ಮಾದಕ ವಸ್ತು ಬಳಕೆ ತಡೆಗೆ ಪೊಲೀಸ್‌ ಜೊತೆ ಕೈಜೋಡಿಸಿ: ಡಾ.ಸೀನಪ್ಪ

KannadaprabhaNewsNetwork |  
Published : Jun 27, 2024, 01:13 AM IST
ಚಿತ್ರ : 26ಎಂಡಿಕೆ5 : ಸೋಮವಾರಪೇಟೆ ವಿಭಾಗದ ಪೋಲೀಸ್ ಉಪ ಅಧೀಕ್ಷಕರಾದ ಆರ್. ವಿ. ಗಂಗಾಧರಪ್ಪ ಮಾತನಾಡಿದರು.  | Kannada Prabha

ಸಾರಾಂಶ

ಕೊಡಗು ವಿಶ್ವವಿದ್ಯಾಲಯ ಹಾಗೂ ಕುಶಾಲನಗರ ಗ್ರಾಮಾಂತರ ಪೋಲೀಸ್ ಠಾಣೆ ಸಂಯುಕ್ತಾಶ್ರಯದಲ್ಲಿ ಜ್ಞಾನ ಕಾವೇರಿ ಆವರಣ, ಚಿಕ್ಕ ಅಳುವಾರ ಇಲ್ಲಿನ ಕಾವೇರಿ ಸಭಾಂಗಣದಲ್ಲಿ ‘ಸಾಕ್ಷ್ಯ ಸ್ಪಷ್ಟವಾಗಿದೆ ತಡೆಗಟ್ಟುವಿಕೆಗೆ ಹೂಡಿಕೆ ಮಾಡಿ’ ಎಂಬ ಘೋಷ ವಾಕ್ಯದೊಂದಿಗೆ ‘ಅಂತಾರಾಷ್ಟ್ರೀಯ ಮಾದಕ ವಸ್ತು ಬಳಕೆ ಮತ್ತು ಅಕ್ರಮ ಸಾಗಾಟ ವಿರೋಧಿ ದಿನಾಚರಣೆ’ನಡೆಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಸಮಾಜದಲ್ಲಿ ಮಾದಕ ವಸ್ತುಗಳ ಬಳಕೆ ಮತ್ತು ಅಕ್ರಮ ಸಾಗಾಟ ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆಯ ಜೊತೆಗೆ ಸಾರ್ವಜನಿಕರು, ಪೋಷಕರು ಸೇರಿದಂತೆ ಇಂದಿನ ಯುವಜನತೆಯ ಸಹಕಾರ ಅತ್ಯವಶ್ಯಕವಾಗಿದೆ ಎಂದು ಕೊಡಗು ವಿಶ್ವವಿದ್ಯಾಲಯ ಕುಲಸಚಿವ ಡಾ. ಸೀನಪ್ಪ ಅಭಿಪ್ರಾಯಪಟ್ಟಿದ್ದಾರೆ.

ಕೊಡಗು ವಿಶ್ವವಿದ್ಯಾಲಯ ಹಾಗೂ ಕುಶಾಲನಗರ ಗ್ರಾಮಾಂತರ ಪೋಲೀಸ್ ಠಾಣೆ ಸಂಯುಕ್ತಾಶ್ರಯದಲ್ಲಿ ಜ್ಞಾನ ಕಾವೇರಿ ಆವರಣ, ಚಿಕ್ಕ ಅಳುವಾರ ಇಲ್ಲಿನ ಕಾವೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಸಾಕ್ಷ್ಯ ಸ್ಪಷ್ಟವಾಗಿದೆ ತಡೆಗಟ್ಟುವಿಕೆಗೆ ಹೂಡಿಕೆ ಮಾಡಿ’ ಎಂಬ ಘೋಷ ವಾಕ್ಯದೊಂದಿಗೆ ಜರುಗಿದ ‘ಅಂತಾರಾಷ್ಟ್ರೀಯ ಮಾದಕ ವಸ್ತು ಬಳಕೆ ಮತ್ತು ಅಕ್ರಮ ಸಾಗಾಟ ವಿರೋಧಿ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.

ಭವಿಷ್ಯತ್ತಿನ ಉತ್ತಮ ಪ್ರಜೆಗಳಾಗಲು ಹಾಗೂ ಉತ್ತಮ ಸಮಾಜ ನಿರ್ಮಿಸಲು ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನವಹಿಸಬೇಕು. ಯಾವುದೇ ಕಾರಣಕ್ಕೂ ಮಾದಕ ವಸ್ತುಗಳ ವ್ಯಸನಿಗಳಾಗಬಾರದು. ಕುಟುಂಬದ ಮೇಲೆ ಗಂಭೀರ ಪರಿಣಾಮ ಬೀರುವುದರಿಂದ ಮಾದಕ ವಸ್ತುಗಳಿಂದ ಅತ್ಯಂತ ಜಾಗೃತರಾಗಿರಬೇಕು. ಸ್ವಸ್ಥ ಸಮಾಜದಲ್ಲಿ ಆರೋಗ್ಯವಂತ ಜೀವನವನ್ನು ನಡೆಸಬೇಕೆಂದು ಎಂದು ತಿಳಿಸಿದರು.

ಸೋಮವಾರಪೇಟೆ ವಿಭಾಗದ ಪೋಲೀಸ್ ಉಪ ಅಧೀಕ್ಷಕ ಆರ್. ವಿ. ಗಂಗಾಧರಪ್ಪ ಮಾತನಾಡಿ, ಮಾದಕ ವಸ್ತುಗಳ ದುರ್ಬಳಕೆ ಮತ್ತು ಅಕ್ರಮ ಕಳ್ಳಸಾಗಣೆ ವಿರುದ್ಧದ ಅಂತಾರಾಷ್ಟ್ರೀಯ ದಿನವನ್ನು ವಿಶ್ವ ಮಾದಕ ವಸ್ತು ಬಳಕೆ ವಿರೋಧಿ ದಿನ ಎಂದು ಕರೆಯಲಾಗುತ್ತದೆ. ಇದನ್ನು ಪ್ರತಿ ವರ್ಷ ಜೂ.26 ರಂದು ಮಾದಕ ವ್ಯಸನ ಮುಕ್ತ ಜಗತ್ತನ್ನು ನಿರ್ಮಿಸಲು ಕ್ರಮ ಮತ್ತು ಸಹಕಾರ ಬಲಪಡಿಸಲು ಆಚರಿಲಾಗುತ್ತದೆ. ಸಮಾಜದ ಜವಬ್ದಾರಿಯುತ ಪ್ರಜೆಯಾಗಿ ಮಾದಕ ವಸ್ತುಗಳ ಮಾರಾಟ ಮತ್ತು ಅಕ್ರಮ ಸಾಗಾಟದಂತಹ ಪ್ರಕರಣಗಳು ಕಂಡು ಬಂದರೆ ತತ್‌ಕ್ಷಣ ಪೋಲೀಸ್ ಇಲಾಖೆಯ ಗಮನಕ್ಕೆ ತರಬೇಕು ಎಂದು ತಿಳಿಸಿದರು.

ಮಾದಕ ದ್ರವ್ಯ ಹಾಗೂ ಮಾದಕ ವಸ್ತುಗಳ ಮಾರಾಟ, ಬಳಸುವಿಕೆಯನ್ನು ತಡೆಯುವಲ್ಲಿ ಯುವಜನತೆಯು ಪ್ರಮುಖ ಪಾತ್ರ ವಹಿಸಿ, ಮಾದಕ ವಸ್ತುಗಳ ಮುಕ್ತ ಸಮಾಜ ನಿರ್ಮಿಸಲು ಕರೆ ನೀಡಿದರು.

ಆರಕ್ಷಕ ವೃತ್ತ ನಿರೀಕ್ಷಕ ರಾಜೇಶ್ ಕೊಟ್ಯಾನ್ ಮಾತನಾಡಿ, ವಿಶ್ವದಾದ್ಯಂತ ಮಾದಕ ವಸ್ತುಗಳ ದುಶ್ಚಟಗಳಿಗೆ ಇತ್ತೀಚಿನ ವರ್ಷಗಳಲ್ಲಿ ಮಕ್ಕಳು ಮತ್ತು ಯುವಕರು ಹೆಚ್ಚು ಬಲಿಯಾಗುತ್ತಿದ್ದಾರೆ. ಮಾದಕ ವಸ್ತುಗಳ ಮಾರಾಟ ಹಾಗೂ ಸಾಗಾಣೆ ಕಾನೂನ ಬಾಹಿರ ಎಂದು ಗೊತ್ತಿದ್ದರೂ ಇದರ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಡ್ರಗ್ ಮಾಫಿಯಾ ಹತೋಟಿಗೆ ತರಲು ವಿಶ್ವದೆಲ್ಲೆಡೆ ಕಾನೂನು ಪ್ರಯತ್ನಗಳು ನಡೆಯುತ್ತಿವೆ. ಆದರೆ ಇದನ್ನು ಬುಡ ಸಮೇತ ಕಿತ್ತು ಹಾಕಲು ಸಾರ್ವಜನಿಕರ ಸಹಕಾರ ಅಷ್ಟೇ ಪ್ರಮುಖವಾಗಿದೆ ಎಂದರು.

ಮಾದಕ ವಸ್ತುಗಳ ಬಳಕೆಯಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತಿವೆ. ಪೋಷಕರು ಮತ್ತು ಶಿಕ್ಷಕರು ಮಕ್ಕಳ ಚಲನವಲನಗಳ ಮೇಲೆ ನಿರಂತರ ನಿಗಾ ವಹಿಸಬೇಕು. ಅವರ ನಡವಳಿಕೆಗಳಲ್ಲಿ ವ್ಯತ್ಯಾಸಗಳೇನಾದರೂ ಕಂಡು ಬಂದರೆ ಅದಕ್ಕೆ ಕಾರಣವೇನಿರಬಹುದೆಂಬುದನ್ನು ಮನಗಾಣಬೇಕು ಎಂದು ತಿಳಿಸಿದರು.

ಮಾದಕ ವಸ್ತುಗಳನ್ನು ಬಳಸುವುದಿಲ್ಲವೆಂದು ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಕುಶಾಲನಗರ ಗ್ರಾಮಾಂತರ ಠಾಣೆಯ ಆರಕ್ಷಕ ಉಪನಿರೀಕ್ಷಕ ಮೋಹನ್ ರಾಜು ಪಿ., ಪೋಲಿಸ್ ಇಲಾಖೆಯ ಸಿಬ್ಬಂದಿ, ಕೊಡಗು ವಿಶ್ವವಿದ್ಯಾಲಯದ ವಿವಿಧ ವಿಭಾಗದ ಉಪನ್ಯಾಸಕರು, ಆಡಳಿತ ಸಿಬ್ಬಂದಿ, ಸ್ನಾತಕೋತ್ತರ ವಿದ್ಯಾರ್ಥಿಗಳು ಇದ್ದರು.

ಉಪನ್ಯಾಸಕ ಡಾ. ಜಮೀರ್ ಅಹಮದ್ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!