ಧಾರವಾಡ: ಕಳೆದ ವಾರ ಹುಬ್ಬಳ್ಳಿಯಲ್ಲಿ ವಿಶೇಷ ಸ್ವಚ್ಛತಾ ಅಭಿಯಾನ ನಡೆಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು, ಭಾನುವಾರ ಧಾರವಾಡದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದರು.
ಜಿಲ್ಲಾ ಮಟ್ಟದ ಅಧಿಕಾರಿಗಳು, ಪೌರಕಾರ್ಮಿಕರೆಲ್ಲರೂ ಕೈ ಜೋಡಿಸಿದರೆ, ವಿದ್ಯಾಕಾಶಿಯ ಸರಿಸುಮಾರು 2 ಸಾವಿರಕ್ಕೂ ಅಧಿಕ ಜನ ಸಾಥ್ ನೀಡಿದರು.ನಗರದ ಮಾಳಮಡ್ಡಿಯಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ ಸಚಿವರು, ರೈಲ್ವೆ ಸ್ಟೇಷನ್, ಮಾಳಮಡ್ಡಿ, ವನವಾಸಿ ರಾಮಮಂದಿರ, ಕಬ್ಬೂರ ರಸ್ತೆ ಮತ್ತು ರಾಮನಗೌಡ ಆಸ್ಪತ್ರೆ, ಮಾಳಾಪುರ ಲಾಸ್ಟ್ ಬಸ್ ನಿಲ್ದಾಣ, ಶಿವಾಜಿ ಸರ್ಕಲ್, ಹೆಬ್ಬಳ್ಳಿ ಅಗಸಿ, ಚರಂತಿಮಠ ಗಾರ್ಡನ್, ಹೊಸಯಲ್ಲಾಪುರ ರಸ್ತೆ ಮತ್ತು ಪೌಲ್ ಕ್ಯಾಂಟೀನ್ ಸೇರಿದಂತೆ ಮತ್ತಿತರರ ಪ್ರದೇಶಗಳಲ್ಲಿ ಪೌರಕಾರ್ಮಿಕರೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು. ಸಲಿಕೆಯಿಂದ ತ್ಯಾಜ್ಯ ಸಂಗ್ರಹಿಸಿ ಬುಟ್ಟಿ ತುಂಬಿ ಕಸದ ಟ್ರ‍್ಯಾಕ್ಟರಿಗೆ ಸ್ವತಃ ಕಸ ಹಾಕಿದರು. ಕಸಬರಿಗೆಯಿಂದ ಕಸ ಗುಡಿಸಿದರು. 7 ವಾರ್ಡ್‌ಗಳ 16 ಬಡಾವಣೆಗಳಲ್ಲಿ ಅಭಿಯಾನ ನಡೆಯಿತು.
ಅಭಿಯಾನದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಪಂ ಸಿಇಒ ಭುವನೇಶ ಪಾಟೀಲ, ಎಸ್.ಪಿ. ಡಾ. ಗೋಪಾಲ ಬ್ಯಾಕೋಡ, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಆದಿಯಾಗಿ ಜಿಲ್ಲೆಯ ಎಲ್ಲ ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳು ತಮ್ಮ ಇಲಾಖೆ, ಕಚೇರಿ ಸಿಬ್ಬಂದಿಯೊಂದಿಗೆ ಭಾಗವಹಿಸಿ, ಸಚಿವರ ಕನಸಿನ ಸ್ವಚ್ಛನಗರ ಅಭಿಯಾನಕ್ಕೆ ಕೈ ಜೋಡಿಸಿ, ಕಸಕಡ್ಡಿ, ಚರಂಡಿ ತ್ಯಾಜ್ಯ ತೆಗೆದರು.ಈ ವೇಳೆ ಮಾತನಾಡಿದ ಸಚಿವ ಲಾಡ್, ನಗರ ಸ್ವಚ್ಛತೆ ಪಾಲಿಕೆ, ನಗರಸಭೆ ಕೆಲಸ ಮಾತ್ರವಲ್ಲ, ಸಾರ್ವಜನಿಕರ ಸಹಕಾರವೂ ಬೇಕು. ಪ್ರತಿಯೊಬ್ಬ ನಾಗರಿಕರಲ್ಲೂ ಇದು ನಮ್ಮ ನಗರ, ನಮ್ಮ ಓಣಿ, ನನ್ನ ಮನೆ ಎಂಬ ಹೆಮ್ಮೆ ಮೂಡಿದಾಗ ಮಾತ್ರ ಸ್ವಚ್ಛ ನಗರ ಹೊಂದಲು ಸಾಧ್ಯವಾಗುತ್ತದೆ. ಮಕ್ಕಳಲ್ಲಿ ಹೆಮ್ಮ ಮೂಡುವಂತೆ ನಾವು ಕೆಲಸ ಮಾಡಬೇಕು ಎಂದರು.
ಪಾಲಿಕೆಯಿಂದ ಈ ಅಭಿಯಾನವನ್ನು ಪ್ರತಿವಾರ ನಡೆಸಬೇಕು. ನಾಗರಿಕರಲ್ಲಿ ಹೆಚ್ಚೆಚ್ಚು ನಾಗರಿಕ ಪ್ರಜ್ಞೆ ಬೆಳೆಸಬೇಕು. ಪ್ರತಿಯೊಬ್ಬರು ಪೌರಕಾರ್ಮಿಕರಂತೆ ತಮ್ಮ ಮನೆ ಹಾಗೂ ತಮ್ಮ ಮನೆ ಸುತ್ತಮುತ್ತಲಿನ ಪ್ರದೇಶವನ್ನು ತಾವೇ ಪ್ರತಿದಿನ ಸ್ವಚ್ಛವಾಗಿ ಇಡಬೇಕು. ಎಲ್ಲೆಂದರಲ್ಲಿ ಕಸ, ತ್ಯಾಜ್ಯ ಎಸೆಯದಂತೆ ವಿನಂತಿಸಿದರು.ಶಾಲಾ, ಕಾಲೇಜು ಮಕ್ಕಳು ನಾಮಫಲಕ ಹಿಡಿದು, ನಮ್ಮ ಧಾರವಾಡ ಸ್ವಚ್ಛ ಧಾರವಾಡ, ಕಾಪಾಡೋಣ ಕಾಪಾಡೋಣ ಸ್ವಚ್ಛತೆ ಕಾಪಾಡೋಣ ಎಂಬ ಘೋಷ್ಯವಾಕ್ಯವನ್ನು ಕೂಗುತ್ತಾ ನಗರದ ಬೀದಿ ಬೀದಿಗಳಲ್ಲಿ ಸಂಚರಿಸಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಕಲಾವಿದರು ಬೀದಿ ನಾಟಕ, ಜಾನಪದ ಗೀತೆ ಹಾಡುವ ಮೂಲಕ ಸಾರ್ವಜನಿಕರಲ್ಲಿ ಸ್ವಚ್ಛತಾ ಕಾರ್ಯಕ್ಕೆ ಪ್ರೇರಣೆ ನೀಡಿದರು. ಜನರಲ್ಲಿ ಸ್ವಚ್ಛತೆಯ ಮಹತ್ವದ ಅರಿವು ಮೂಡಿಸಿದರು.
ಅಭಿಯಾನದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು, ಐಎಎಸ್ ಪ್ರೊಬೇಷನರಿ ಅಧಿಕಾರಿ ರಿತಿಕಾ ವರ್ಮಾ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಪಾಲಿಕೆ ಮೇಯರ್ ರಾಮಪ್ಪ ಬಡಿಗೇರ, ಉಪ ಪೊಲೀಸ್ ಆಯುಕ್ತ ಮಹಾನಿಂಗ ನಂದಗಾವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ್, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಅಪರ ಜಿಲ್ಲಾಧಿಕಾರಿ ಸಿ.ಡಿ. ಗೀತಾ, ಹುಡಾ ಆಯುಕ್ತ ಡಾ. ಸಂತೋಷ ಬಿರಾದಾರ, ಡಿಡಿಪಿಐ ಎಸ್.ಎಸ್. ಕೆಳದಿಮಠ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ಪಾಲಿಕೆ ಸದಸ್ಯರು, ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.