ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ನೇರಳೆ ಮರದಹಳ್ಳಿ ಗ್ರಾಮದ ಸರ್ವೆ ನಂಬರ್ 103ರಲ್ಲಿನ ಮೀಸಲು ಅರಣ್ಯ ವ್ಯಾಪ್ತಿಯ ಖಾತೆದಾರರಾಗಿರುವ ರೈತರು ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಯಾವುದೇ ವ್ಯಕ್ತಿಗಳು ಅಡಚಣೆ ಮಾಡಬಾರದು ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.ಸೋಮವಾರ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲನೆ ನಡೆಸಿ ವಿವಿಧ ಪ್ರಕರಣಗಳ ಕುರಿತು ಚರ್ಚೆಸಿ ನಂತರ ಮಾತನಾಡಿದರು.
ಜಮೀನು ಜಂಟಿ ಸಮೀಕ್ಷೆ ನಡೆಸಿಖಾತೆದಾರ ರೈತರ ಜಮೀನು ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಯ ಒಳಗಡೆ ಇದ್ದಲ್ಲಿ ಅಂತಹ ಜಮೀನನ್ನು ಕಂದಾಯ ಮತ್ತು ಅರಣ್ಯ ಇಲಾಖೆಯ ಸಮಕ್ಷಮದಲ್ಲಿ ಜಂಟಿ ಸಮೀಕ್ಷೆ ನಡೆಸಿ ವರದಿ ಮಾಡಬೇಕು. ಇಂತಹ ಜಮೀನುಗಳಿಗೆ ಇರುವ ವಿವಾದಗಳು ಸರ್ಕಾರದ ಮಟ್ಟದಲ್ಲಿನ ತೀರ್ಮಾನದಂತೆ ಕ್ರಮ ಕೈಗೊಳ್ಳಲು ತೀರ್ಮಾಸಲಾಗಿದೆ. ಆದ್ದರಿಂದ ಇಂತಹ ಜಮೀನಿನಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ರೈತರು ಹೆಚ್ಚಿನ ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ. ತಮ್ಮ ಹೆಸರಿಗೆ ಎಷ್ಟು ಜಮೀನು ಮಂಜೂರಾಗಿರುತ್ತದೆ ಆ ಜಮೀನಿನಲ್ಲಿ ಮಾತ್ರ ಸ್ವಾಧೀನದಲ್ಲಿ ಇರಬೇಕು. ಅಕ್ಕ ಪಕ್ಕದ ಅರಣ್ಯದ ಜಮೀನನ್ನು ಒತ್ತುವರಿ ಮಾಡಬಾರದು ಎಂದು ಸೂಚಿಸಿದರು.ಗಂಗಾಕಲ್ಯಾಣ ಯೋಜನೆಯಡಿ ವಿವಿಧ ನಿಗಮಗಳಲ್ಲಿ ಮಂಜೂರಾಗಿರುವ ಕೊಳವೆ ಬಾವಿಗಳನ್ನು ಕೊರೆಯುವ ಕಾರ್ಯ ಚುರುಕುಗೊಂಡಿದೆ. ಕಳೆದ ತಿಂಗಳಲ್ಲಿ 70 ಕೊಳವೆ ಬಾವಿಗಳನ್ನು ಕೊರೆಯಲಾಗಿದೆ. ಈ ಕಾರ್ಯವನ್ನು ಹೀಗೆಯೇ ಮುಂದುವರಿಸಬೇಕು. 2016ರ ಸಾಲಿನಿಂದ ಕೊರೆಯಲು ಬಾಕಿ ಇರುವ ಕೊಳವೆ ಬಾವಿಗಳನ್ನು ಜೇಷ್ಠತೆಯ ಆಧಾರದ ಮೇಲೆ ಕೊರೆಯಲು ಕ್ರಮ ವಹಿಸಬೇಕು ಎಂದರು.
ಯೋಜನೆಗಳ ಅನುಷ್ಠಾನ ಮಾಡಿವಿವಿಧ ಯೋಜನೆಗಳಡಿ ಸರ್ಕಾರದಿಂದ ಮಂಜೂರಾಗಿರುವ ಸಾಲ ಸೌಲಭ್ಯಗಳನ್ನು ಬ್ಯಾಂಕ್ ಗಳಿಂದ ಜನರಿಗೆ ತಲುಪಿಸಬೇಕು. ಈ ಕುರಿತು ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ಮುಖಾಂತರ ಪರಿಣಾಮಕಾರಿಯಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಮುಂದಾಗಬೇಕು, ಬ್ಯಾಂಕ್ ಗಳಿಂದ ಅಡಚಣೆಗಳಿದ್ದರೆ ಈ ಕುರಿತು ತಾಲ್ಲೂಕುವಾರು ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ನಿವೇಶನರಹಿತರಿಗೆ ನಿವೇಶನ
ಸಭೆಯಲ್ಲಿ ವಿವಿಧ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯ ನಿವೇಶನ ರಹಿತರಿಗೆ ನಿವೇಶನ ನೀಡುವ ಬಗ್ಗೆ, ಸ್ಮಶಾನಕ್ಕೆ ಸಂಬಂಧಪಟ್ಟ ವಿವಾದಗಳಿಗೆ ಪರಿಹಾರ, ವಿವಿಧ ಸಮುದಾಯ ಭವನಗಳ ನಿರ್ಮಾಣದ ಬಗ್ಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾಯ್ದೆಯಡಿ ದಾಖಲಾಗಿರುವ ದೌರ್ಜನ್ಯ ಪ್ರಕರಣಗಳ ಬಗ್ಗೆ ಚರ್ಚಿಸಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಯಿತು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಅಪರ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತೇಜಾನಂದರೆಡ್ಡಿ, ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.