ಕನ್ನಡಪ್ರಭ ವಾರ್ತೆ ಬಾಗಲಕೋಟೆ:
ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಅವರು, ಬುಧವಾರ ಬಾದಾಮಿ ತಾಲೂಕಿನ ಕೆಲವಡಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಮಹಿಳಾ ಕೂಲಿ ಕಾರ್ಮಿಕರ ಜೊತೆ ಕೆಲ ಸಮಯ ಕಳೆದು ಅವರ ಸಮಸ್ಯೆಗಳನ್ನು ಆಲಿಸಿದರು.ಪ್ರಚಾರಕ್ಕೆ ತೆರಳುತ್ತಿದ್ದ ವೇಳೆ ಕೆಲವಡಿ ಗ್ರಾಮದ ಬಳಿ ಕೆಲಸದಲ್ಲಿ ತೊಡಗಿದ್ದ ಮಹಿಳೆಯರ ಬಳಿ ತೆರಳಿ ಮಾತನಾಡಿಸಿದರು. ಈ ವೇಳೆ ಅವರ ಸಮಸ್ಯೆಗಳನ್ನು ಆಲಿಸಿದ ಸಂಯುಕ್ತ ಪಾಟೀಲ, ಸರ್ಕಾರದಿಂದ ಏನು ಸವಲತ್ತುಗಳು ಬೇಕಾಗಿದೆ ಎಂದು ಪ್ರಶ್ನಿಸಿದರು. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಕುಟುಂಬಕ್ಕೆ ಆಸರೆಯಾಗಿವೆಯೇ?, ಪ್ರತಿ ತಿಂಗಳು ನಿಮ್ಮ ಬ್ಯಾಂಕ್ ಖಾತೆಗೆ ₹2000 ಜಮಾ ಆಗುತ್ತಿದೆಯೇ? ಏನಾದರೂ ಸಮಸ್ಯೆ ಇದೆಯೇ ಎಂದು ಪ್ರಶ್ನಿಸಿದರು.ದುಡಿಯುವ ಕೈಗಳಿಗೆ ಕೆಲಸ ಕೊಡಬೇಕು ಎಂಬ ಉದ್ದೇಶದಿಂದಲೇ ನರೇಗಾ ಯೋಜನೆಯನ್ನು ರೂಪಿಸಲಾಗಿದೆ. ಕಾಂಗ್ರೆಸ್ ಶ್ರಮಕ್ಕೆ ಗೌರವ ಯೋಜನೆಯಲ್ಲಿ ಉದ್ಯೋಗ ಖಾತ್ರಿ ಸೇರಿದಂತೆ ಪ್ರತಿದಿನ ₹ 400 ರಾಷ್ಟ್ರೀಯ ಕನಿಷ್ಠ ವೇತನ ನೀಡುವ ನಿರ್ಧಾರ ಕೈಗೊಂಡಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ರೈತರ ಬೇಡಿಕೆಯಂತೆ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿ ಹಾಗೂ ಕೃಷಿ ಸಾಲ ಮನ್ನಾ ಮಾಡಲಾಗುವುದು. ಬೆಳೆ ಹಾನಿಗೆ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡುವ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ದೇಗುಲಗಳ ಭೇಟಿ: ಬಾದಾಮಿ ತಾಲೂಕಿನ ವಿವಿಧೆಡೆ ಪ್ರಚಾರ ನಡೆಸಿದ ಸಂಯುಕ್ತಾ ಪಾಟೀಲ್ ಅವರು ಬಾದಾಮಿಯ ಪ್ರಸಿದ್ಧ ಶ್ರೀ ಗುಡ್ಡದ ರಂಗನಾಥ ದೇವಾಲಯ, ಕೆಲವಡಿ ಗ್ರಾಮದ ಶ್ರೀ ರಂಗನಾಥ ದೇವಾಲಯ, ತಿಮ್ಮಸಾಗರದ ಗ್ರಾಮ ದೇವತೆ ದೇವಾಲಯಗಳಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.ಶಾಸಕ ಭೀಮಸೇನ ಚಿಮ್ಮನಕಟ್ಟಿ, ಸಂಜು ಬರಗುಂಡಿ, ಪ್ರಕಾಶ್ ಮೇಟಿ, ರಾಜು ಜವಳಿ, ಬಿ.ಬಿ.ಸೂಳಿಕೇರಿ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.