ಹಳೆ ವಾಹನ ತೆರವಿಗೆ ಜಂಟಿ ಆಪರೇಷನ್‌!

KannadaprabhaNewsNetwork |  
Published : Jun 24, 2026, 03:15 AM IST
ರಸ್ತೆಯ ಪಕ್ಕದ ಫುಟ್‌ಪಾತ್‌ ಮೇಲೆ ನಿಂತಿರುವ ವಾಹನಗಳು. | Kannada Prabha

ಸಾರಾಂಶ

ರಸ್ತೆಯಲ್ಲಿ ಹಲವು ವರ್ಷಗಳಿಂದ ಮಾಲೀಕರಲ್ಲಿದೆ, ತುಕ್ಕು ಹಿಡಿದಿರುವ ವಾಹನಗಳ ತೆರವಿಗೆ ಪೊಲೀಸ್‌ ಕಮಿಷನರೇಟ್‌ ಹಾಗೂ ಮಹಾನಗರ ಪಾಲಿಕೆ ಜಂಟಿ ಕಾರ್ಯಾಚರಣೆ ನಡೆಸಲು ಸಿದ್ಧತೆ ನಡೆಸಿವೆ.

ನಾಗರಾಜ ಮಾರೇರ

ಹುಬ್ಬಳ್ಳಿ:

ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಆಪರೇಷನ್‌ ಫುಟ್‌ಪಾತ್‌ ಮೂಲಕ ತೆರವು ಕಾರ್ಯಾಚರಣೆ ಮುಂದುವರಿದೆ. ಇದರೊಂದಿಗೆ ರಸ್ತೆಯಲ್ಲಿ ಹಲವು ವರ್ಷಗಳಿಂದ ಮಾಲೀಕರಲ್ಲಿದೆ, ತುಕ್ಕು ಹಿಡಿದಿರುವ ವಾಹನಗಳ ತೆರವಿಗೆ ಪೊಲೀಸ್‌ ಕಮಿಷನರೇಟ್‌ ಹಾಗೂ ಮಹಾನಗರ ಪಾಲಿಕೆ ಜಂಟಿ ಕಾರ್ಯಾಚರಣೆ ನಡೆಸಲು ಸಿದ್ಧತೆ ನಡೆಸಿವೆ.

ಮಹಾನಗರ ಪಾಲಿಕೆ 15 ದಿನಗಳಿಂದ ಆಪರೇಷನ್‌ ಫುಟ್‌ಪಾತ್‌ ಹೆಸರಿನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ವ್ಯಾಪಾರಸ್ಥರ ವಿರೋಧಕ್ಕೂ ಮಣಿಯದೇ ತೆರವು ಮಾಡಿದೆ. ಅದರಂತೆ ಇದೀಗ ರಸ್ತೆ ಆಕ್ರಮಿಸಿಕೊಂಡು ಹಲವು ವರ್ಷಗಳಿಂದ ನಿಂತಲ್ಲೇ ನಿಂತಿರುವ ವಾಹನಗಳ ತೆರವು ಶೀಘ್ರದಲ್ಲಿಯೇ ಶುರುವಾಗಲಿದೆ.

ಪೊಲೀಸ್‌ ಇಲಾಖೆ ಮಾಹಿತಿ ಪ್ರಕಾರ ನಗರದಲ್ಲಿ ಬಹುತೇಕ ಕಡೆ 5, 10, 20 ವರ್ಷಗಳಿಂದ ಅಲ್ಲಲ್ಲಿ ವಾಹನಗಳನ್ನು ಹಾಗೇ ಬಿಡಲಾಗಿದೆ. ಇವು ತುಕ್ಕು ಹಿಡಿದು ಕೆಲವರು ಬಿಡಿ ಭಾಗಗಳನ್ನು ಕದ್ದೊಯ್ದಿದ್ದಾರೆ. ಪ್ರಮುಖ ರಸ್ತೆಯಲ್ಲೂ ಹಳೆ ವಾಹನ ನಿಲ್ಲಿಸಿದ್ದು ಇದರಿಂದ ಟ್ರಾಫಿಕ್‌ ಸಮಸ್ಯೆ, ಅಪಘಾತ ಸಂಭವಿಸುತ್ತಿವೆ. ಹೀಗಾಗಿ ಮಹಾನಗರ ಪಾಲಿಕೆ ಹಾಗೂ ಸಂಚಾರಿ ಪೊಲೀಸರು ಇವುಗಳ ತೆರವಿಗೆ ಮುಂದಾಗಿದ್ದಾರೆ.

ಏಕೆ ಈ ಸಮಸ್ಯೆ?:

ಗ್ಯಾರೇಜ್‌ ಮುಂಭಾಗ, ಕಾರು ಮೇಳ, ಗುಜರಿ ಅಂಗಡಿ, ಕಾರವಾರ ರೋಡ್‌, ಉಣಕಲ್‌, ಕೇಶ್ವಾಪುರ, ಮಾರುಕಟ್ಟೆ ಪ್ರದೇಶ ಸೇರಿದಂತೆ ಮಹಾನಗರದ ಬಹುತೇಕ ಕಡೆ ಹಲವು ವರ್ಷಗಳಿಂದ ಹಳೆ ವಾಹನಗಳನ್ನು ರಸ್ತೆಯೇ ಬಿಡಲಾಗಿದೆ. ಗ್ಯಾರೇಜ್‌ಗೆ ರಿಪೇರಿಗೆ ತರುವ ಮಾಲೀಕರು ದುರಸ್ತಿಗೆ ವಾಹನಕ್ಕಿಂತ ಹೆಚ್ಚಿನ ಹಣ ನೀಡಬೇಕಾಗುತ್ತದೆ ಎನ್ನುವ ಕಾರಣಕ್ಕೆ ಹಾಗೇ ಬಿಟ್ಟು ಹೋಗುತ್ತಿದ್ದಾರೆ. ಮರಳಿ ತೆಗೆದುಕೊಂಡು ಹೋಗಿ ಎಂದರು ನಿಮಗೆ ಬೇಕಾದ ಬಿಡಿಭಾಗ ತೆಗೆದುಕೊಳ್ಳಿ ಅಥವಾ ಯಾರಿಗಾದರೂ ಮಾರಾಟ ಮಾಡಿ, ಅದರಲ್ಲಿ ಕಮಿಷನ್‌ ನೀಡುತ್ತೇವೆ ಎಂದು ಹೇಳುತ್ತಿದ್ದಾರೆ. ಅದೇ ರೀತಿ ಗುಜ್ಜರಿ ಅಂಗಡಿ, ಪ್ರಮುಖ ಕಾಲನಿಯಲ್ಲಿ ಹಳೆಯ ವಾಹನ ಹಾಗೇ ನಿಲ್ಲಿಸಲಾಗಿದೆ.

ರಸ್ತೆಯಲ್ಲಿ ಬೇಕಾಬಿಟ್ಟಿ ವಾಹನ ನಿಲ್ಲಿಸದಂತೆ ಹಲವು ಬಾರಿ ತಿಳಿಸಿದ್ದೇವೆ. ದಿನದಿಂದ ದಿನಕ್ಕೆ ಟ್ರಾಫಿಕ್‌ ಸಮಸ್ಯೆಯೂ ಹೆಚ್ಚುತ್ತಿದೆ. ನಮ್ಮೊಂದಿಗೆ ನಾಗರಿಕರು ಕೈಜೋಡಿಸಿದರೆ ಕ್ಲೀನ್‌ ರೋಡ್‌, ಕ್ಲೀನ್‌ ಸಿಟಿ ಮಾಡಬಹುದು ಎನ್ನುತ್ತಾರೆ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸ್‌ ಇಲಾಖೆ.

ಪಾಲಿಕೆಗೂ ಲಾಭ:

ರಸ್ತೆಯಲ್ಲಿ ಮಾಲೀಕರಿಲ್ಲದೆ ನಿಂತಿರುವ ವಾಹನಗಳ ತೆರವು ಮಾಡಿ ಹರಾಜು ಮಾಡಿದರೆ ಅಥವಾ ಮಾಲೀಕರಿಗೆ ದಂಡ ವಿಧಿಸಿದರೆ ಮಹಾನಗರ ಪಾಲಿಕೆಗೂ ಉತ್ತಮ ಆದಾಯ ಬರುತ್ತದೆ. ಕೇವಲ ತೆರವು ಕಾರ್ಯಾಚರಣೆ ನಡೆಸದೆ ತನ್ನ ಆದಾಯ ವೃದ್ಧಿಗೂ ಪಾಲಿಕೆ ಮುಂದಾಗಬೇಕು ಎಂಬುದು ಸಾರ್ವಜನಿಕರು ಒತ್ತಾಯ.ರಸ್ತೆಯಲ್ಲಿ ಹಲವು ವರ್ಷಗಳಿಂದ ನಿಂತಿರುವ ಕಾರು ಸೇರಿದಂತೆ ಹಳೆ ವಾಹನಗಳ ತೆರವಿಗೆ ಮಹಾನಗರ ಪಾಲಿಕೆ ಹಾಗೂ ಪೊಲೀಸ್‌ ಇಲಾಖೆ ವತಿಯಿಂದ ಜಂಟಿ ಕಾರ್ಯಾಚರಣೆ ನಡೆಸಿ ಶೀಘ್ರದಲ್ಲಿಯೇ ತೆರವುಗೊಳಿಸಲಾಗುವುದು. ನಾಗರಿಕರು ಸಹ ರಸ್ತೆಯಲ್ಲಿ ವಾಹನ ನಿಲ್ಲಸದೆ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು.

ರವೀಶ್‌, ಡಿಸಿಪಿ, ಸಂಚಾರಿ ವಿಭಾಗ

ಪುಟ್‌ಪಾತ್‌ ಅತಿಕ್ರಮಣ ತೆರವು ಮಾಡಿದಂತೆ ಯಾರು ಮುಲಾಜಿಲ್ಲದೆ ಗ್ಯಾರೇಜ್‌ ಮುಂಭಾಗ ಹಾಗೂ ಅತಿಕ್ರಮಿಸಿ ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಇದರಿಂದ ಅಪಘಾತ ಪ್ರಕರಣವೂ ಕಡಿಮೆ ಆಗಲಿದೆ.

ನೀಲಕಂಠ ಬಿ. ಸಾರ್ವಜನಿಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಅಭಿನವ ಯಚ್ಚರ ಶ್ರೀಗಳ ಮೌನ ಅನುಷ್ಠಾನ ಮಂಗಲೋತ್ಸವ
ಲಕ್ಷ್ಮೇಶ್ವರದಲ್ಲಿ ಮಳೆಗಾಗಿ ಸೋಮೇಶ್ವರನಿಗೆ ಜಲಾಭಿಷೇಕ