ಕನ್ನಡಪ್ರಭ ವಾರ್ತೆ ಬೆಳಗಾವಿ
ಕರ್ನಾಟಕ ವಿದ್ಯಾವರ್ಧಕ ಸಂಘ ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ನಾಗೂರು ಶ್ರೀ ರುದ್ರಾಕ್ಷಿಮಠದ ಸಹಯೋಗದಲ್ಲಿ ನಗರದ ಎಸ್.ಜಿ.ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಶಿವಕುಮಾರ ಸಂಬರಗಿಮಠ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಗಡಿನಾಡಿನಲ್ಲಿ ಕನ್ನಡ ಜಾಗೃತಿ ಮತ್ತು ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಭಾಷೆ ರಾಜ್ಯಾದ್ಯಂತ ಇಷ್ಟೊಂದು ಶಕ್ತಿಯುತವಾಗಲು ಕರ್ನಾಟಕ ವಿದ್ಯಾವರ್ಧಕ ಸಂಘ ಪಾತ್ರ ಪ್ರಮುಖವಾಗಿದೆ. ಅಲ್ಲದೇ ಕನ್ನಡಕ್ಕಾಗಿ ನಡೆದ ವಿವಿಧ ಹೋರಾಟಗಳಲ್ಲಿ ಕಿತ್ತೂರು ಕರ್ನಾಟಕದವರೇ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಎಲ್ಲ ಹೋರಾಟಗಾರರ ತ್ಯಾಗದ ಫಲವಾಗಿ ಕರ್ನಾಟಕ ಸ್ಥಾಪನೆಯಾಯಿತು ಎಂದು ಹೇಳಿದರು.ಕರ್ನಾಟಕ ವಿದ್ಯಾವರ್ಧಕ ಸಂಘ ಕನ್ನಡ ನಾಡಿನ ಜನರ ಸಾಕ್ಷಿಪ್ರಜ್ಞೆಯಾಗಿ ಕೆಲಸ ಮಾಡಬೇಕು. ಗಡಿ ಭಾಗದ ಪ್ರದೇಶ, ಭಾಷೆ, ಜನರು ಹಾಗೂ ರಾಜ್ಯದ ಸ್ಥಿತಿಗತಿಗಳ ಬಗ್ಗೆ ನಿಷ್ಪಕ್ಷವಾದ ವರದಿ ತಯಾರಿಸಿ ಪ್ರತಿ ಆರು ತಿಂಗಳಗೊಮ್ಮೆ ಅಂದರೆ ಅಕ್ಟೋಬರ್ 1ರೊಳಗಾಗಿ ಎರಡು ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸುವ ಮೂಲಕ ಸರ್ಕಾರವನ್ನು ಜಾಗೃತಗೊಳಿಸಬೇಕು ಎಂದು ಅವರು, ರಾಜ್ಯದಲ್ಲಿರುವ ಅನ್ಯ ಭಾಷಿಕರೆಲ್ಲರೂ ಕರ್ನಾಟಕ ರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಸಂಸದ ಜಗದೀಶ ಶೆಟ್ಟರ್ ಮಾತನಾಡಿ, ಕನ್ನಡದ ಬಗ್ಗೆ ಜಾಗೃತಿ ಮೂಡಿಸಿ, ಅದನ್ನು ಉಳಿಸಿ ಬೆಳೆಸುವ ಕಾರ್ಯ ಮೊದಲಿನಿಂದಲೂ ಕರ್ನಾಟಕ ವಿದ್ಯಾವರ್ಧಕ ಸಂಘ ಮಾಡಿಕೊಂಡು ಬಂದಿರುವುದು ಶ್ಲಾಘನೀಯ. ಕನ್ನಡ ಮತ್ತು ಮರಾಠ ಎರಡೂ ನಮ್ಮ ದೇಶದಲ್ಲಿ ಭಾಷೆಗಳೇ ಬೆಳಗಾವಿಯಲ್ಲಿ ಕನ್ನಡಿಗರು, ಮರಾಠಿಗರು ಭಾವೈಕ್ಯದಿಂದ ಬದುಕು ಸಾಗಿಸುತ್ತಿದ್ದಾರೆ. ಆದರೆ, ಕೆಲವು ಜನರು ಸ್ವಾರ್ಥ ರಾಜಕಾರಣಕ್ಕಾಗಿ ಎರಡು ಭಾಷಿಕರ ನಡುವೆ ಭಾಷಾ ದ್ವೇಷದ ಬೀಜ ಬಿತ್ತುತ್ತದ್ದಾರೆ. ಒಂದು ಸಣ್ಣ ವಿವಾದವು ದೊಡ್ಡ ಮಟ್ಟದಲ್ಲಿ ಪ್ರಚಾರ ಪಡೆಯುತ್ತಿದೆ. ಇದರಿಂದ ನಗರದ ಅಭಿವೃದ್ಧಿಯು ಕುಂಠಿತವಾಗುತ್ತದೆ. ಹೀಗಾಗಿ ಎರಡು ಭಾಷಿಕರ ಸಂಘ ಸಂಸ್ಥೆಗಳು ಕೂಡಿಕೊಂಡು ಚರ್ಚಿಸುವ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಆಸೀಫ್ (ರಾಜು) ಸೇಠ, ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಮತ ಬೇಲದ, ವಿದ್ಯಾ ವರ್ಧಕ ಸಂಘದ ಕಾರ್ಯಾಧ್ಯಕ್ಷ ಬಸಪ್ರಭು ಹೊಸಕೇರಿ, ಧಾರವಾಡ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ. ಸರಜೂ ಕಾಟ್ಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂತಿ ನಿರ್ದೇಶಕ ಕೆ.ಎಚ್. ಚೆನ್ನೂರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಬೆಳಗಾವಿಯಲ್ಲೂ ಪ್ರತಿ ವರ್ಷ ಒಂದು ತಿಂಗಳು ಅಧಿವೇಶನ ನಡೆಯಬೇಕು. ಸುವರ್ಣ ವಿಧಾನಸೌಧ ಇನ್ನಷ್ಟು ಕ್ರಿಯಾಶೀಲವಾಗಬೇಕು. ಇದರಿಂದಾಗಿ ಈ ಭಾಗದ ಅಭಿವೃದ್ಧಿ ಸಹಕಾರಿಯಾಗಲಿದೆ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.