ಕನ್ನಡಪ್ರಭ ವಾರ್ತೆ ವಿಜಯಪುರಹೆತ್ತವರನ್ನು, ಹುಟ್ಟಿದ ಊರನ್ನು ತೊರೆದು ದೇಶ ಸೇವೆಯೇ ಈಶ ಸೇವೆ ಎಂದು ಪ್ರಾಣ ಒತ್ತೆ ಇಟ್ಟು ದೇಶಕ್ಕಾಗಿ ಹೋರಾಡಲು ಸಿದ್ದನಿರುವವನೇ ಭಾರತ ಮಾತೆಯ ಹೆಮ್ಮೆಯ ಪುತ್ರ ಎಂದು ಇಂಡಿ ತಾಲೂಕಿನ ಶಿರಕನಹಳ್ಳಿಯ ನಿವೃತ್ತ ಯೋಧ ಜಟ್ಟೆಪ್ಪ ನಾವಿ ಹೇಳಿದರು.
ನಗರದ ಕನಕದಾಸ ಬಡಾವಣೆಯಲ್ಲಿನ ಶ್ರೀ ಸಿದ್ದೇಶ್ವರ ಕೋಚಿಂಗ್ ಕ್ಲಾಸಸ್ ಹಾಗೂ ಶಿರಕನಹಳ್ಳಿ ಗ್ರಾಮದ ಗೆಳೆಯರ ಬಳಗ ಹಾಗೂ ಗುರು ಹಿರಿಯರು ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸೈನಿಕರು ಅನುಭವಿಸುವ ಕಷ್ಟ ಹಾಗೂ ಜೀವನ ಕಲ್ಪಿಸಿಕೊಂಡರೆ ಕಣ್ಣಂಚಿನಲ್ಲಿ ನೀರು ಬರುತ್ತದೆ. ಆದರೆ ದೇಶಕ್ಕಾಗಿ ಮಿಡಿಯುವ ಅವರ ಹೃದಯ ಎಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸಬಲ್ಲದು. ದೇಶ ಸೇವೆ ಮಾಡುವುದು ನಮ್ಮ ಪೂರ್ವಜನ್ಮದ ಪುಣ್ಯ. ಇಂದಿನ ಮಕ್ಕಳಿಗೆ ದೇಶಪ್ರೇಮ ಮೂಡಿಸುವ ಕಥೆ ಕವನಗಳನ್ನು ಹೇಳುವ ಕೆಲಸವನ್ನು ಶಾಲಾ ಕಾಲೇಜುಗಳು ಮಾಡಬೇಕಿದೆ. ಒಬ್ಬ ಸೇನೆಗೆ ಸೇರುವುದು ತುತ್ತು ಅನ್ನಕ್ಕಾಗಿ ಅಲ್ಲ, ದೇಶ ಸೇವೆಗಾಗಿ ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.ಶ್ರೀ ಸಿದ್ದೇಶ್ವರ ಕೋಚಿಂಗ್ ಕ್ಲಾಸಸ್ ಸಂಸ್ಥಾಪಕ ಅಧ್ಯಕ್ಷ ಸುರೇಶ ಜತ್ತಿ ಮಾತನಾಡಿ, ಪ್ರತಿಷ್ಠಿತ ಸೈನಿಕ ಶಾಲೆಗಳಲ್ಲಿ ಕಲಿತು ಸೈನಿಕರಾಗಲು ಇಂದು ವಿಫುಲ ಅವಕಾಶಗಳಿವೆ. ಅಲ್ಲದೇ, ಪರೀಕ್ಷೆಗಳನ್ನು ಎದುರಿಸಿ ಸೇನೆಯಲ್ಲಿ ಉನ್ನತ ಹುದ್ದೆ ಅಲಂಕರಿಸಲು ವ್ಯವಸ್ಥೆ ಇದೆ. ಅದಕ್ಕಾಗಿ ಇಂದಿನ ಮಕ್ಕಳು ದೇಶ ಸೇವೆ ಮಾಡುವ ಗಟ್ಟಿ ಮನಸು ಮಾಡಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ನಿವೃತ್ತ ಕರ್ನಲ್ ಸಂಗಪ್ಪ ಮಾತನಾಡಿ, ತ್ಯಾಗ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಮಳೆ, ಗಾಳಿ, ಚಳಿ, ಬಿಸಿಲಿನಲ್ಲೂ ವೈರಿಗಳೊಂದಿಗೆ ಹೋರಾಡುವುದೇ ದೊಡ್ಡ ಸವಾಲು. ಸೈನಿಕ ನಿವೃತ್ತಿ ಹೊಂದಿ ಮರಳಿ ತಾಯ್ನಾಡಿಗೆ ಬಂದರೆ ಅದು ಅವರ ಪುನರ್ಜನ್ಮ. ದೇಶ ರಕ್ಷಣೆಗೆ ಯಾರೂ ಹಿಂಜರಿಯಬಾರದು, ದೇಶ ಸೇವೆ ಮಾಡುವುದು ಅದೃಷ್ಟ ಎಂದು ಹೇಳಿದರು.ಸಾಹಿತಿ ರೇವಣಸಿದ್ದಪ್ಪ ಪಟ್ಟಣಶೆಟ್ಟಿ ಮಾತನಾಡಿ, ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತ ಮಿಗಿಲು ಎಂಬಂತೆ ಪ್ರತಿಯೊಬ್ಬರೂ ದೇಶ ಹಾಗೂ ಯೋಧರನ್ನು ಅತ್ಯಂತ ಗೌರವದಿಂದ ಕಾಣಬೇಕು. ಯಾವುದೋ ಸಿನಿಮಾ ನೋಡಿ ಯಾರನ್ನೋ ಹೀರೋ ಮಾಡಿ ನಮ್ಮತನ ಬಿಟ್ಟು ಬದುಕುವುದಲ್ಲ. ನಾವು ನೆಮ್ಮದಿಯಿಂದ ನಿದ್ದೆ ಮಾಡಬೇಕಾದರೆ ತಮ್ಮೆಲ್ಲ ಸರ್ವಸ್ವವನ್ನೂ ತ್ಯಾಗ ಮಾಡಿ, ಭಾರತ ಮಾತೆಯ ರಕ್ಷಣೆ ಮಾಡುವವರು ನಮ್ಮ ಹೆಮ್ಮೆಯ ಯೋಧರು ಎಂದರು.
ಅತಿಥಿಗಳಾದ ಎಸ್.ಎಸ್.ದೊಡಮನಿ, ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಎಂ.ಎಂ.ಲೋಣಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಯೋಧ ಜಟ್ಟೆಪ್ಪ ನಾವಿ ದಂಪತಿಯನ್ನು ಹಾಗೂ ಅವರ ತಂದೆ-ತಾಯಿಯನ್ನು ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ನೀಲಾ ಜತ್ತಿ, ಶಿವಕುಮಾರ ನಾವಿ, ಜ್ಯೋತಿಪ್ರಕಾಶ, ಸಂಗೊಂಡ ಕೋರಿ, ಮಂಜು, ಸೇರಿದಂತೆ ಶಿರಕನಹಳ್ಳಿ ಗ್ರಾಮದ ಗೆಳೆಯರ ಬಳಗದ ಸದಸ್ಯರು ಹಾಗೂ ಗುರುಹಿರಿಯರು ಉಪಸ್ಥಿತರಿದ್ದರು.
---------ಕೋಟ್.....
ಇಂದಿನ ಮಕ್ಕಳಿಗೆ ಶಿಕ್ಷಣ ಜೊತೆಗೆ ಸಂಸ್ಕಾರ ಮತ್ತು ಶಿಸ್ತು ಮುಖ್ಯ. ಅದು ಸೈನಿಕ ಶಾಲೆಯಲ್ಲಿ ಹಾಗೂ ಮಿಲಿಟರಿಯಲ್ಲಿ ಸಾಧ್ಯ. ಜಾತಿ ಮತ ಪಂಥ ಮೀರಿದ ನಾವು ಭಾರತ ಮಾತೆ ಹೆಮ್ಮೆಯ ಸುಪುತ್ರರಾಗಿ ಬಾಳಬೇಕು. ಯೋಧರು ನಿಮ್ಮೆಲ್ಲರ ಜೀವನಕ್ಕೆ ಪ್ರೇರಣೆಯಾಗಬೇಕು.- ಸುರೇಶ ಜತ್ತಿ, ಶ್ರೀ ಸಿದ್ದೇಶ್ವರ ಕೋಚಿಂಗ್ ಕ್ಲಾಸಸ್ ಸಂಸ್ಥಾಪಕ ಅಧ್ಯಕ್ಷ