಕೆಗಿದೆ. ಆದ್ದರಿಂದಲೇ ಯಕ್ಷಗಾನ ಅಕಾಡೆಮಿ ಮಕ್ಕಳ ಯಕ್ಷಗಾನ ತಂಡ ಹಾಗೂ ಮಹಿಳಾ ಯಕ್ಷಗಾನ ತಂಡಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ ಎಂದರು.ಮಕ್ಕಳು ದಾರಿ ತಪ್ಪಬಾರದು ಎಂದಿದ್ದರೇ ಅವರಿಗೆ ಬಾಲ್ಯದಲ್ಲಿಯೇ ಯಕ್ಷಗಾನ ಕಲಿಸಿ. ಯಕ್ಷಗಾನ ಅವರ ಶೈಕ್ಷಣಿಕ ಪ್ರಗತಿಗೂ ಕಾರಣವಾಗುತ್ತಿದೆ ಎಂಬುದು ನಾವು ಶಾಲೆಗಳಲ್ಲಿ ಆರಂಭಿಸಿರುವ ಯಕ್ಷ ಶಿಕ್ಷಣದಿಂದ ಸಾಬೀತಾಗಿದೆ ಎಂದು ತಿಳಿಸಿದರು.ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ಯಕ್ಷಗಾನ ಅಕಾಡೆಮಿಯ ಸಹಕಾರದಿಂದ ಸುಮನಸಾ ಕೊಡವೂರು ಸಂಸ್ಥೆ ಯಕ್ಷಗಾನದ ಹೆಜ್ಜೆ ತರಬೇತಿಯನ್ನು ಹಮ್ಮಿಕೊಂಡಿರುವುದು ಸಂತೋಷ ತಂದಿದೆ ಎಂದರು.ಕಾರ್ಯಕ್ರಮದಲ್ಲಿ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ, ಉದ್ಯಮಿ ಗೋಪಾಲ ಸಿ. ಬಂಗೇರ, ಸಂಗೀತ ವಿದ್ವಾನ್ ಪಾಡಿಗಾರ್ ಲಕ್ಷ್ಮೀ ನಾರಾಯಣ ಉಪಾಧ್ಯ, ಯಕ್ಷಗಾನ ತರಬೇತುದಾರ ಮನೋಜ್ ಉಪಸ್ಥಿತರಿದ್ದರು.ಸುಮನಸಾ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಸ್ವಾಗತಿಸಿದರು. ಗೌರವಾಧ್ಯಕ್ಷ ಎಂ.ಎಸ್. ಭಟ್ ವಂದಿಸಿದರು. ಕಾರ್ಯದರ್ಶಿ ಚಂದ್ರಕಾಂತ್ ಕುಂದರ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶಿಬಿರಾರ್ಥಿಗಳಿಂದ ಪ್ರಾತ್ಯಕ್ಷಿಕೆ ಹಾಗೂ ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರದರ್ಶನ ನಡೆಯಿತು.