ಜಾನಪದ ಕೇವಲ ಕಲೆಯಲ್ಲ, ಬದುಕಿನ ದಾರಿದೀಪ

KannadaprabhaNewsNetwork |  
Published : May 02, 2026, 03:15 AM IST
ಜಾನಪದ ಜಾತ್ರೆ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಅಥಣಿ ಜಾನಪದವು ಕೇವಲ ಕಲೆಯಲ್ಲ, ಅದು ನಮ್ಮ ಬದುಕಿನ ದಾರಿದೀಪವಾಗಿದೆ. ಹಳ್ಳಿಯ ಜನರ ಬೆವರಿನ ಹನಿಗಳಲ್ಲಿ ಹುಟ್ಟಿದ ಈ ಕಲೆಗಳು ಇಂದು ಆಧುನಿಕತೆ ಹಾಗೂ ನಗರದ ವ್ಯಾಮೋಹಕ್ಕೆ ಬಲಿಯಾಗುತ್ತಿವೆ ಎಂದು ಗೋಕಾಕದ ಹಿರಿಯ ಕಲಾವಿದ ಈಶ್ವರಚಂದ್ರ ಬೆಟಗೇರಿ ಕಳವಳ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಅಥಣಿ

ಜಾನಪದವು ಕೇವಲ ಕಲೆಯಲ್ಲ, ಅದು ನಮ್ಮ ಬದುಕಿನ ದಾರಿದೀಪವಾಗಿದೆ. ಹಳ್ಳಿಯ ಜನರ ಬೆವರಿನ ಹನಿಗಳಲ್ಲಿ ಹುಟ್ಟಿದ ಈ ಕಲೆಗಳು ಇಂದು ಆಧುನಿಕತೆ ಹಾಗೂ ನಗರದ ವ್ಯಾಮೋಹಕ್ಕೆ ಬಲಿಯಾಗುತ್ತಿವೆ ಎಂದು ಗೋಕಾಕದ ಹಿರಿಯ ಕಲಾವಿದ ಈಶ್ವರಚಂದ್ರ ಬೆಟಗೇರಿ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ಕೆಎಲ್ಈ ಸಂಸ್ಥೆಯ ಎಸ್ಎಸ್ಎಮ್ಎಸ್ ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗ ಹಮ್ಮಿಕೊಂಡಿದ್ದ ಜಾನಪದ ಜಾತ್ರೆ -2026 ಅದ್ಧೂರಿ ಚಾಲನೆ ನೀಡಿ ಮಾತನಾಡಿದರು. ಇಂದಿನ ಆಧುನಿಕತೆಯ ಅಬ್ಬರದಲ್ಲಿ ಮರೆಯಾಗುತ್ತಿರುವ ನಮ್ಮ ಮಣ್ಣಿನ ಅಮೂಲ್ಯವಾದ ಜನಪದ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ಪರಿಚಯಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಮಹಾವಿದ್ಯಾಲಯವು ವಿದ್ಯಾರ್ಥಿಗಳಲ್ಲಿ ಜಾನಪದ ಪ್ರಜ್ಞೆ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಡಾ.ಮಲ್ಲಿಕಾರ್ಜುನ ಹಂಜಿ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ನಶಿಸುತ್ತಿರುವ ಜನಪದ ಸಂಸ್ಕೃತಿಗಳನ್ನು ಜೀವಂತವಾಗಿಸುವ ಸಂಕಲ್ಪದಿಂದ ಶಾಲಾ ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಜಾನಪದ ಜಾತ್ರೆಯು ನಮ್ಮ ಮಹಾವಿದ್ಯಾಲಯದ ಆವರಣದಲ್ಲಿ ಹಬ್ಬದ ಕಳೆಯನ್ನು ತಂದಿದೆ. ಕೆ.ಎಲ್.ಇ ಸಂಸ್ಥೆಯು ಕೇವಲ ಅಕ್ಷರ ಜ್ಞಾನವನ್ನಷ್ಟೇ ಅಲ್ಲದೆ, ಸಾಂಸ್ಕೃತಿಕ ಮೌಲ್ಯಗಳನ್ನೂ ವಿದ್ಯಾರ್ಥಿಗಳಲ್ಲಿ ಬಿತ್ತುತ್ತಿದೆ. ಜನಪದ ಜಾತ್ರೆಯ ಮೂಲಕ ವಿದ್ಯಾರ್ಥಿಗಳು ತಮ್ಮ ಬೇರುಗಳನ್ನು ಹುಡುಕುವ ಪ್ರಯತ್ನ ಮಾಡುತ್ತಿರುವುದು ಮೆಚ್ಚುಗೆಯ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.

ಕನ್ನಡ ವಿಭಾಗದ ಮುಖ್ಯಸ್ಥ ಡಾ.ಭಾರತಿ ಗದ್ದಿ ಪ್ರಾಸ್ತಾವಿಕವಾಗಿ ಮಾತನಾಡಿ, ಜಾನಪದ ಸಾಹಿತ್ಯ ಮತ್ತು ಮೌಖಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ಇಂದಿನ ಯುವಜನತೆಯ ಪಾತ್ರ ದೊಡ್ಡದಿದೆ. ಶಾಲಾ ಕಾಲೇಜು ಹಂತಗಳಲ್ಲಿ ಇಂತಹ ಜಾತ್ರೆ ಮತ್ತು ಉತ್ಸವಗಳನ್ನ ನಡೆಸುವುದರಿಂದ ಮುಂದಿನ ಪೀಳಿಗೆಗೆ ಕಲೆಯನ್ನು ಪರಿಚಯಿಸಲು ಸಹಕಾರಿಯಾಗುತ್ತದೆ ಎಂದರು.

ಜನಪದ ಜಾತ್ರೆಯು ಅಥಣಿಯ ಧಾರ್ಮಿಕ ಮತ್ತು ಸಾಂಸ್ಕೃತಿಕ ವಲಯದಲ್ಲಿ ಹೊಸ ಸಂಚಲನ ಮೂಡಿಸಿದ್ದು, ವಿದ್ಯಾರ್ಥಿ, ವಿದ್ಯಾರ್ಥಿನಿಯರ ಸಾಂಪ್ರದಾಯಿಕ ಉಡುಪುಗಳು, ಹಳ್ಳಿ ಸೊಗಡಿನ ಊಟದ ವ್ಯವಸ್ಥೆ, ಜಾನಪದ ಕಲೆಗಳ ಅನಾವರಣ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದವು. ಒಟ್ಟಾರೆ ಜನಪದ ಕಲೆಗಳ ಪುನರುತ್ಥಾನಕ್ಕೆ ಉತ್ತಮ ನಾಂದಿ ಹಾಡಿತು. ಇಡೀ ದಿನ ಕಾಲೇಜು ಆವರಣವು ಗ್ರಾಮೀಣ ಸೊಗಡಿನ ವೈಭವ ಕಂಡು ಬಂತು.

ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ವಿದ್ಯಾರ್ಥಿಗಳು: ಮಹಾವಿದ್ಯಾಲಯದ ಜಾನಪದ ಜಾತ್ರೆಯ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಜನಪದ ಶೈಲಿಯ ಉಡುಗೆ-ತೊಡುಗೆಗಳನ್ನು ಧರಿಸಿ ಬಂದಿದ್ದು ವಿಶೇಷವಾಗಿತ್ತು. ಹುಡುಗರು ಪಂಚೆ, ಶರ್ಟ್ ಹಾಗೂ ಪೇಟ ಧರಿಸಿ ಮಿಂಚಿದರೆ, ಹುಡುಗಿಯರು ಸಾಂಪ್ರದಾಯಿಕ ಸೀರೆ ಹಾಗೂ ಒಡವೆಗಳನ್ನು ತೊಟ್ಟು ಮಿಂಚಿದರು.ಈ ಸಂದರ್ಭದಲ್ಲಿ ​ ಪ್ರಾಚಾರ್ಯ ಡಾ.ಪ್ರಶಾಂತ ಮಗದುಮ್ಮ, ಸಂಗಮೇಶ ತಳವಾರ, ಐ.ಜಿ.ಮುಲ್ಲಾ, ಲಕ್ಷ್ಮಿ ಪೂಜಾರಿ, ಸಂಗಪ್ಪ ಪಟ್ಟೇದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಪ್ರಶಾಂತ ಮಗದುಮ್ಮ ಸ್ವಾಗತಿಸಿದರು. ಸಂಗಮೇಶ ತಳವಾರ ವಂದಿಸಿದರು. ಕಲಾತಂಡಗಳ ಸಂಭ್ರಮ: ಜಾನಪದ ಜಾತ್ರೆಯಲ್ಲಿ ವಿವಿಧ ಕಲಾತಂಡಗಳ ವಾದ್ಯ ಮೇಳ, ನೃತ್ಯ ಹಾಗೂ ಹಾಡುಗಳು ಮೆರಗು ಹೆಚ್ಚಿಸಿದವು. ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ತಂಡಗಳಲ್ಲಿ ವಿಭಾಗವಾದ ವಿದ್ಯಾರ್ಥಿಗಳು ಡೊಳ್ಳು ಕುಣಿತ, ವೀರಗಾಸೆ, ಲಂಬಾಣಿ ನೃತ್ಯ ಹಾಗೂ ಸುಗ್ಗಿಯ ಹಾಡುಗಳನ್ನು ಅತ್ಯಂತ ಲವಲವಿಕೆಯಿಂದ ಪ್ರಸ್ತುತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಿನ್ನಾ ಸೇಲಂ ಅರಿಷಿಣ ಬೀಜಕ್ಕೆ ಕೊರತೆ
ತಹಸೀಲ್ದಾರ್, ಪೌರಾಯುಕ್ತರ ಮೇಲೆ ಕ್ರಮ ಸೂಚಿಸುವೆ