ವನ್ಯಜೀವಿ ಸಂರಕ್ಷಣೆಗೆ ಅರಣ್ಯ- ರೈಲ್ವೆ ಇಲಾಖೆಗಳ ಜಂಟಿ ಕಾರ್ಯ

KannadaprabhaNewsNetwork |  
Published : Jun 20, 2025, 12:34 AM ISTUpdated : Jun 20, 2025, 12:12 PM IST
ತಿಳಿವಳಿಕ | Kannada Prabha

ಸಾರಾಂಶ

ರೈಲು ಹಳಿಗಳ ಮಧ್ಯೆ ಪ್ರಾಣಿಗಳು ಸಾವನ್ನಪ್ಪಬಾರದೆಂಬ ಕಾರಣಕ್ಕೆ ರೈಲ್ವೆ ವಲಯವು ಅರಣ್ಯ ಇಲಾಖೆಯೊಂದಿಗೆ ಸಭೆ ನಡೆಸಿದೆ. 2 ಇಲಾಖೆ ಸೇರಿಕೊಂಡು ಹಲವು ಕ್ರಮ ಕೈಗೊಂಡಿವೆ. ಆನೆ, ಚೀತಾ, ಕಾಡುಹಂದಿ, ಚಿರತೆ, ಝಿರಾಫೆ ಸೇರಿದಂತೆ ವನ್ಯಜೀವಿಗಳು ಎಲ್ಲೆಲ್ಲಿ ಸಂಚರಿಸುತ್ತವೆ ಎಂದು ಜಾಗೆಗಳನ್ನು ಗುರುತಿಸಿವೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಜನ ಜಾನುವಾರು ಸುರಕ್ಷತೆಗಾಗಿ ತಡೆಬೇಲಿ ಹಾಕಿದ್ದ ನೈರುತ್ಯ ರೈಲ್ವೆಯು, ಇದೀಗ ವನ್ಯಜೀವಿಗಳ ರಕ್ಷಣೆಗೆ ಅರಣ್ಯ ಇಲಾಖೆ ಸಾಥ್‌ ಪಡೆದು ಕಾರ್ಯಾಚರಣೆ ನಡೆಸುತ್ತಿದೆ. ಇದು ಪರಿಸರ ಪ್ರೇಮಿಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸೋಲಾರ್‌ ಫೆನ್ಸಿಂಗ್‌, ಹನಿಬೀ ಸೌಂಡ್‌ ಸ್ಪೀಕರ್‌, ಅಂಡರ್‌ ಪಾಸ್‌, ಸೈನೇಜ್‌ ಬೋರ್ಡ್‌ ಹೀಗೆ ಹಲವು ಕ್ರಮ ಕೈಗೊಂಡಿದೆ.

ನೈರುತ್ಯ ರೈಲ್ವೆ ವಲಯದ ವ್ಯಾಪ್ತಿಯಲ್ಲಿ ಕರ್ನಾಟಕ, ಗೋವಾ, ಆಂಧ್ರ ಸೇರಿದಂತೆ ನಾಲ್ಕು ರಾಜ್ಯಗಳು ಬರುತ್ತಿದ್ದು, ಅರಣ್ಯ ಪ್ರದೇಶ ಬರುವಲ್ಲಿ ಈ ಕ್ರಮ ಕೈಗೊಂಡಿದೆ. ಕಾಡಿನ ಮಧ್ಯೆವೇ ರೈಲು ಹಳಿಗಳಲ್ಲಿ ಹತ್ತಾರು ವನ್ಯಜೀವಿಗಳು ಅಡ್ಡ ಬಂದು ಮೃತಪಟ್ಟಿದ್ದುಂಟು. ಹಾಗೆ ನೋಡಿದರೆ ರೈಲ್ವೆ ಇಲಾಖೆಯಲ್ಲಿ ವರದಿಯಾಗಿರುವಂತೆ 2021ರಿಂದ ಈವರೆಗೆ ಒಂದು ಆನೆ, 3 ಚಿರತೆ ಮೃತಪಟ್ಟಿವೆ. ಸಕಲೇಶಪುರ- ಬಲ್ಲುಪೇಟ ಮಧ್ಯೆ ಆನೆ, ಮಕಲಿದುರ್ಗ- ತೊಂಡೆಬಾವಿ, ಕ್ಯಾತಸಂಧ್ರ- ಹಿರೇಹಳ್ಳಿ ಹಾಗೂ ಪಾಪಿನಾಯಕನಹಳ್ಳಿ- ಬಯಲುವದ್ದಿಗೇರಿ ಮಧ್ಯೆ ತಲಾ ಒಂದು ಚಿರತೆ ರೈಲಿಗೆ ಸಿಲುಕಿ ಮೃತಪಟ್ಟಿವೆ. ಇವು ವರದಿಯಾಗಿರುವುದರಿಂದ ಬೆಳಕಿಗೆ ಬಂದಿವೆ. ಆದರೆ, ಹತ್ತು ಹಲವು ಪ್ರಾಣಿಗಳು ಬಂದು ಮೃತಪಟ್ಟಿವೆಯಂತೆ. ಇವು ವರದಿಯಾಗಿಲ್ಲವಂತೆ. ಹೀಗಾಗಿ ಇವುಗಳ ನಿಖರ ಮಾಹಿತಿ ಲಭ್ಯವಾಗಲ್ಲ ಎಂಬುದು ರೈಲ್ವೆ ಇಲಾಖೆ ಅಂಬೋಣ.

ಜಂಟಿ ಕಾರ್ಯಾಚರಣೆ: ರೈಲು ಹಳಿಗಳ ಮಧ್ಯೆ ಪ್ರಾಣಿಗಳು ಸಾವನ್ನಪ್ಪಬಾರದೆಂಬ ಕಾರಣಕ್ಕೆ ರೈಲ್ವೆ ವಲಯವು ಅರಣ್ಯ ಇಲಾಖೆಯೊಂದಿಗೆ ಸಭೆ ನಡೆಸಿದೆ. 2 ಇಲಾಖೆ ಸೇರಿಕೊಂಡು ಹಲವು ಕ್ರಮ ಕೈಗೊಂಡಿವೆ. ಆನೆ, ಚೀತಾ, ಕಾಡುಹಂದಿ, ಚಿರತೆ, ಝಿರಾಫೆ ಸೇರಿದಂತೆ ವನ್ಯಜೀವಿಗಳು ಎಲ್ಲೆಲ್ಲಿ ಸಂಚರಿಸುತ್ತವೆ ಎಂದು ಜಾಗೆಗಳನ್ನು ಗುರುತಿಸಿವೆ. ಅಲ್ಲಿ ಸೈನೇಜ್‌ಬೋರ್ಡ್‌, ಸೋಲಾರ್‌ ಫೆನ್ಸಿಂಗ್‌, ಬ್ಯಾರಿಕೇಡಿಂಗ್‌, ಹಮ್ಮಿಂಗ್‌ ಸೌಂಡ್‌ ಸ್ಪೀಕರ್‌, ಅಂಡರ್‌ಪಾಸ್‌ ಮಾಡಿದೆ. ವನ್ಯಜೀವಿಗಳ ಸಂಚಾರದ ಬಗ್ಗೆ ಕಾಲಕಾಲಕ್ಕೆ ರೈಲ್ವೆ ಕಂಟ್ರೋಲ್‌ ರೂಮಿಗೆ ಅರಣ್ಯ ಇಲಾಖೆಯಿಂದ ಮಾಹಿತಿ ರವಾನೆ ಮಾಡಲಾಗುತ್ತಿದೆ.

ಜಾಗೆಗಳು ಯಾವ್ಯಾವು: ನೈರುತ್ಯ ರೈಲ್ವೆ ವ್ಯಾಪ್ತಿಯ ಹುಬ್ಬಳ್ಳಿ- ಲೋಂಡಾ ಮಾರ್ಗ ಮಧ್ಯೆ 5 ಸ್ಥಳ, ಲೋಂಡಾ- ಮಿರಜ್‌-2, ಬೆಂಗಳೂರು- ಜೋಲಾರ್‌ಪೇಟೆ- 1, ಬೆಂಗಳೂರು- ಸೇಲಂ- 1, ಬಲ್ಲುಪೇಟೆ- ಸಕಲೇಶಪುರ- 1, ಯಡಕುಮೇರಿ- ಶ್ರೀವಾಗಿಲು- 1, ರಾಯಕೊಟ್ಟಾಯ್‌- ಕಿಲಮಂಗಲಂ -7, ಹಾಸನ- ಮಂಗಳೂರ- 2 ಸೇರಿದಂತೆ ವಿವಿಧ ಪ್ರದೇಶಗಳನ್ನು ವನ್ಯಜೀವಿಗಳ ಸಂಚಾರದ ಪ್ರದೇಶಗಳೆಂದು ಗುರುತಿಸಲಾಗಿದೆ.

ಸೋಲಾರ್‌ ಫೆನ್ಸಿಂಗ್‌: ಅತಿ ಹೆಚ್ಚು ವನ್ಯಜೀವಿ ಸಂಚಾರವಿದ್ದರೆ ಸೋಲಾರ್‌ ಫೆನ್ಸಿಂಗ್‌, ಸ್ವಲ್ಪ ಕಡಿಮೆ ಇದ್ದರೆ ಬ್ಯಾರಿಕೇಡಿಂಗ್‌ ಮಾಡಲಾಗುತ್ತಿದೆ. ಹುಬ್ಬಳ್ಳಿ-ಲೋಂಡಾ ಮಧ್ಯೆ 3 ಕಡೆಗಳಲ್ಲಿ, ರಾಯಕೊಟ್ಟಾಯ- ಕೀಲಮಂಗಲಂನ 7 ಭಾಗಗಳಲ್ಲಿ ಈಗಾಗಲೇ ಸೋಲಾರ್‌ ಫೆನ್ಸಿಂಗ್‌ ಮಾಡಲಾಗಿದೆ. ಇನ್ನುಳಿದೆಡೆ ಫೆನ್ಸಿಂಗ್‌ ಮಾಡುವ ಕಾರ್ಯ ಭರದಿಂದ ಸಾಗಿದೆ.

ಜೇನಿನ ಜೇಂಕಾರ್‌: ಜೇನುಹುಳುವಿನ ಜೇಂಕಾರದ (ಹನಿಬೀ ಸೌಂಡ್‌) ಸ್ಪೀಕರ್‌ಗಳನ್ನು ಅಳವಡಿಸಲಾಗುತ್ತಿದೆ. ಹುಬ್ಬಳ್ಳಿ- ಲೋಂಡಾ, ಲೋಂಡಾ- ಮೀರಜ್‌, ಹಾಸನ- ಮಂಗಳೂರ ಭಾಗಗಳಲ್ಲಿ ಒಟ್ಟು 8-10 ಕಡೆಗಳಲ್ಲಿ ಜೇನುಹುಳುವಿನ ಜೇಂಕಾರ್‌ ಸ್ಪೀಕರ್‌ ಅಳವಡಿಸಲಾಗಿದೆ. ನಿರಂತರವಾಗಿ ಜೇನಿನ ಜೇಂಕಾರ್‌ದ ಶಬ್ದ ಬರುತ್ತಲೇ ಇರುವುದರಿಂದ ವನ್ಯಜೀವಿಗಳು ಆ ಶಬ್ದಕ್ಕೆ ಹೆದರಿ ಬರುವುದಿಲ್ಲವಂತೆ. ಇದಲ್ಲದೇ, ವನ್ಯಜೀವಿಗಳ ಸಂಚಾರದ ಬಗ್ಗೆ ಎಚ್ಚರಿಕೆಯ ಸೂಚನಾ ಫಲಕ, ಕೆಲವೆಡೆ ಹಾರ್ನ್‌ ಮಾಡುತ್ತಾ ಸಾಗಿ ಎಂಬ ಸೂಚನೆಯ ಹಮ್ಮಿಂಗ್‌ ಬೋರ್ಡ್‌, ಸ್ಪೀಡ್‌ ಕಂಟ್ರೋಲ್‌ ಬೋರ್ಡ್‌ಗಳನ್ನು ಅಳವಡಿಸಲಾಗಿದೆ. ವನ್ಯಜೀವಿಗಳು ಸಲೀಸಾಗಿ ಸಂಚರಿಸಲು ಹಲವೆಡೆ ಅಂಡರ್‌ ಪಾಸ್‌ (ಕೆಳಸೇತುವೆ) ನಿರ್ಮಾಣ ಕೂಡ ಮಾಡಲಾಗಿದೆ. ರೈಲು ಹಳಿಗಳ ಅಕ್ಕಪಕ್ಕಗಳಲ್ಲಿ ಬೆಳೆದ ಕಸ ಕಡ್ಡಿಗಳನ್ನು ತಕ್ಷಣವೇ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಹೀಗೆ ವನ್ಯಜೀವಿಗಳ ಸಂರಕ್ಷಣೆಗೆ ಅರಣ್ಯ ಇಲಾಖೆಯೊಂದಿಗೆ ಸೇರಿ ರೈಲ್ವೆ ಇಲಾಖೆ ಪಣ ತೊಟ್ಟು ಹತ್ತು ಹಲವು ಕ್ರಮ ಕೈಗೊಂಡಿರುವುದು ಪರಿಸರ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿರುವುದಂತೂ ಸತ್ಯ.

ವನ್ಯಜೀವಿ ಸಂರಕ್ಷಣೆಗೆ ಅರಣ್ಯ ಇಲಾಖೆಯೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸೋಲಾರ್‌ ಫೆನ್ಸಿಂಗ್‌, ಹನಿ ಬೀ ಸೌಂಡ್‌ ಸ್ಪೀಕರ್‌, ಅಂಡರ್‌ ಪಾಸ್‌ ಮಾಡಲಾಗುತ್ತಿದೆ. ಹಳಿಗೆ ವನ್ಯಜೀವಿಗಳು ಸಿಲುಕಿ ಸಾವಾಗಬಾರದೆಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕಾರ್ಯ ಇದೀಗ ಶುರುವಾಗಿದೆ ಎಂದು ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ