ಕಾರ್ಮಿಕ ವಿರೋಧಿ ಕಾಯ್ದೆ ಕೈಬಿಡುವಂತೆ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಆಗ್ರಹ

KannadaprabhaNewsNetwork |  
Published : May 02, 2026, 04:00 AM IST
May Day Rally 2 | Kannada Prabha

ಸಾರಾಂಶ

ಕಾರ್ಮಿಕ ವಿರೋಧಿಯಾದ ವೇತನ ಸಂಹಿತೆ, ಕೈಗಾರಿಕಾ ಸಂಬಂಧಗಳ ಸಂಹಿತೆ, ಸಾಮಾಜಿಕ ಭದ್ರತಾ ಸಂಹಿತೆ, ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ದುಡಿಯುವ ಪರಿಸ್ಥಿತಿಗಳ ಸಂಹಿತೆಯನ್ನು ತಿರಸ್ಕರಿಸಬೇಕು. ರಾಜ್ಯ ಸರ್ಕಾರ ಈ ಸಂಹಿತೆಗಳಿಗೆ ನಿಯಮ ರೂಪಿಸಬಾರದು ಎಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು-ಕರ್ನಾಟಕ) ಆಗ್ರಹಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಾರ್ಮಿಕ ವಿರೋಧಿಯಾದ ವೇತನ ಸಂಹಿತೆ, ಕೈಗಾರಿಕಾ ಸಂಬಂಧಗಳ ಸಂಹಿತೆ, ಸಾಮಾಜಿಕ ಭದ್ರತಾ ಸಂಹಿತೆ, ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ದುಡಿಯುವ ಪರಿಸ್ಥಿತಿಗಳ ಸಂಹಿತೆಯನ್ನು ತಿರಸ್ಕರಿಸಬೇಕು. ರಾಜ್ಯ ಸರ್ಕಾರ ಈ ಸಂಹಿತೆಗಳಿಗೆ ನಿಯಮ ರೂಪಿಸಬಾರದು ಎಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು-ಕರ್ನಾಟಕ) ಆಗ್ರಹಿಸಿದೆ.

ಶುಕ್ರವಾರ ನಗರದ ಸ್ವಾತಂತ್ರ್ಯಉದ್ಯಾನದಲ್ಲಿ ಕಾರ್ಮಿಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಈ ನಾಲ್ಕು ಸಂಹಿತೆಗಳಿಗೆ ಒಕ್ಕೊರಲಿನಿಂದ ವಿರೋಧ ವ್ಯಕ್ತಪಡಿಸಿದರು.

ಈ ಕಾನೂನುಗಳನ್ನು ಜಾರಿಗೆ ತಂದಿರುವುದು ಈ ದೇಶದ ಬಂಡವಾಳ ಶಾಹಿಗಳಿಗೆ ಹೆಚ್ಚಿನ ಪ್ರಮಾಣದ ಲಾಭ ಮಾಡಿಕೊಡಲೇ ಹೊರತು, ಕಾರ್ಮಿಕರ ಹಿತಾಸಕ್ತಿಗಾಗಿ ಅಲ್ಲ. ಉದ್ಯೋಗದ ಭದ್ರತೆ ಇಲ್ಲದಂತಾಗಿದೆ. ಮಾಲೀಕ ರಾತ್ರೋರಾತ್ರಿ ಕಂಪನಿ ಮುಚ್ಚಬಹುದು ಎಂಬ ನೀತಿಯನ್ನು ಸರ್ಕಾರ ಜಾರಿಗೊಳಿಸಿದೆ. ಮುಷ್ಕರ ಮಾಡುವ ಹಕ್ಕನ್ನೇ ಕಸಿದುಕೊಳ್ಳಲಾಗುತ್ತದೆ. 60 ದಿನಕ್ಕಿಂತ ಅಧಿಕ ದಿನ ನೋಟಿಸ್ ನೀಡಿ ಬಳಿಕ ಮುಷ್ಕರ ಮಾಡಬೇಕು ಎಂಬ ಸಂಹಿತೆ ಕಾರ್ಮಿಕರನ್ನು ಕಂಪನಿ ಮಾಲೀಕರು ಹೆದರಿಸಲು ಸಮಯಾವಕಾಶ ಕೊಟ್ಟಂತೆ. ತಮ್ಮ ಸಂಸ್ಥೆಯ ಅನ್ಯಾಯದ ವಿರುದ್ಧ ನಡೆಯುವ ಹೋರಾಟವನ್ನು ಹತ್ತಿಕ್ಕಲು ಸರ್ಕಾರವೇ ಕಾನೂನುಬದ್ಧವಾಗಿ ನೀಡುವ ಅವಕಾಶ ಇದಾಗಿದೆ ಎಂದು ಆರೋಪಿಸಿದರು.

ಸಮಗ್ರ ವೇತನ ಪರಿಷ್ಕರಣೆ ಮಾಡದೆ ಸುಮಾರು 7 ವರ್ಷ ಕಳೆದಿವೆ. ಬೆಲೆ ಏರಿಕೆ ಹಾಗೂ ಹಣದುಬ್ಬರದಿಂದಾಗಿ ಕಾರ್ಮಿಕರ ಕುಟುಂಬದ ನಿರ್ವಹಣೆ ಅಸಹನೀಯವಾಗುತ್ತಿದೆ ಕೂಡಲೇ ವೇತನ ಹೆಚ್ಚಳಕ್ಕೆ ಅಧಿಸೂಚನೆ ಹೊರಡಿಸಬೇಕು ಎಂದು ಆಗ್ರಹಿಸಿದರು.

ಲಕ್ಷಾಂತರ ಸಂಖ್ಯೆಯಲ್ಲಿ ದುಡಿಯುತ್ತಿರುವ ಅಸಂಘಟಿತ ವಲಯದ ಕಾರ್ಮಿಕರು ವೇತನ ವಂಚನೆ ಮತ್ತು ಶಾಸನ ಬದ್ಧ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ರಾಜ್ಯ ಸರ್ಕಾರ ಗುತ್ತಿಗೆ ಪದ್ಧತಿಗೆ ತಿಲಾಂಜಲಿ ನೀಡಿ ಎಲ್ಲರನ್ನೂ ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು. ಸಮಾವೇಶದಲ್ಲಿ ಕಾರ್ಮಿಕ ಮುಖಂಡರಾದ ಶಿವಶಂಕರ್, ಎಂ. ಜಯಮ್ಮ, ವಿಜಯ ಭಾಸ್ಕರ್‌, ಕೆ.ವಿ.ಭಟ್‌ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಾನಪದ ಕೇವಲ ಕಲೆಯಲ್ಲ, ಬದುಕಿನ ದಾರಿದೀಪ
ಚಿನ್ನಾ ಸೇಲಂ ಅರಿಷಿಣ ಬೀಜಕ್ಕೆ ಕೊರತೆ